ಮಕ್ಕಳ ಹಕ್ಕನ್ನು ಕಡೆಗಣಿಸಿರುವ ಆರ್‌ಎಂಪಿ ಯೋಜನೆ: ಆಕ್ರೋಶ

Update: 2018-01-23 15:24 GMT

ಬೆಂಗಳೂರು, ಜ.23: ಬಿಡಿಎ ಸಿದ್ದಪಡಿಸಿರುವ ಬೆಂಗಳೂರು ನಗರ ಪರಿಷ್ಕೃತ ಮಹಾ ಯೋಜನೆ (ಆರ್‌ಎಂಪಿ) ಮಕ್ಕಳ ಹಕ್ಕುಗಳನ್ನು ಕಡೆಗಣಿಸಲಾಗಿದೆ ಎಂದು ಬೆಂಗಳೂರು ಮಕ್ಕ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಗರದ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಂದ ಭಾಗವಹಿಸಿದ್ದ ಮಕ್ಕಳು, ಬಿಡಿಎ ಮಂಡಿಸಲು ಮುಂದಾಗಿರುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ಬಿಡಿಎ ಮಂಡಿಸುತ್ತಿರುವ ಯೋಜನೆಯಲ್ಲಿ ಮಕ್ಕಳಿಗೆ ಸಂಬಂಧಪಟ್ಟ ನಿರ್ದಿಷ್ಟವಾದ ವಿಷಯಗಳು ಒಳಗೊಳ್ಳದಿರುವುದು ಅಪಾಯಕಾರಿ ಎಂದು ಅಭಿಪ್ರಾಯಿಸಿದರು.

ಈ ವೇಳೆ ಶರಣ್ಯ ಮಾತನಾಡಿ, ಆರ್‌ಎಂಪಿ ಯೋಜನೆ ಬೆಂಗಳೂರಿನ ಭೂಮಿಯ ಬಳಕೆ ಹಾಗೂ ಭೂಮಿಯನ್ನು ವಲಯಗಳಾಗಿ ವಿಂಗಡಿಸಿ ಮಾರ್ಪಡಿಸಿರುವ ಕೆಲಸ ಮಾಡುತ್ತಿದೆ. ಮಕ್ಕಳಿಗೆ ಬೇಕಾದ ಯಾವುದೇ ಸೌಲಭ್ಯಗಳನ್ನು ಈ ಯೋಜನೆಯಲ್ಲಿ ಪರಿಪೂರ್ಣವಾಗಿ ಮಂಡಿಸಿಲ್ಲ ಎಂದರು.
ಹಿಂದಿನ ಯೋಜನೆಯಲ್ಲಿ ಮಾಡಿದ ತಪ್ಪಿನಿಂದಾಗಿ ಕೋರಮಂಗಲದ ಬಳಿಯ ಕೊಳಗೇರಿಗಳನ್ನು ಎತ್ತಂಗಡಿ ಮಾಡಿದ್ದರು. ಅಲ್ಲಿದ್ದವರನ್ನು 25 ಕಿ.ಮೀ ನಷ್ಟು ಬೆಂಗಳೂರು ನಗರದಿಂದ ದೂರಕ್ಕೆ ತಂದು ಬಿಟ್ಟಿದ್ದಾರೆ. ಇದರಿಂದಾಗಿ ನೂರಾರು ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದಿಂದ ವಂಚಿತರಾಗಿದ್ದಾರೆ ಎಂದು ದೂರಿದರು.

ಲಗ್ಗೆರೆ ಯಂಕಪ್ಪ ಮಾತನಾಡಿ, ಈ ಬಾರಿಯ ಯೋಜನೆಯಲ್ಲಿ ಬಡ ಮಕ್ಕಳು ಕಲಿಯಲು ಅಗತ್ಯವಾದ ಸರಕಾರಿ ಶಾಲೆಗಳು, ಕಾಲೇಜುಗಳು ಅಗತ್ಯ ಪ್ರಮಾಣದಲ್ಲಿ ನಿರ್ಮಾಣ ಮಾಡಬೇಕು. ಎಲ್ಲ ಮೂಲ ಸೌಕರ್ಯಗಳಿಂದ ಒಳ್ಳೆಯ ಗುಣಮಟ್ಟದ ಶಿಕ್ಷಣ ಒದಗಿಸುವುದನ್ನು ಖಾತರಿಪಡಿಸಬೇಕು. ಮಕ್ಕಳು ಆಟವಾಡಲು ಅಗತ್ಯವಿರುವಷ್ಟು ಆಟದ ಮೈದಾನವಿಲ್ಲದೆ ಮಕ್ಕಳ ಮಾನಸಿಕ, ದೈಹಿಕ ಸಮಗ್ರ ಅಭಿವೃದ್ಧಿ ಮೇಲೆ ಕೆಟ್ಟ ಪರಿಣಾಮ ಬೀರಿ ದಾರಿ ತಪ್ಪುವುದಕ್ಕೆ ಕಾರಣವಾಗಿದೆ. ಹೀಗಾಗಿ, ನಗರದಲ್ಲಿ 500 ಮಕ್ಕಳಿಗೆ ಕನಿಷ್ಟ 10 ಎಕರೆ ವಿಸ್ತಾರದ ಆಟದ ಮೈದಾನವನ್ನು ನಿರ್ಮಾಣ ಮಾಡುವುದನ್ನು ಖಾತ್ರಿ ಪಡಿಸಬೇಕು ಎಂದು ಆಗ್ರಹಿಸಿದರು.

ಮಕ್ಕಳ ವಿವಿಧ ಕಲೆ, ರಂಗಭೂಮಿ, ಸಾಮರ್ಥ್ಯ, ಕ್ರೀಡೆಗಳಲ್ಲಿನ ಪ್ರತಿಭೆ ಉತ್ತೇಜಿಸಲು ಪ್ರತಿ ವಾರ್ಡ್‌ನಲ್ಲಿ ಸಾಂಸ್ಕೃತಿಕ ಕೇಂದ್ರಗಳು, ಕ್ರೀಡಾಂಗಣಗಳು, ಸಂಪನ್ಮೂಲ ಕೇಂದ್ರಗಳು, ಗ್ರಂಥಾಲಯ ಮತ್ತು ರಂಗಮಂದಿರಗಳನ್ನು ನಿರ್ಮಾಣ ಮಾಡಲು ಖಾತ್ರಿ ನೀಡಬೇಕು. ಪ್ರತಿ ವಾರ್ಡಿನಲ್ಲಿ ಕನಿಷ್ಟ 3 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿ ಸೂಕ್ತ ವ್ಯವಸ್ಥೆ ಮಾಡಬೇಕು. ಉಸಿರಾಡಲು ಶುದ್ಧ ಗಾಳಿಯನ್ನು ಖಾತರಿಪಡಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಆಂಟೋನಿ ಪ್ರಕಾಶ್, ಸಭಿಯಾ, ಆಶಾ, ಲಕ್ಷ್ಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News