ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ವರ್ಗಾವಣೆ ಬೇಡ: ಚುನಾವಣಾ ಆಯೋಗದಿಂದ ಪತ್ರ

Update: 2018-01-23 15:09 GMT

ಬೆಂಗಳೂರು, ಜ. 23: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ ಬೆನ್ನಲ್ಲೆ ಚುನಾವಣಾ ಆಯೋಗ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ವರ್ಗಾವಣೆ ಬೇಡ ಎಂದು ನಿರ್ದೇಶನ ನೀಡಿದೆ.

ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದ್ದು, ಆ ಪ್ರಕ್ರಿಯೆ ಮುಕ್ತಾಯ ಆಗುವವರೆಗೂ ಜಿಲ್ಲಾಧಿಕಾರಿಗಳ ವರ್ಗಾವಣೆಗೂ ಮುನ್ನ ಆಯೋಗದ ಗಮನಕ್ಕೆ ತಂದು ವರ್ಗಾವಣೆ ಮಾಡಬೇಕು ಎಂದು ಆಯೋಗ ಪತ್ರದಲ್ಲಿ ಉಲ್ಲೇಖಿಸಿದೆ. ಹೀಗಾಗಿ ರೋಹಿಣಿ ಸಿಂಧೂರಿ ಸೇರಿದಂತೆ ರಾಮನಗರ, ಹಾವೇರಿ ಜಿಲ್ಲಾಧಿಕಾರಿಗಳ ವರ್ಗಾವಣೆಗೆ ತಾತ್ಕಾಲಿಕ ತಡೆ ಬೀಳುವ ಸಾಧ್ಯತೆಗಳಿವೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲೇ ನಡೆಯುವುದರಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯ ಅಂತಿಮ ದಿನದ ವರೆಗೆ ಜಿಲ್ಲಾಧಿಕಾರಿಗಳನ್ನ ವರ್ಗಾವಣೆ ಮಾಡದಂತೆ ಚುನಾವಣಾ ಆಯೋಗ ಈ ಹಿಂದೆಯೇ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಆದರೂ, ರೋಹಿಣಿ ಸಿಂಧೂರಿ ಸೇರಿ ಏಳು ಮಂದಿ ಐಎಎಸ್ ಅಧಿಕಾರಿಗಳನ್ನು ನಿನ್ನೆ ಸಂಜೆ ವರ್ಗಾವಣೆ ಮಾಡಲಾಗಿತ್ತು.

‘ಯಾರೊಬ್ಬರ ಒತ್ತಡಕ್ಕೆ ಮಣಿದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಇನ್ನಿತರ ಅಧಿಕಾರಿಗಳ ವರ್ಗಾವಣೆ ಮಾಡಿಲ್ಲ. ಇದೊಂದು ಆಡಳಿತಾತ್ಮಕ ನಿರ್ಧಾರ. ನಾವು ಮಹಿಳಾ ಅಧಿಕಾರಿಗಳಿಗೆ ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ಕೋಲಾರ ಸೇರಿ ಹಲವು ಜಿಲ್ಲೆಗಳಲ್ಲಿ ಮಹಿಳೆಯರೇ ಅಧಿಕಾರಿಗಳಾಗಿದ್ದಾರೆ. ರಾಜ್ಯ ಸರಕಾರದ ವಿರುದ್ಧ ವಿಪಕ್ಷಗಳು ಪ್ರತಿಭಟನೆ ಮಾಡುತ್ತಿವೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News