ಸಂವಿಧಾನ ಒಪ್ಪಿಕೊಳ್ಳುವುದೇ ರಾಷ್ಟ್ರೀಯತೆಯಲ್ಲ: ಕೇಂದ್ರ ಸಚಿವ ಹೆಗಡೆಯಿಂದ ಇನ್ನೊಂದು ವಿವಾದಾಸ್ಪದ ಹೇಳಿಕೆ

Update: 2018-01-26 14:21 GMT

ಬೆಂಗಳೂರು, ಜ. 26: ರಾಷ್ಟ್ರಧ್ವಜಕ್ಕೆ ಸಲ್ಯೂಟ್ ಹೊಡೆದು ಕೇವಲ ಬಾಯಿ ಮಾತಿನಲ್ಲಿ ಸಂವಿಧಾನ ಒಪ್ಪಿಕೊಂಡರೆ ಸಾಲದು. ಸಂಸ್ಕೃತಿ, ಆಚಾರ-ವಿಚಾರಗಳನ್ನು ಒಪ್ಪಿಕೊಂಡಾಗ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತೆ ಆಗುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.

ಶುಕ್ರವಾರ ಗಣರಾಜ್ಯೋತ್ಸವದ ಅಂಗವಾಗಿ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾನು ಎಲ್ಲವನ್ನೂ ಹೇಳುತ್ತಾ ಹೋದರೆ ಕೆಲವರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಮೊದಲು ವಾಸ್ತವಿಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲವನ್ನು ಬಣ್ಣದ ಕನ್ನಡಕದಲ್ಲೇ ನೋಡುತ್ತಾರೆಂದು ಟೀಕಿಸಿದರು.

ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಿದ್ದೇ ನಮಗೆ ಸಿಕ್ಕ ಸ್ವಾತಂತ್ರ್ಯ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಅದಲ್ಲ, ಗುಲಾಮಗಿರಿಯಿಂದ ಹೊರಬಂದದ್ದು ನಿಜವಾದ ಸ್ವಾತಂತ್ರ್ಯ ಎಂದ ಅವರು, ಸಂವಿಧಾನ ಒಪ್ಪಿಕೊಳ್ಳುವುದೇ ರಾಷ್ಟ್ರೀಯತೆಯಲ್ಲ, ವ್ಯವಸ್ಥೆಯನ್ನು ಒಪ್ಪಿಕೊಳ್ಳುವುದು ನಿಜವಾದ ಸಂವಿಧಾನ ಎಂದರು.

ಈ ಮಣ್ಣಿನ ಸಂಸ್ಕೃತಿಯನ್ನು ಎಲ್ಲರೂ ಗೌರವಿಸಿ, ಪಾಲಿಸಬೇಕು. ಅದು ಬಿಜೆಪಿಯಲ್ಲಿ ಕಾಣಲು ಮಾತ್ರ ಸಾಧ್ಯ ಎಂದ ಅವರು, ಸಂಸ್ಕೃತಿಯನ್ನು ಯಾರು ಗೌರವಿಸುವುದಿಲ್ಲವೋ ಅಂಥವರು ಸಂವಿಧಾನದ ಬಗ್ಗೆ ಮಾತನಾಡುವುದೇ ವ್ಯರ್ಥ. ನಾನು ಏನೇ ಹೇಳಿದರೂ ಅದಕ್ಕೆ ವಿವಾದದ ಬಣ್ಣ ಕಟ್ಟುತ್ತಾರೆ. ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಆಗುವುದಿಲ್ಲ. ಆದರೆ, ಕಂಡದ್ದನ್ನು ಕಂಡಂತೆ ಹೇಳಬೇಕು. ಸುತ್ತಿ ಬಳಸಿ ಹೇಳುವುದರಲ್ಲಿ ಅರ್ಥವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News