ಜೆಡಿಎಸ್ ಶಾಸಕರ ರಾಜೀನಾಮೆ ಅಂಗೀಕಾರ

Update: 2018-01-23 14:27 GMT

ಬೆಂಗಳೂರು, ಜ. 23: ರಾಯಚೂರು ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಶಿವರಾಜ್ ಪಾಟೀಲ್ ಹಾಗೂ ಲಿಂಗಸುಗೂರು ಕ್ಷೇತ್ರದ ಮಾನಪ್ಪ ವಜ್ಜಲ್ ಅವರ ರಾಜೀನಾಮೆಯನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಅಂಗೀಕಾರ ಮಾಡಿದ್ದಾರೆ ಎಂದು ವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.

ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಇಬ್ಬರು ಶಾಸಕರು ಪಕ್ಷದಲ್ಲಿನ ಆಂತರೀಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮನನೊಂದು ಜ.18ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರ ಬೆನ್ನಲ್ಲೆ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಆದರೆ, ರಾಜೀನಾಮೆ ಅಂಗೀಕಾರಕ್ಕೆ ಮೊದಲೆ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರಲಿದೆ. ಆದುದರಿಂದ ಇಬ್ಬರು ಶಾಸಕನ್ನು ಅನರ್ಹಗೊಳಿಸಬೇಕು. ಜತೆಗೆ ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕೆಂದು ಜೆಡಿಎಸ್ ಒತ್ತಾಯಿಸಿತ್ತು.

ಈ ಮಧ್ಯೆ ವಿಧಾನಸಭೆ ಸ್ಪೀಕರ್ ಕೋಳಿವಾಡ ಅವರು ಶಾಸಕರಾದ ಶಿವರಾಜ್ ಪಾಟೀಲ್, ಮಾನಪ್ಪ ವಜ್ಜಲ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ. ಹೀಗಾಗಿ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಗಿದ್ದ ಅಡ್ಡಿ ನಿವಾರಣೆಯಾಗಿದೆ. ಅಲ್ಲದೆ, ಉಭಯ ಶಾಸಕರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News