ಹಾಲಪ್ಪ ವಿರುದ್ಧದ ಎಫ್‌ಐಆರ್ ರದ್ದುಪಡಿಸಿದ ಹೈಕೋರ್ಟ್

Update: 2018-01-23 15:04 GMT

ಬೆಂಗಳೂರು, ಜ.23: ಕಳೆದ ವಿಧಾನಸಭೆ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣ ಸಂಬಂಧ ಮಾಜಿ ಸಚಿವ ಹರತಾಳು ಹಾಲಪ್ಪ ವಿರುದ್ಧ ಶಿವಮೊಗ್ಗದ ಸಾಗರ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಹಾಗೂ ದೋಷಾರೋಪ ಪಟ್ಟಿಯನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.

ಪ್ರಕರಣದ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ಅಧೀನ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಹರತಾಳು ಹಾಲಪ್ಪ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಹಾಗೆಯೇ, ಪ್ರಕರಣದ ಸಹ ಆರೋಪಿಗಳಾದ ಎಚ್.ಕೆ.ಪಾಂಡುರಂಗ ಹಾಗೂ ಅಣ್ಣಪ್ಪ ವಿರುದ್ಧ ಎಫ್‌ಐಆರ್ ಅನ್ನು ರದ್ದುಪಡಿಸಲಾಗಿದೆ.

ಪ್ರಕರಣವೇನು: 2013ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಗೆ ಕೆಜೆಪಿಯಿಂದ ಶಿವಮೊಗ್ಗದ ಸೊರಬ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಹರತಾಳು ಹಾಲಪ್ಪ ಸ್ಪರ್ಧಿಸಿದ್ದರು. 2013ರ ಎ.6ರಂದು ಸೊರಬ ವ್ಯಾಪ್ತಿಗೆ ಸೇರಿದ ಕುಗ್ವೆ ಗ್ರಾಮದಿಂದ ತಾಳಗುಪ್ಪದವರೆಗೆ ಚುನಾವಣಾಧಿಕಾರಿಯ ಅನುಮತಿ ಪಡೆಯದೆ ಕೆಜೆಪಿ ಚಿಣ್ಹೆ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (ಕೆಜೆಪಿ ಅಧ್ಯಕ್ಷರಾಗಿದ್ದ) ಅವರ ಭಾವಚಿತ್ರವಿರುವ ಬಾವುಟಗಳನ್ನು ಕಾರ್ಯಕರ್ತರು ಸುಮಾರು 500 ಬೈಕ್ ಹಾಗೂ ಹಲವು ಕಾರಿನ ಮೇಲೆ ಹಾಕಿಕೊಂಡು ರ್ಯಾಲಿ ನಡೆಸಲಾಗಿತ್ತು. ರ್ಯಾಲಿಯಲ್ಲಿ ಹಾಲಪ್ಪ ಭಾಗವಹಿಸಿದ್ದರು. ಇದರಿಂದ ಚುನವಣಾಧಿಕಾರಿಯಾಗಿದ್ದ ಎನ್.ಡಿ.ವೆಂಕಟಗಿರಿ ಸಾಗರ ಠಾಣೆಯಲ್ಲಿ ಹರತಾಳು ಹಾಲಪ್ಪ, ಪಾಂಡುರಂಗ ಹಾಗೂ ಅಣ್ಣಪ್ಪ ವಿರುದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News