ಮಹಾದಾಯಿ ಯೋಜನೆ: ದಿಲ್ಲಿಯ ವರಿಷ್ಠರ ಜೀತಕ್ಕಿಳಿದಿರುವ ರಾಜ್ಯ ಬಿಜೆಪಿ ನಾಯಕರು

Update: 2018-01-26 04:22 GMT

ಗುರುವಾರ ನಡೆದ ಎರಡು ಪ್ರತಿಭಟನೆಗಳು ಮಾಧ್ಯಮಗಳಲ್ಲಿ ಮಹತ್ವವನ್ನು ಪಡೆದುಕೊಂಡಿವೆ. ಒಂದು ಪದ್ಮಾವತ್ ಎನ್ನುವ ಚಿತ್ರವನ್ನು ವಿರೋಧಿಸಿ ಉತ್ತರ ಭಾರತದಲ್ಲಿ ಕರ್ಣಿಸೇನಾ ಎನ್ನುವ ಸಂಘಟನೆ ನಡೆಸುತ್ತಿರುವ ಪ್ರತಿಭಟನೆ. ಮಗದೊಂದು, ನಮಗೆ ನೀರು ಕೊಡಿ, ಮಹಾದಾಯಿ, ಕಳಸಾ ಬಂಡೂರಿ ಯೋಜನೆಗೆ ಸಹಕಾರ ಕೊಡಿ ಎಂದು ಬೀದಿಗಿಳಿದಿರುವ ಕನ್ನಡಿಗರ ಪ್ರತಿಭಟನೆ.

‘ಪದ್ಮಾವತ್’ ಚಿತ್ರವನ್ನು ಪೂರ್ತಿ ನೋಡಿದ ಬಳಿಕ ಪ್ರೇಕ್ಷಕರಲ್ಲಿ ಮೊತ್ತ ಮೊದಲಾಗಿ ಏಳುವ ಪ್ರಶ್ನೆ ‘ಕರ್ಣಿಸೇನಾ’ ಸಂಘಟನೆಯ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಯಾರ ವಿರುದ್ಧ, ಯಾವುದರ ವಿರುದ್ಧ? ಚಿತ್ರದುದ್ದಕ್ಕೂ ಪ್ರಬಲ ಸಮುದಾಯವಾಗಿರುವ ರಜಪೂತರ ವೈಭವೀಕರಣ ನಡೆದಿದೆ. ಇತಿಹಾಸದಲ್ಲಿ ಒಂದೇ ಒಂದು ಯುದ್ಧವನ್ನು ಗೆದ್ದ ದಾಖಲೆಯಿಲ್ಲದ ಈ ರಾಜರ ಮೇಲೆ ಶೌರ್ಯ, ಸಾಹಸಗಳನ್ನು ಆರೋಪಿಸಲಾಗಿದೆ. ಜೊತೆಗೆ, ಅಲ್ಲಾವುದ್ದೀನ್ ಖಿಲ್ಜಿಯನ್ನು ಅತ್ಯಂತ ಋಣಾತ್ಮಕವಾಗಿ ತೋರಿಸಲಾಗಿದೆ. ಮಂಗೋಲಿಯನ್ನರಂತಹ ಲೂಟಿಕೋರರು ಭಾರತವನ್ನು ಪ್ರವೇಶಿಸದಂತೆ ತಡೆದು ತನ್ನ ಶೌರ್ಯದಿಂದಲೇ ಇತಿಹಾಸದಲ್ಲಿ ದಾಖಲಾಗಿರುವ ಅಲ್ಲಾವುದ್ದೀನ್ ಖಿಲ್ಜಿ ಇತಿಹಾಸದ ಕುಲುಮೆಯಿಂದ ಹೊರಹೊಮ್ಮಿದ ವ್ಯಕ್ತಿ. ಆದರೆ ರಾಣಿ ಪದ್ಮಾವತಿ ಅಥವಾ ಪದ್ಮಿನಿ ಸಂಪೂರ್ಣ ಇತಿಹಾಸಕ್ಕೆ ಸಂಬಂಧಪಟ್ಟವಳಲ್ಲ. ಖಿಲ್ಜಿಯ ಆಳ್ವಿಕೆ ಮುಗಿದು ಸುಮಾರು 300 ವರ್ಷಗಳ ಬಳಿಕ ಸೂಫಿ ಕವಿಯೊಬ್ಬ ‘ಪದ್ಮಾವತ್’ ಎಂಬ ತನ್ನ ಕಾವ್ಯದಲ್ಲಿ ಈಕೆಯನ್ನು ಪ್ರಸ್ತಾಪಿಸುತ್ತಾನೆ.

