ಬೌದ್ಧಿಕ ಪ್ರೌಡಿಮೆಯಿಂದ ಸಾಧನೆ: ಸಾಹಿತಿ ಅನುಸೂಯ ದೇವಿ

Update: 2018-01-23 15:13 GMT

ಬೆಂಗಳೂರು, ಜ.23: ದಕ್ಷಿಣ ಕನ್ನಡದ ಜನರು ಬೌದ್ಧಿಕ ಪ್ರೌಡಿಮೆಗೆ ಹೆಚ್ಚು ಒತ್ತು ನೀಡುತ್ತಾರೆ. ಹೀಗಾಗಿ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಾಹಿತಿ ಅನುಸೂಯ ದೇವಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಯಲಹಂಕ ಉಪನಗರದಲ್ಲಿ ದಕ್ಷಿಣ ಕನ್ನಡ ಸಾಂಸ್ಕೃತಿಕ ಸಂಘದ ವತಿಯಿಂದ ಆಯೋಜಿಸಿದ್ದ 21ನೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲೆ, ವಿಜ್ಞಾನ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ದಕ್ಷಿಣ ಕನ್ನಡ ಜನತೆ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶೈಕ್ಷಣಿಕ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುವುದು ಅವರ ಬೌದ್ದಿಕ ಪ್ರೌಡಿಮೆಗೆ ಸಾಕ್ಷಿಯಾಗಿದೆ. ಜಾಗತಿಕ ಮಟ್ಟದಲ್ಲಿ ದಕ್ಷಿಣ ಕನ್ನಡಿಗರು ಇಲ್ಲದ ಯಾವುದೇ ನಗರಗಳಿಲ್ಲ ಎನ್ನುವ ರೀತಿಯಲ್ಲಿ ಪ್ರಗತಿ ಸಾಧಿಸಿದ್ದಾರೆ. ದಕ್ಷಿಣ ಕನ್ನಡದ ಜನತೆ ವಿದೇಶಗಳಲ್ಲಿ ನೆಲೆಸಿದ್ದರೂ ತಮ್ಮ ಕಲೆ, ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡಿ, ಹಲವಾರು ವರ್ಷಗಳಿಂದ ಪೋಷಿಸಿಕೊಂಡು ಬಂದಿರುವುದು ಹೆಗ್ಗಳಿಕೆ ವಿಚಾರ ಎಂದು ಅವರು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನಿಸಲಾಯಿತು. ಎಸೆಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗೋವಿಂದೂರು ವೆಂಕಟಪ್ಪ ಹೆಗ್ಡೆ, ದಕ್ಷಿಣಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಯಾನಂದ್ ಕೋಟ್ಯಾನ್, ಉಪಾಧ್ಯಕ್ಷ ಪ್ರಧಾನ ಕಾರ್ಯದರ್ಶಿ ಚಿತ್ರಕಲ ರಘುನಾಥ್ ರೈ, ಕೋಶಾಧಿಕಾರಿ ಅಲಂಗಾರು ಜಯರಾಮಶೆಟ್ಟಿ, ಸಂಘಟನಾ ಕಾರ್ಯದರ್ಶಿ ಅಟ್ಟೂರು ಶ್ರೀನಿವಾಸ್, ಉಪಾಧ್ಯಕ್ಷರಾದ ಅಲಂಗಾರು ಬಾಬು ಶೆಟ್ಟಿ, ಮಲ್ಲಿಕಾ ಲಕ್ಷ್ಮಿ ನಾರಾಯಣ ಆಳ್ವ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News