ಎನ್‌ಎಂಸಿ ಕಾಯ್ದೆ ತಿದ್ದುಪಡಿಗೆ ವೈದ್ಯಕೀಯ ಸಂಘಗಳ ಆಗ್ರಹ

Update: 2018-01-23 15:17 GMT

ಬೆಂಗಳೂರು, ಜ.23: ವೈದ್ಯಕೀಯ ಸೇವೆಯಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ತರಲು ರೂಪಿಸಲಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ (ಎನ್‌ಎಂಸಿ) ಯಲ್ಲಿನ ಕೆಲ ಅಂಶಗಳನ್ನು ಮಾರ್ಪಾಡು ಮಾಡಬೇಕು ಎಂದು ಖಾಸಗಿ ವೈದ್ಯಕೀಯ ಸಂಘಟನೆಗಳು ಒತ್ತಾಯಿಸಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರವೈಡರ್ಸ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ಬಿ.ಎಸ್.ಅಜಯ್‌ಕುಮಾರ್, ಕೇಂದ್ರ ಸರಕಾರ ಕೈಗೊಂಡಿರುವ ನಿರ್ಣಯ ಭವಿಷ್ಯದಲ್ಲಿ ಒಳ್ಳೆಯದಾಗಲಿದೆ. ಆದರೆ, ಅದರಲ್ಲಿ ಕೆಲವು ನ್ಯೂನತೆಗಳನ್ನು ಹೊಂದಿದ್ದು, ಅದನ್ನು ಸರಿಪಡಿಸಿ ಮುಂದಿನ ಕ್ರಯ ಕೈಗೊಳ್ಳಬೇಕು ಎಂದು ಹೇಳಿದರು.

ಸರಕಾರ ಈ ಮಸೂದೆ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಹೊರಟಂತೆ ಕಾಣುತ್ತಿದ್ದು, ಇದನ್ನು ಕೈಬಿಡಬೇಕು. ಎಂಬಿಬಿಎಸ್ ಪರೀಕ್ಷೆ ಮುಗಿಸಿದ ನಂತರ ಮತ್ತೆ ನ್ಯಾಷನಲ್ ಲೈಸೆನ್ಷಿಯೇಟ್ ಎಕ್ಸಾಮಿನೇಷನ್ ಅನ್ನು ಮಾಡಬೇಕೆಂಬ ನಿಂಬಂಧನೆ ವಿಧಿಸಲಾಗಿದೆ. ಇದು ಕೂಡ ಸರಿಯಾದ ತೀರ್ಮಾನವಲ್ಲ. ಎಂಬಿಬಿಎಸ್ ಮುಗಿಸಿದ ಮೇಲೆ ಇಂತಹ ಪರೀಕ್ಷೆಗಳು ಅಗತ್ಯವಿಲ್ಲ ಎಂದರು.

ಆರೋಗ್ಯ ಕ್ಷೇತ್ರದ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ ಕೇಂದ್ರ ಸರಕಾರ ಜಾರಿ ಮಾಡಲು ಉದ್ಧೇಶಿಸಿರುವ ಮಸೂದೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಸಾಧ್ಯತೆಯಿದೆ. ಹೀಗಾಗಿ, ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮರುಕಳಿಸದಂತೆ ಸರಕಾರ ಎಚ್ಚರ ವಹಿಸಬೇಕು. ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣಕ್ಕೆ ಪರವಾನಿಗೆ, ಗುಣಮಟ್ಟ ಪರಿಶೀಲನೆ, ಮಾನ್ಯತೆ, ಮತ್ತು ಆಡಳಿತದ ಮೇಲೆ ನಿಗಾವಹಿಸಲು ಒಂದು ಸ್ವಾಯತ್ತ ಸಂಸ್ಥೆಯನ್ನು ನೇಮಕ ಮಾಡುವ ಅವಶ್ಯವಿದೆ ಎಂದು ತಿಳಿಸಿದರು.

ಎಎನ್‌ಬಿಎಐ ಅಧ್ಯಕ್ಷ ಡಾ.ವೆಂಕಟೇಶ ಕೃಷ್ಣಮೂರ್ತಿ ಮಾತನಾಡಿ, ಭಾರತದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಗಂಭೀರವಾದ ಕಾನೂನಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಂ.ಡಿ, ಎಂ.ಎಸ್ ಮತ್ತು ಇನ್.ಬಿ.ಇ ನಡುವೆ ಯಾವುದೇ ವ್ಯತ್ಯಾಸವಿಲ್ಲದೆ ಸಮಾನಾಂತರವಾಗಿ ಕಾಣುವಂತಹ ಮಸೂದೆಯನ್ನು ರೂಪಿಸಬೇಕು ಎಂದರು.

ಆಯುಷ್ ವೈದ್ಯರಿಗೆ ಅವಕಾಶ ಬೇಡ: ರೋಗಿಗಳ ಆರೋಗ್ಯದಲ್ಲಿ ಸ್ಥಿರತೆ ಕಾಪಾಡಲು ಆಧುನಿಕ ಔಷಧಗಳು (ಅಲೋಪಥಿ) ಹಾಗೂ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಆಧುನಿಕ ಔಷಧಿಗಳಿಗೂ ಮತ್ತು ಸಾಂಪ್ರಾದಾಯಿಕ ಔಷಧಿ ಪದ್ಧತಿ (ಹೋಮಿಯೋಪಥಿ) ಅನುಸರಿಸುತ್ತಿರುವ ಆಯುಷ್ ಪದ್ಧತಿಗೂ ಸಂಬಂಧವಿಲ್ಲ. ಹಾಗಾಗಿ ಆಯುಷ್ ವೈದ್ಯರು ಅಲೋಪಥಿಯಲ್ಲಿ ತರಬೇತಿ ಪಡೆಯುವ ಸಂಬಂಧಿತ ಕೋರ್ಸ್‌ಗಳಿಗೆ ಅವಕಾಶ ನೀಡಬಾರದು ಎಂದು ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ಈ ಮಸೂದೆಯಲ್ಲಿ ವೈದ್ಯಕೀಯ ಶಿಕ್ಷಣದ ಜವಾಬ್ದಾರಿ ಶೇ.20 ರಷ್ಟು ಮಾತ್ರ ಚುನಾಯಿತ ವೈದ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ದೇಶದಲ್ಲಿರುವ ವೈದ್ಯಕೀಯ ಕಾಲೇಜುಗಳ ನಿಯಂತ್ರಣ ಮಾಡಲು ಸಾಧ್ಯವಿಲ್ಲ. 3/1ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಪ್ರದೇಶಗಳಲ್ಲಿ 2/3 ರಷ್ಟು ವೈದ್ಯಕೀಯ ಕಾಲೇಜುಗಳು ಅವೈಜ್ಞಾನಿಕವಾಗಿ ಮಂಜೂರಾಗಿದೆ. ಇದಲ್ಲದೇ. ವೈದ್ಯಕೀಯ ಶಿಕ್ಷಣ ಕಾಯ್ದೆಯು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಇದರಿಂದ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ವಲಯದ ನಡುವೆ ಅಂತರ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಒಂದು ಸ್ವಾಯತ್ತ ಸಂಸ್ಥೆ ಸ್ಥಾಪಿಸುವ ಮೂಲಕ ವೈದ್ಯಕೀಯ ಶಿಕ್ಷಣದ ನಿಯಂತ್ರಣ ವ್ಯವಸ್ಥೆಯಲ್ಲಿ ಸುಧಾರಣೆ ತರಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News