ಮುಂಬೈನ ಕೊನೆಯ ಖಾಸಗಿ ಒಡೆತನದ ಆನೆ ‘ಲಕ್ಷ್ಮಿ’ಇನ್ನಿಲ್ಲ

Update: 2018-01-26 14:32 GMT

ಮುಂಬೈ,ಜ.26: ಖಾಸಗಿ ಒಡೆತನದಲ್ಲಿದ್ದ ನಗರದ ಕೊನೆಯ ಆನೆ ‘ಲಕ್ಷ್ಮಿ’ ದಹಿಸರದಲ್ಲಿ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದು, ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಸಾವಿನ ಕಾರಣವನ್ನು ತಿಳಿದುಕೊಳ್ಳಲು ಶುಕ್ರವಾರ ಮಲಾಡ್‌ನಲ್ಲಿಯ ಕೋರಾ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಿದರು.

ಲಕ್ಷ್ಮಿ ಸೇರಿದಂತೆ ಖಾಸಗಿ ಒಡೆತನದ ಹಲವಾರು ಆನೆಗಳನ್ನು ರಸ್ತೆಗಳಲ್ಲಿ ಭಿಕ್ಷಾಟನೆಗೆ ಮತ್ತು ಚಲನಚಿತ್ರ ಶೂಟಿಂಗ್‌ಗಳಲ್ಲಿ ಕೆಲಸಗಳಿಗೆ ಬಳಸಲಾಗುತ್ತಿದೆ ಎಂದು ನಾವು ಐದು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದೆವು. ಖಾಸಗಿ ಒಡೆತನದಲ್ಲಿರುವಾಗಲೇ ಲಕ್ಷ್ಮಿ ಅಸು ನೀಗಿದೆ ಮತ್ತು ಕಳೆದ ಐದು ವರ್ಷಗಳಲ್ಲಿ ಅದನ್ನು ಸೂಕ್ತ ಆನೆ ರಕ್ಷಣಾ ಧಾಮಕ್ಕೆ ರವಾನಿಸಿರಲಿಲ್ಲ ಎಂದು ಎನ್‌ಜಿಒ ಪ್ಲಾಂಟ್ ಆ್ಯಂಡ್ ಅನಿಮಲ್ ವೆಲ್ಫೇರ್ ಸೊಸೈಟಿಯ ಕಾರ್ಯಕರ್ತ ಸುನೀಶ್ ಸುಬ್ರಮಣಿಯನ್ ಸುದ್ದಿಸಂಸ್ಥೆಗೆ ತಿಳಿಸಿದರು.

ಮೃತ ಆನೆಯ ವಯಸ್ಸಿನ ಬಗ್ಗೆ ಅರಣ್ಯ ಇಲಾಖೆಗೆ ಯಾವುದೇ ಸ್ಪಷ್ಟತೆಯಿಲ್ಲವಾದರೂ ಅದಕ್ಕೆ ಸುಮಾರು 50 ವರ್ಷ ವಯಸ್ಸಾಗಿತ್ತೆಂದು ಅಧಿಕಾರಿಗಳು ತಿಳಿಸಿದರು.

 ದಹಿಸರದ ಮೂಲಚಂದ್ ಯಾದವ ಚಾಳ್‌ನ ನಿವಾಸಿ ರಮಾಶಂಕರ್ ಪಾಂಡೆ ಆನೆಯ ಮಾಲಿಕನಾಗಿದ್ದು, ಆತ ಅದನ್ನೊಂದು ಶೆಡ್‌ನಲ್ಲಿ ಇರಿಸಿದ್ದ. 1990ರ ದಶಕದಲ್ಲಿ ಈ ಕುಟುಂಬವು ಬಿಹಾರದಿಂದ ಎರಡು ಆನೆಗಳನ್ನು ತಂದಿತ್ತು ಮತ್ತು ವಿವಿಧ ಕಾರ್ಯಗಳಿಗೆ ಅವುಗಳನ್ನು ಬಳಸುತ್ತಿತ್ತು ಎಂದು ಅವರು ತಿಳಿಸಿದರು.

ಪಾಂಡೆ ಕುಟುಂಬದ ಒಡೆತನದಲ್ಲಿದ್ದ ಇನ್ನೊಂದು ಆನೆ ‘ಪಾರು’ 2016 ಅಕ್ಟೋಬರ್‌ನಲ್ಲಿ ಮುಂಬೈ ಉಪನಗರದಲ್ಲಿಯ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ವೇಳೆ ಸಾವನ್ನಪ್ಪಿತ್ತು ಎಂದು ಸುಬ್ರಮಣಿಯನ್ ತಿಳಿಸಿದರು.

ಕೆಲವು ಸಮಯದಿಂದ ಲಕ್ಷ್ಮಿ ಅನಾರೋಗ್ಯದಿಂದಿತ್ತು ಎಂದು ನಮಗೆ ಗೊತ್ತಾಗಿದೆ. ಅದಕ್ಕೆ ಸೂಕ್ತ ಆಹಾರವನ್ನು ನೀಡುತ್ತಿರಲಿಲ್ಲ. ಅದನ್ನು ಭಿಕ್ಷಾಟನೆಗೆ ಬಳಸಲಾಗುತ್ತಿತ್ತು. ಅದು ಅಪೌಷ್ಟಿಕತೆಯಿಂದ ನರಳುತ್ತಿತ್ತು. ಈ ಅಮಾಯಕ ಪ್ರಾಣಿಗೆ ಎಸಗಿರುವ ಕ್ರೌರ್ಯವನ್ನು ಗುರುತಿಸಲು ವಿವರವಾದ ವಿಚಾರಣೆ ಅಗತ್ಯವಾಗಿದೆ. ಖಾಸಗಿಯಾಗಿ ಆನೆಗಳನ್ನು ಹೊಂದುವ ಯಾವದೇ ನೂತನ ಪ್ರಸ್ತಾವಗಳಿಗೆ ಅರಣ್ಯ ಇಲಾಖೆ ಅನುಮತಿ ನೀಡಕೂಡದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News