ಸಿಂಹಳದ ರಾಜಕುಮಾರಿಯಾಗಿರುವ ಈಕೆ ರಾಜ ರತ್ನಸೇನನ ಪತ್ನಿಯಾಗುತ್ತಾಳೆ. ಇದೇ ಸಂದರ್ಭದಲ್ಲಿ ರತ್ನಸೇನನ ಆಸ್ಥಾನದಲ್ಲಿರುವ ಒಬ್ಬ ಬ್ರಾಹ್ಮಣ ರಾಜನ ಮೇಲೆ ಸಿಟ್ಟಾಗಿ, ಅಲ್ಲಾವುದ್ದೀನ್ ಖಿಲ್ಜಿಯ ಆಸ್ಥಾನಕ್ಕೆ ಹೋಗಿ ಕಿವಿಯೂದುತ್ತಾನೆ. ಪದ್ಮಾವತಿಯ ಸೌಂದರ್ಯರಾಶಿಯನ್ನು ಬಣ್ಣಿಸಿ ಅಲ್ಲಾವುದ್ದೀನ್ ಆಕೆಯ ಮೇಲೆ ಮೋಹಗೊಳ್ಳುವಂತೆ ಮಾಡುತ್ತಾನೆ. ಇದು ಕತೆಯ ಸಾರ. ಸೂಫಿ ಕವಿಯ ಪದ್ಮಾವತ್ ಕಾವ್ಯ ಹಲವು ಫ್ಯಾಂಟಸಿಗಳನ್ನು ಹೊಂದಿದೆ. ಇಲ್ಲಿ ಮಾತನಾಡುವ ಗಿಳಿ ಬರುತ್ತದೆ. ಮಾಂತ್ರಿಕ ಬರುತ್ತಾನೆ. ಈ ಕಾವ್ಯಕ್ಕೆ ಯಾವ ರೀತಿಯಲ್ಲೂ ಇತಿಹಾಸದ ಗುಣಲಕ್ಷಣಗಳಿಲ್ಲ. ಅರ್ಧ ಇತಿಹಾಸ, ಅರ್ಧ ಕಾವ್ಯವಾಗಿರುವ ಪದ್ಮಾವತಿ ಎಂಬ ಪಾತ್ರವನ್ನು ಇಟ್ಟುಕೊಂಡು ರಜಪೂತರನ್ನು ವೈಭವೀಕರಿಸಿರುವ ಈ ಚಿತ್ರ ರಜಪೂತರ ಹಿರಿಮೆಯನ್ನು ಸಾರುತ್ತದೆ. ಪದ್ಮಾವತಿಯನ್ನು ನಿಂದಿಸುವ ಅಥವಾ ಅಲ್ಲಾವುದ್ದೀನ್‌ನನ್ನು ವೈಭವೀಕರಿಸುವ ಯಾವ ಘಟನೆಯೂ ಇಲ್ಲ. ಹೀಗಿದ್ದರೂ ಈ ಚಿತ್ರದ ವಿರುದ್ಧ ಅದೇನೋ ಅನಾಹುತ ನಡೆದಿದೆ ಎನ್ನುವ ರೀತಿಯಲ್ಲಿ ಹಿಂಸಾಚಾರ ನಡೆಸುತ್ತಿರುವವರ ನಿಜವಾದ ಉದ್ದೇಶ ‘ಪದ್ಮಾವತ್’ ಚಿತ್ರವಂತೂ ಅಲ್ಲವೇ ಅಲ್ಲ. ಯಾಕೆಂದರೆ ಅವರು ಚಿತ್ರವನ್ನು ನೋಡುವ ಮೊದಲೇ ಪ್ರತಿಭಟನೆಗಿಳಿದಿದ್ದರು.

