ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ರಾಜೀನಾಮೆಗೆ ಆಗ್ರಹಿಸಿ ಧರಣಿ

Update: 2018-01-23 15:21 GMT

ಬೆಂಗಳೂರು, ಜ.23: ಸಂವಿಧಾನ ಮತ್ತು ದಲಿತರಿಗೆ ಅಪಮಾನ ಮಾಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದಿಂದ ನಗರದ ಪುರಭವನ ಎದುರು ಧರಣಿ ಸತ್ಯಾಗ್ರಹ ನಡೆಲಾಯಿತು.

ಪರಿಶಿಷ್ಟ ಜಾತಿ ವಿಭಾಗದ ನೂರಾರು ಸದಸ್ಯರು, ‘ದಲಿತ ಹೋರಾಟಗಾರರನ್ನು ಬೀದಿ ನಾಯಿಗಳು’ ಎಂದು ಟೀಕಿಸಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಧಿಕ್ಕಾರದ ಘೋಷಣೆ ಕೂಗಿದರು.

ಪತ್ರಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್ಸಿ ಘಟಕದ ಅಧ್ಯಕ್ಷ ಎಪ್. ಎಚ್. ಜಕ್ಕಪ್ಪ, ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಬ್ರಾಹ್ಮಣ ಯುವ ಪರಿಷತ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹೆಗಡೆ, ‘ಸಂವಿಧಾನ ಬದಲಾವಣೆ ಮಾಡಲು ನಾವಿರೋದು’ ಎಂದು ಹೇಳಿಕೆ ನೀಡುವ ಮೂಲಕ ಅಂಬೇಡ್ಕರ್ ಹಾಗೂ ರಾಷ್ಟ್ರದ ಶ್ರೇಷ್ಟ ಗ್ರಂಥವಾದ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಒಂದು ವರ್ಗದ ಮತ ಬ್ಯಾಂಕ್ ಅನ್ನು ಭದ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ವ ಶ್ರೇಷ್ಟ ಗ್ರಂಥವನ್ನೇ ಬದಲು ಮಾಡುತ್ತೇವೆಂದು ಹೇಳಿಕೆ ನೀಡಿದ್ದರು. ಆದರೆ, ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದಾಗ, ಕ್ಷಮೆಯಾಚನೆ ಮಾಡಿದರು ಎಂದರು.

ಇತ್ತೀಚಿಗೆ ಬಳ್ಳಾರಿಯಲ್ಲಿ ಸರಕಾರಿ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ದಲಿತ ಸಂಘಟನೆಗಳು ಕಾರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ. ಇದನ್ನು ಸಹಿಸದ ಸಚಿವ ಹೆಗಡೆ, ದಲಿತರನ್ನೇ ಗುರಿಯಾಗಿಸಿಕೊಂಡು ನಾವು ಉಳ್ಳವರು, ಹೇಳಿದ್ದನ್ನು ಮಾಡಿಯೇ ತೀರುತ್ತೇವೆ. ಈ ಬೀದಿ ನಾಯಿಗಳಿಗೆ ಹೆದರುವುದಿಲ್ಲ ಎಂದು ಹೇಳಿಕೆ ನೀಡಿ ದಲಿತರಿಗೆ ಅವಮಾನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.

ಲೋಕಸಭೆಯಲ್ಲಿ ಕ್ಷಮೆ ಕೇಳಿದ್ದೇನೆ. ಈ ವಿಷಯ ಅಂತ್ಯವಾಗಿದೆ ಎಂದು ಹೇಳಿಕೊಂಡು ದಲಿತರ ಮನವೊಲಿಸಬಹುದಾಗಿತ್ತು. ಆದರೆ, ಅವರು ಇಂತಹ ಹೇಳಿಕೆ ನೀಡಿರುವುದು ಸಲ್ಲ ಹಾಗೂ ಸಾಂವಿಧಾನಿಕ ಹುದ್ದೆಯಲ್ಲಿ ಹೆಗಡೆ ಮುಂದುವರಿಯಲು ಅನರ್ಹರು. ಹೀಗಾಗಿ, ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಪರಿಶಿಷ್ಟ ವಿಭಾಗದ ಉಪಾಧ್ಯಕ್ಷ ವೆಂಕಟೇಶ ಕುಮಾರ, ಎಂ.ಡಿ.ಜಯರಾಮ್, ನಲ್ಲೂರಳ್ಳಿ ನಾಗೇಶ್, ಕೆ.ಸಿ.ಕೇಶವಮೂರ್ತಿ, ಬಿ.ಎಸ್.ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News