ಸಚಿವ ಜಾರ್ಜ್ ಬೇಜಬ್ದಾರಿ ಹೇಳಿಕೆ: ಆಪ್ ಆರೋಪ

Update: 2018-01-23 14:59 GMT

ಬೆಂಗಳೂರು, ಜ.23: ನಗರದ ಬೆಳ್ಳಂದೂರು ಕೆರೆಗೆ ಬೆಂಕಿ ಹತ್ತಿಕೊಂಡಿರುವ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ‘ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆಂದು’ ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆಂದು ಆಮ್ ಆದ್ಮಿ ಪಕ್ಷದ ವಕ್ತಾರ ಶಿವಕುಮಾರ್ ಚಂಗಲರಾಯ ಖಂಡಿಸಿದ್ದಾರೆ.

ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿ ಹಚ್ಚಿದ್ದರೆ ಅವರನ್ನು ಬಂಧಿಸಿ ಜೈಲಿಗಟ್ಟುವುದು ಸರಕಾರದ ಕೆಲಸ. ಆದರೆ, ಸಚಿವರು ಯಾರೋ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಆರೋಪಿಗಳು ಯಾರೆಂದು ಮಾಹಿತಿಯಿದ್ದರೂ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎಂದು ದೂರಿದರು.

ನಗರದಲ್ಲಿ ಕೆರೆ ಒತ್ತುವರಿ, ಅವೈಜ್ಞಾನಿಕ ಕೆರೆ ನಿರ್ವಹಣೆ, ಭೂ ಮಾಫಿಯಾ ಹೆಚ್ಚುತ್ತಿದೆ. ಇದನ್ನು ತಡೆಯುವಲ್ಲಿ ಸರಕಾರ ವಿಫಲವಾಗಿದೆ. ನಾವಿಂದು ಕುಡಿಯುವ ನೀರಿಗೆ ವಿಷ ಸೇರಿಕೊಂಡಿದೆ. ಬೆಳ್ಳಂದೂರು ಕೆರೆಯ ಕಳಪೆ ನಿರ್ವಹಣೆಯಿಂದಾಗಿ ಸುತ್ತಮುತ್ತಲ ಪ್ರದೇಶಗಳ ಅಂತರ್ಜಲಕ್ಕೆ ವಿಷಕಾರಿ ರಾಸಾಯನಿಕಗಳು ಸೇರಿವೆ. ಅಲ್ಲದೆ, ನಾವಿಂದು ಕುಡಿಯುವ ನೀರಿನಲ್ಲಿ ಶೇ.20ರಷ್ಟು ಕಲುಷಿತ ನೀರಿನ ಸೇರಿದೆ ಎಂದರು.

ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮಾಲ್ ಹಾಗೂ ಇನ್ನಿತರ ಕಟ್ಟಡಗಳನ್ನು ನಿರ್ದಯವಾಗಿ ತೆರವು ಮಾಡಿ, ಬಲಾಢ್ಯರಿಗೆ ಪಾಠ ಕಲಿಸಬೇಕು ಹಾಗೂ ಬಡಜನತೆಗೆ ಪರ್ಯಾಯ ಪರಿಹಾರ ಕಲ್ಪಿಸಿ ಕೆರೆಗಳ ಮರು ನಿರ್ಮಾಣ ಮಾಡಬೇಕು. ಇದನ್ನು ಮಾಡಲು ಬಿಡಿಎ ಬಳಿ ಹಣ ಇಲ್ಲ ಎಂಬ ನೆಪ ಹೇಳಿ ನುಣಿಚಿಕೊಳ್ಳುವ ಬದಲಿಗೆ, ಅನಧಿಕೃತ ಫ್ಲೆಕ್ಸ್ ಮತ್ತು ಹೋರ್ಡಿಂಗ್ ತೆರವುಗೊಳಿಸಿ ದಂಡ ವಸೂಲಿ ಮಾಡಬೇಕು. ಅದರಿಂದ ಸಂಗ್ರವಾಗುವ ತೆರಿಗೆ ಹಣದಲ್ಲಿ ಅಭಿವೃದ್ಧಿ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.

ನಗರದ ಎಲ್ಲ ಕೆರೆಗಳನ್ನು ಮರು ನಿರ್ಮಾಣ ಮಾಡಿ, ಕೆರೆಗಳ ಸುತ್ತಲೂ ತಂತಿ ಬೇಲಿ ನಿರ್ಮಿಸಬೇಕು. ಬೆಂಗಳೂರಿನಲ್ಲಿ ಬಿದ್ದ ಮಳೆಯ ನೀರೆಲ್ಲಾ ಕೆರೆಗಳನ್ನು ತಲುಪುವಂತೆ ಮಾಡಬೇಕು. ಬಿಡಿಎ ಪರಿಷ್ಕೃತ ನಗರ ಮಹಾ ಯೋಜನೆ 2031ರ ಕರಡಿಗೆ ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ವಿಸ್ತರಿಸಬೇಕು. ನಗರದ ಮೂರು ಜನ ಸಂಸದರು, 28 ಶಾಸಕರು ಹಾಗೂ 198 ಬಿಬಿಎಂಪಿ ಸದಸ್ಯರ ಉಪಸ್ಥಿತಿಯಲ್ಲಿ ನಾಗರಿಕರೊಂದಿಗೆ ಕ್ರಿಯಾ ಯೋಜನೆ ಕುರಿತಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News