ಪ್ರತಿಭಟನೆಯ ರೀತಿಯಂತೂ ರಜಪೂತರ ಸಂಸ್ಕೃತಿ, ಸಂಸ್ಕಾರವನ್ನು ಯಾವ ರೀತಿಯಲ್ಲೂ ಪ್ರತಿನಿಧಿಸುತ್ತಿಲ್ಲ. ಗುರುವಾರದಂದು ಶಾಲಾ ಮಕ್ಕಳು ಪ್ರಯಾಣಿಸುವ ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಇದು ರಜಪೂತರ ಶೌರ್ಯವನ್ನು ಪ್ರದರ್ಶಿಸುತ್ತದೆಯೆ? ನಿಜಕ್ಕೂ ರಜಪೂತರಿಗೆ ಏನಾದರೂ ಅವಮಾನ, ಕಳಂಕವಾಗಿದ್ದಿದ್ದರೆ ಅದು ಈ ಪ್ರತಿಭಟನಾಕಾರರಿಂದಲೇ ಹೊರತು, ‘ಪದ್ಮಾವತ್’ ಚಿತ್ರದಿಂದ ಅಲ್ಲ. ಮೋದಿ ನೇತೃತ್ವದ ಆಡಳಿತ ವೈಫಲ್ಯಗಳನ್ನು ಮುಚ್ಚಿ ಹಾಕಲು ಈ ಕೃತಕ ಪ್ರತಿಭಟನೆಯನ್ನು ಸರಕಾರದ ಪ್ರಾಯೋಜಕತ್ವದಲ್ಲಿ ಹಮ್ಮಿಕೊಳ್ಳಲಾಗಿದೆಯೇ ಎಂದು ಅನುಮಾನ ಪಡುವಂತಿದೆ ಕರ್ಣಿಸೇನೆಯ ವರ್ತನೆಗಳು. ನೋಟು ನಿಷೇಧ ಮತ್ತು ಜಿಎಸ್‌ಟಿಯ ಪರಿಣಾಮವಾಗಿ ದೇಶಾದ್ಯಂತ ಅರ್ಥವ್ಯವಸ್ಥೆ ಕುಸಿದಿದೆ. ಇಂದು ಒಳ್ಳೆಯದಾಗುತ್ತದೆ, ನಾಳೆ ಒಳ್ಳೆಯದಾಗುತ್ತದೆ ಎಂದು ಕಾಯುತ್ತಿರುವ ಮೋದಿ ಭಕ್ತರ ನಿರೀಕ್ಷೆಗಳೆಲ್ಲ ಹುಸಿಯಾಗ ತೊಡಗಿವೆ. ದೇಶಾದ್ಯಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದ ಸ್ಥಿತಿಯಂತೂ ದುರ್ಬರವಾಗಿದೆ. ಉದ್ಯೋಗ ಸೃಷ್ಟಿಯಂತೂ ಆಗುತ್ತಲೇ ಇಲ್ಲ. ಪರಿಣಾಮವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಯುವಕರಿಗೆ ‘ಪಕೋಡ ಮಾರಲು’ ಅಪ್ಪಣೆಕೊಡಿಸಿದ್ದಾರೆ.

ಮಗದೊಂದೆಡೆ ಬ್ಯಾಂಕುಗಳು ಜನ ಸಾಮಾನ್ಯರ ದುಡ್ಡನ್ನು ದೋಚಿ ತಮ್ಮ ಖಜಾನೆ ತುಂಬಿಸಿಕೊಳ್ಳುತ್ತಿವೆ. ದನ ಸಾಕಿ ಬದುಕೋಣ ಎಂದರೆ ಗೋರಕ್ಷಕರ ಕಾಟ. ಜನರಲ್ಲಿ ಸರಕಾರದ ವಿರುದ್ಧ ವ್ಯಾಪಕ ಅಸಮಾಧಾನ ಹುಟ್ಟುತ್ತಿವೆ. ಇಂತಹ ಸಂದರ್ಭದಲ್ಲಿ ಜನರ ಗಮನವನ್ನು ಬೇರೆಡೆಗೆ ತಿರುಗಿಸುವುದಕ್ಕಾಗಿ ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕೃತಕ ‘ಪ್ರತಿಭಟನೆ’ಯನ್ನು ಸೃಷ್ಟಿಸಲಾಗಿದೆ. ಬಿಜೆಪಿ ಅಧಿಕಾರ ಹಿಡಿದಿರುವ ಬಹುತೇಕ ರಾಜ್ಯಗಳಲ್ಲಿ ಪದ್ಮಾವತ್ ಚಿತ್ರದ ಪ್ರದರ್ಶನಗಳಿಗೆ ಅವಕಾಶ ಸಿಗುತ್ತಿಲ್ಲ. ಆರೆಸ್ಸೆಸ್‌ನಂತಹ ಸಂಘಟನೆಗಳು ಮತ್ತು ಅದರ ನಾಯಕರು ಪದ್ಮಾವತ್‌ನ ಹೆಸರಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿ ಇನ್ನಷ್ಟು ಹಿಂಸಾಚಾರಕ್ಕೆ ಕಾರಣವಾಗಿದ್ದಾರೆ. ಅಂದರೆ, ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ದೇಶದ ವಾಸ್ತವವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಇಂದು ಜನರು ಬೀದಿಗಿಳಿಯಬೇಕಾದುದು ಉದ್ಯೋಗಗಳಿಗಾಗಿ. ನೆಮ್ಮದಿಯ ಬದುಕಿಗಾಗಿ. ಆದರೆ ಪದ್ಮಿನಿ ಎನ್ನುವ ಕಾಲ್ಪನಿಕ ಪಾತ್ರವನ್ನು ಇವರ ಪ್ರಮುಖ ಸಮಸ್ಯೆ ಎಂಬಂತೆ ಬಿಂಬಿಸಲಾಗಿದೆ.

  ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲೂ ಜನರು ಬೀದಿಗಿಳಿದಿದ್ದಾರೆ. ಆದರೆ ಅವರು ಪ್ರತಿಭಟನೆ ನಡೆಸುತ್ತಿರುವುದು ಕುಡಿಯುವ ನೀರಿಗಾಗಿ. ಕಳೆದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಮಹಾದಾಯಿ ಯೋಜನೆಗೆ ಆಗ್ರಹಿಸಿ ಗುರುವಾರ ನಾಡಿನ ಜನರು ಬೃಹತ್ ಪ್ರತಿಭಟನೆ ನಡೆಸಿದರು. ಮಹಾದಾಯಿ ಯೋಜನೆಯನ್ನು ಪರಿಹರಿಸುತ್ತೇನೆ ಎಂದು ಭರವಸೆಕೊಟ್ಟ ಯಡಿಯೂರಪ್ಪ ಕಟ್ಟ ಕಡೆಗೆ ಜನರಿಗೆ ಕೈ ಕೊಟ್ಟರು. ಒಂದೆಡೆ ಜನರು ಕುಡಿಯುವ ನೀರಿಗಾಗಿ ಹಂಬಲಿಸುತ್ತಿರುವಾಗ, ತನ್ನ ಪ್ರವಾಸೋದ್ಯಮವನ್ನು ಬೆಳೆಸುವುದಕ್ಕಾಗಿ ಮಹಾದಾಯಿ ಯೋಜನೆಗೆ ಗೋವಾ ಸರಕಾರ ಅಡ್ಡಿ ಪಡಿಸುತ್ತಿದೆ. ಮಾತ್ರವಲ್ಲ ಕನ್ನಡಿಗರ ಕುರಿತಂತೆಯೂ ಗೋವಾದ ಸಚಿವರು ತಮ್ಮ ಹುದ್ದೆಯ ಘನತೆ ಮರೆತು ಮಾಧ್ಯಮಗಳಿಗೆ ಹೇಳಿಕೆ ನೀಡಿ ಜನರನ್ನು ಪ್ರಚೋದಿಸಿದ್ದಾರೆ. ಇಚ್ಛಾಶಕ್ತಿಯಿದ್ದರೆ ಕರ್ನಾಟಕದ ಜನರ ಬೇಡಿಕೆಯನ್ನು ಈಡೇರಿಸುವುದು ಕೇಂದ್ರ ಸರಕಾರಕ್ಕೆ ಕಷ್ಟ ಸಾಧ್ಯವೇನೂ ಅಲ್ಲ. ಆದರೆ ನರೇಂದ್ರಮೋದಿಯವರು ಈ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ವೌನವನ್ನು ಪಾಲಿಸುತ್ತಾ ಬಂದಿದ್ದಾರೆ. ಕನಿಷ್ಠ ರಾಜ್ಯದ ನಿಯೋಗದ ಜೊತೆಗೆ ಮಾತುಕತೆ ನಡೆಸುವಂತಹ ಸೌಜನ್ಯವನ್ನೂ ತೋರಿಸಿಲ್ಲ. ಇಂದು ಅತ್ಯಧಿಕ ಬಿಜೆಪಿ ಸಂಸದರು ಕರ್ನಾಟಕವನ್ನು ಪ್ರತಿಧಿಸುತ್ತಿದ್ದಾರೆ. ಇವರು ಒತ್ತಡ ಹೇರಿದ್ದಿದ್ದರೆ ಖಂಡಿತವಾಗಿಯೂ ಮಹಾದಾಯಿ ಯೋಜನೆಯ ಕುರಿತಂತೆ ಕೇಂದ್ರ ಮೃದುವಾಗುತ್ತಿತ್ತು. ಆದರೆ ಅವರು ಮೋದಿಯ ವರ್ಚಸ್ಸಿನ ಮರೆಯಲ್ಲಿ, ತಲೆಮರಿಸಿಕೊಂಡಿದ್ದಾರೆ. ಇದೀಗ ರಾಜ್ಯದ ಜನರು ನೀರಿಗಾಗಿ ಬಿಜೆಪಿಯ ಕೇಂದ್ರದ ನಾಯಕರ ವಿರುದ್ಧ ಅನಿವಾರ್ಯವಾಗಿ ಬಂಡೆದ್ದಿದ್ದಾರೆ.

