ಪ್ರಾಮುಖ್ಯತೆ ಕಳೆದುಕೊಳ್ಳುತ್ತಿರುವ ಜಾಗತೀಕರಣ: ಡಾವೋಸ್ ನಲ್ಲಿ ಪ್ರಧಾನಿ ಮೋದಿ

Update: 2018-01-23 15:02 GMT

ಡಾವೋಸ್, ಜ.23: ರಕ್ಷಣಾವಾದವು ಪ್ರಾಬಲ್ಯ ಹೊಂದುತ್ತಿದ್ದು, ಜಾಗತೀಕರಣವು ತನ್ನ ಹೊಳಪನ್ನು ಕಳೆದುಕೊಳ್ಳುತ್ತಿದೆ. ಆದರೆ ಭಾರತವು ವ್ಯವಹಾರಕ್ಕೆ ಸದಾ ಸಿದ್ಧವಾಗಿರುತ್ತದೆ ಎಂದು ಮಂಗಳವಾರದಂದು ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದರು.

ಸ್ವಿಝರ್‌ಲ್ಯಾಂಡ್‌ನ ಡಾವೋಸ್ ನಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ 21 ವರ್ಷಗಳಲ್ಲಿ ಮೊದಲ ಬಾರಿ ಭಾಗವಹಿಸುತ್ತಿರುವ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರರಾಗಿರುವ ಮೋದಿ ತಮ್ಮ ಜೊತೆ ದೊಡ್ಡ ಸಂಖ್ಯೆಯಲ್ಲಿ ಸರಕಾರಿ ಮತ್ತು ಉದ್ಯಮರಂಗದ ಪ್ರತಿನಿಧಿಗಳನ್ನು ಕರೆದೊಯ್ದಿದ್ದಾರೆ.

ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಶಕ್ತಿಯಾಗಿದೆ ಮತ್ತು ಜಾಗತಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ತೋರಿಸುವ ಉದ್ದೇಶವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ ಎಂದು ವಿಮರ್ಶಿಸಲಾಗುತ್ತಿದೆ. ವ್ಯವಹಾರಗಳಲ್ಲಿ ತೊಡಕು ಹೆಚ್ಚಾಗುತ್ತಿರುವ ಮೋದಿ ಹೇಳಿಕೆಯು ಈ ವಾರದ ಕೊನೆಯಲ್ಲಿ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಮಾಡಲಿರುವ ಭಾಷಣದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಜಗತ್ತಿನ ಅತ್ಯಂತ ದೊಡ್ಡ ಆರ್ಥಿಕತೆಯ ಅಧ್ಯಕ್ಷರಾಗಿರುವ ಟ್ರಂಪ್ ಆಂತರಿಕ ಲಾಭವನ್ನು ಹೊಂದಿರುವ ಯೋಜನೆಗಳನ್ನ ರೂಪಿಸುವಲ್ಲಿ ನಿಸ್ಸೀಮರಾಗಿದ್ದಾರೆ ಎಂಬುದು ವಿಶ್ವನಾಯಕರ ಅಭಿಪ್ರಾಯವಾಗಿದೆ.

ಜಾಗತೀಕರಣದ ಬದಲಾಗಿ ರಕ್ಷಣಾವಾದದ ಶಕ್ತಿಯು ಮೇಲಾಗುತ್ತಿದೆ. ಅವರು ಕೇವಲ ಜಾಗತೀಕರಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಯಸುತ್ತಿಲ್ಲ. ಜೊತೆಗೆ ಜಾಗತೀಕರಣ ಸ್ವಾಭಾವಿಕ ಹರಿವನ್ನೂ ಬದಲಾಯಿಸಲು ಯತ್ನಿಸುತ್ತಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ. ಗಡಿಯಾಚೆಗಿನ ಆರ್ಥಿಕ ಹೂಡಿಕೆಯು ವೇಗವನ್ನು ಕಳೆದುಕೊಂಡಿದೆ ಮತ್ತು ಜಾಗತಿಕ ಪೂರೈಕೆ ಸರಪಳಿಯ ವಿಸ್ತರಣೆಯೂ ನಿಧಾನವಾಗುತ್ತಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಟ್ರಂಪ್ ‘ಅಮೆರಿಕ ಫಸ್ಟ್‌’ ಎಂಬ ನಿಯಮದ ಮೂಲಕ ಅಮೆರಿಕದ ಹೂಡಿಕೆದಾರರು ಸ್ವದೇಶದಲ್ಲೇ ಬಂಡವಾಳ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸಿ ಸಾಗರೋತ್ತರ ಬಂಡವಾಳ ಹೂಡಿಕೆಗೆ ಹಿನ್ನಡೆಯನ್ನುಂಟಾಗುವಂತೆ ಮಾಡಿದ್ದಾರೆ. ಇದರಿಂದಾಗಿ ವಿದೇಶಿ ಹೂಡಿಕೆಯನ್ನೇ ನೆಚ್ಚಿಕೊಂಡಿರುವ ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಬೆಳವಣಿಗೆಗೆ ತೀವ್ರ ಹಿನ್ನಡೆಯುಂಟಾಗುತ್ತಿದೆ. 2016ರ ಚುನಾವಣಾ ಅಭಿಯಾನದ ಸಮಯದಲ್ಲಿ ಟ್ರಂಪ್, ಯುಎಸ್ ಕಂಪೆನಿಗಳು ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮೆಕ್ಸಿಕೊ ಹಾಗೂ ಇತರ ದೇಶಗಳಲ್ಲಿ ತಮ್ಮ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಅಮೆರಿಕನ್ನರಿಗೆ ಉದ್ಯೋಗವಿಲ್ಲದಂತೆ ಮಾಡುವಲ್ಲಿ ಜಾಗತೀಕರಣದ ಬಹುದೊಡ್ಡ ಪಾತ್ರವಿದೆ ಎಂದು ದೂರಿದ್ದರು. ಶುಕ್ರವಾರದಂದು ಅವರು ವಿಶ್ವ ಆರ್ಥಿಕ ವೇದಿಕೆಯಲ್ಲಿ ಈ ಬಗ್ಗೆಯೇ ಮಾತನಾಡುವ ನಿರೀಕ್ಷೆಯಿದೆ.

ಹವಾಮಾನ ವೈಪರಿತ್ಯವು ಜಗತ್ತಿಗೆ ದೊಡ್ಡ ಅಪಾಯವಾಗಿದ್ದರೂ ಅದನ್ನು ನಿಯಂತ್ರಿಸುವಲ್ಲಿ ಜಗತ್ತು ವಿಫಲವಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಎಲ್ಲರೂ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಬಯಸುತ್ತಾರೆ. ಆದರೆ ಶ್ರೀಮಂತ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನೀಡಿ ಸಹಕರಿಸಲು ಸಿದ್ಧವಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿದರು.

ಇಂಗಾಲ ಹೊರಸೂಸುವಿಕೆಯ ವಿಷಯದಲ್ಲಿ ಡೊನಾಲ್ಡ್ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿದ್ದರೂ ಜಗತ್ತಿನ ಅತ್ಯಂತ, ಶೀಘ್ರವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಮತ್ತು ಮಾಲಿನ್ಯಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿರುವ ಭಾರತವು ಪರಿಸರವನ್ನು ಸ್ವಚ್ಛಗೊಳಿಸುವ ತನ್ನ ಬದ್ಧತೆಗೆ ತಕ್ಕಂತೆ ನಡೆದುಕೊಳ್ಳಲು ಉತ್ಸುಕವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News