ಖಾದಿ ಉತ್ಸವದಲ್ಲಿ 60 ಕೋಟಿ ರೂ. ವಹಿವಾಟು ನಿರೀಕ್ಷೆ: ಯಲವನಹಳ್ಳಿ ರಮೇಶ

Update: 2018-01-23 14:31 GMT

ಬೆಂಗಳೂರು, ಜ. 23: ಖಾದಿ ಉತ್ಪನ್ನಗಳತ್ತ ಯುವಜನರನ್ನು ಆಕರ್ಷಿಸುವ ದೃಷ್ಟಿಯಿಂದ ಇಲ್ಲಿನ ಸ್ವಾತಂತ್ರ ಉದ್ಯಾನವನದಲ್ಲಿ ಒಂದು ತಿಂಗಳ ‘ಖಾದಿ ಉತ್ಸವ’ ಏರ್ಪಡಿಸಿದ್ದು, 60 ಕೋಟಿ ರೂ.ವಹಿವಾಟು ಆಗುವ ನಿರೀಕ್ಷೆ ಇದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲವನಹಳ್ಳಿ ರಮೇಶ ತಿಳಿಸಿದ್ದಾರೆ.

ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016-17ನೆ ಸಾಲಿನಲ್ಲಿ 31ಕೋಟಿ ರೂ.ವಹಿವಾಟು ನಡೆದಿದ್ದು, ಈ ವರ್ಷ ಅದು ದುಪ್ಪಟ್ಟು ಆಗುವ ನಿರೀಕ್ಷೆ ಇದೆ. ಜ.2ರಿಂದ 31ರ ವರೆಗೆ ಉತ್ಸವ ನಡೆಯಲಿದ್ದು, ಈ ವರೆಗೆ 77 ಸಾವಿರ ಮಂದಿ ಖಾದಿ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ್ದು, 30 ಕೋಟಿ ರೂ.ಗಳ ವಹಿವಾಟು ನಡೆದಿದೆ ಎಂದರು.

ಈ ಉತ್ಸವವು ಜ.31ರ ವರೆಗೆ ನಡೆಯಲಿದ್ದು, ಸಾರ್ವಜನಿಕರು ಉತ್ಸವದ ಯಶಸ್ವಿಗೆ ಸಹಕರಿಸಬೇಕು. ಈ ಉದ್ದಿಮೆಯಡಿ 146 ಖಾದಿ ಸಂಸ್ಥೆಗಳು ಕೆಲಸ ಮಾಡುತ್ತಿದ್ದು, 29 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ ಹಾಗೂ ಈ ಕ್ಷೇತ್ರದಲ್ಲಿ ಶೇ.60ರಷ್ಟು ಮಹಿಳೆಯರೇ ತೊಡಗಿಕೊಂಡಿದ್ದಾರೆ ಎಂದರು.

ಪಟ್ಟಣ ಪ್ರದೇಶದಲ್ಲಿ ಖಾದಿ ಭಂಡಾರ ಸ್ಥಾಪಿಸಲು 10 ಸಾವಿರ ರೂ. ಹಾಗೂ ನಗರ ಪ್ರದೇಶಗಳಲ್ಲಿ ಖಾದಿ ಭಂಡಾರ ತೆರೆಯಲು 20 ಸಾವಿರ ರೂ.ಪ್ರೋತ್ಸಾಹಧನ ನೀಡಲಾಗುವುದು. ಇಡೀ ದೇಶದಲ್ಲಿ ಕರ್ನಾಟಕದ ಖಾದಿಗೆ ಅತ್ಯುತ್ತಮ ಖಾದಿ ಮಂಡಳಿಯೆಂದು ರಾಷ್ಟ್ರಪ್ರಶಸ್ತಿ ಬಂದಿದೆ ಎಂದರು.

ಮಂಡಳಿಯ ಸಿಇಓ ಜಯವಿಭವ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ 116 ಖಾದಿ ಮತ್ತು ಗ್ರಾಮ ಕೈಗಾರಿಕೆ ಮಳಿಗೆ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 203 ಮಳಿಗೆಗಳು ಉತ್ಸವದಲ್ಲಿ ಭಾಗವಹಿಸಿವೆ. ಶೇ. 20 ರಿಂದ ಶೇ.35 ರಷ್ಟು ರಿಯಾಯಿತಿ ಇದೆ ಎಂದರು.


‘ಖಾದಿ ಉತ್ಪನ್ನಗಳತ್ತ ಯುವಜನರನ್ನು ಆಕರ್ಷಿಸುವ ದೃಷ್ಟಿಯಿಂದ ನಮ್ಮ ಮೆಟ್ರೋ, ನಮ್ಮ ಬೆಂಗಳೂರು ಮಾದರಿಯಲ್ಲೆ ‘ನಮ್ಮ ಖಾದಿ’ ಬ್ರಾಂಡಿಂಗ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇನ್ನೂ ನಾಲ್ಕೈದು ತಿಂಗಳಲ್ಲೆ ‘ನಮ್ಮ ಖಾದಿ’ ಬ್ರಾಂಡ್ ಆಗಲಿದೆ’
-ಜಯವಿಭವ ಸ್ವಾಮಿ, ಸಿಇಓ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News