ಹಸಿರು ರ‍್ಯಾಂಕಿಂಗ್‌: ಭಾರತ ಎಲ್ಲಿದೆ ಗೊತ್ತೇ ?

Update: 2018-01-24 04:42 GMT

ಹೊಸದಿಲ್ಲಿ, ಜ. 24: ವಾಯುಮಾಲಿನ್ಯ ತಡೆಯಲು ವಿಫಲವಾಗಿರುವುದು ಮತ್ತು ಅರಣ್ಯ ಸಂರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವ ಪರಿಣಾಮವಾಗಿ ಭಾರತ ಹಸಿರು ರ‍್ಯಾಂಕಿಂಗ್‌ನಲ್ಲಿ ತಳಮಟ್ಟಕ್ಕೆ ಕುಸಿದಿದೆ.

180 ದೇಶಗಳ ಪೈಕಿ ಭಾರತ 177ನೆ ರ‍್ಯಾಂಕಿಂಗ್‌ ಪಡೆದಿದೆ. ಎರಡು ವರ್ಷಗಳ ಹಿಂದೆ ಭಾರತ 141ನೆ ಸ್ಥಾನದಲ್ಲಿತ್ತು.

ಜಾಗತಿಕ ಪರಿಸರ ಸಾಧನೆ ಸೂಚ್ಯಂಕ (ಇಪಿಐ)ನ ಇತ್ತೀಚಿನ ವರದಿ ಮಂಗಳವಾರ ದಾವೋಸ್‌ನಲ್ಲಿ ನಡೆದಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಬಿಡುಗಡೆಯಾಗಿದೆ.

ಹತ್ತು ವಿಶಾಲ ವರ್ಗಗಳಲ್ಲಿ ದೇಶಗಳಿಗೆ ರ‍್ಯಾಂಕಿಂಗ್‌ ನೀಡಲಾಗಿದ್ದು, 24 ಸಾಧನೆ ಸೂಚಕಗಳ ಆಧಾರದಲ್ಲಿ ರ‍್ಯಾಂಕಿಂಗ್‌ ನೀಡಲಾಗಿದೆ. ಪರಿಸರ ಆರೋಗ್ಯ ಮತ್ತು ಪರಿಸರ ವ್ಯವಸ್ಥೆಯ ಹುರುಪು, ವಾಯುಗುಣಮಟ್ಟ, ನೀರು ಮತ್ತು ನೈರ್ಮಲ್ಯ, ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ, ಅರಣ್ಯ, ತ್ಯಾಜ್ಯ ನೀರು ಸಂಸ್ಕರಣೆಯಂಥ ಮಾನದಂಡಗಳು ಇದರಲ್ಲಿ ಸೇರಿವೆ.

ಕೊಲಂಬಿಯಾ ಮತ್ತು ಯಾಲೆ ವಿಶ್ವವಿದ್ಯಾನಿಲಯ ಹೊರತರುವ ಈ ದ್ವೈ ವಾರ್ಷಿಕ ವರದಿಯಲ್ಲಿ ಚೀನಾ 120ನೇ ರ‍್ಯಾಂಕ್ ಪಡೆದಿದೆ. ಪರಿಸರ ಸಂರಕ್ಷಣೆಯಲ್ಲಿ ಸ್ವಿಝರ್ಲ್ಯಾಂಡ್ ಅಗ್ರಗಣ್ಯ ದೇಶ ಎನಿಸಿಕೊಂಡಿದ್ದು, ಫ್ರಾನ್ಸ್, ಡೆನ್ಮಾರ್ಕ್, ಮಾಲ್ಟಾ, ಸ್ವೀಡನ್ ನಂತರದ ಸ್ಥಾನಗಳಲ್ಲಿವೆ. ಬ್ರಿಕ್ಸ್ ದೇಶಗಳ ಪೈಕಿ ಬ್ರೆಜಿಲ್ 69ನೆ ರ‍್ಯಾಂಕಿಂಗ್‌ ಪಡೆದಿದೆ. ಅಮೆರಿಕ 27ನೆ ಸ್ಥಾನದಲ್ಲಿದ್ದು, ಬ್ರಿಟನ್ (6), ಜರ್ಮನಿ (13), ಜಪಾನ್ (20) ಮತ್ತು ಕೆನಡಾ (25)ನೆ ರ‍್ಯಾಂಕ್ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News