ಬಿಜೆಪಿ ಸಮಾವೇಶಕ್ಕಾಗಿ ಅಮಿತ್ ಶಾ ಕರ್ನಾಟಕಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲೇ ರಾಜ್ಯ ಬಂದ್ ಘೋಷಿಸಿದ್ದಾರೆ. ವಿಪರ್ಯಾಸವೆಂದರೆ ಪದ್ಮಾವತ್‌ನಂತಹ ಸಿನೆಮಾದ ಹೆಸರಲ್ಲಿ ಜನರನ್ನು ಪ್ರತಿಭಟನೆಗೆ ಪ್ರಚೋದಿಸುತ್ತಿರುವ ಬಿಜೆಪಿ ನಾಯಕರು ರಾಜ್ಯದಲ್ಲಿ ನೀರಿನ ಬೇಡಿಕೆಯಿಟ್ಟು ಪ್ರತಿಭಟನೆ ನಡೆಸುತ್ತಿರುವುದನ್ನು ವಿರೋಧಿಸುತ್ತಿದ್ದಾರೆ. ಪ್ರತಿಭಟನಾಕಾರರಿಗೆ ಉಪದೇಶಗಳನ್ನು ಹೇಳುತ್ತಿದ್ದಾರೆ. ಕೋಮು ವೈಷಮ್ಯಗಳನ್ನು ಹುಟ್ಟಿಸಿ ಈಗಾಗಲೇ ಹಲವು ಬಾರಿ ಕರ್ನಾಟಕದಲ್ಲಿ ಬಂದ್ ಘೋಷಿಸಿರುವ ಬಿಜೆಪಿ ನಾಯಕರು ಮಹಾದಾಯಿ ಯೋಜನೆಗಾಗಿ ಬಂದ್ ಘೋಷಿಸಿದಾಗ ಕಾನೂನಿನ ಬಗ್ಗೆ ಮಾತನಾಡುತ್ತಿದ್ದಾರೆ. ಬಂದ್‌ನಿಂದಾಗುವ ತೊಂದರೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಕೇಂದ್ರದ ತಮ್ಮ ವರಿಷ್ಠರ ಚೇಲಾಗಳಾಗಿ, ಕನ್ನಡನೆಲ ಜಲದ ಹಿತಾಸಕ್ತಿಯನ್ನು ಮರೆಯುತ್ತಿರುವುದು ಈ ಮೂಲಕ ಸ್ಪಷ್ಟವಾಗುತ್ತಿದೆ. ಇಂದು ಸಮಾವೇಶದಲ್ಲಿ ಭಾಷಣ ಮಾಡಿದ ಅಮಿತ್ ಶಾ, ಮಹಾದಾಯಿ ಯೋಜನೆಯ ಕುರಿತಂತೆ ತುಟಿ ಬಿಚ್ಚದೇ ಇದ್ದುದು ಬಿಜೆಪಿಯ ರಾಜ್ಯ ನಾಯಕರ ಭವಿಷ್ಯದ ಮೇಲೆ ಭಾರೀ ಪರಿಣಾಮವನ್ನು ಬೀರಲಿದೆ. ಒಟ್ಟಿನಲ್ಲಿ ರಾಜ್ಯದ ಬಿಜೆಪಿಯ ನಾಯಕರು ಯಾವುದೋ ಸಿನೆಮಾದ ವಿರುದ್ಧ ಬೀದಿಗಿಳಿದು ಜನರ ಬದುಕನ್ನು ಅಸ್ತವ್ಯಸ್ತಗೊಳಿಸಲು ಸಿದ್ಧರಿದ್ದಾರೆ. ಆದರೆ ತಮ್ಮದೇ ನಾಡಿನ ಜನರ ನೀರಿನ ಬೇಡಿಕೆಗೆ ಮಾತ್ರ ಸ್ಪಂದಿಸದಂತಹ ಸ್ಥಿತಿಯಲ್ಲಿದ್ದಾರೆ. ಬಿಜೆಪಿ ನಾಯಕರು ತಾವು ದಿಲ್ಲಿಯ ನಾಯಕರ ಜೀತದಲ್ಲಿದ್ದೇವೆ ಎನ್ನುವುದನ್ನು ನಾಡಿನ ಜನರ ಮುಂದೆ ಬಹಿರಂಗವಾಗಿಯೇ ಒಪ್ಪಿಕೊಂಡಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News