ಬೆಂಗಳೂರು: ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಂಭ್ರಮದ ಗಣರಾಜ್ಯೋತ್ಸವ

Update: 2018-01-26 14:36 GMT

ಬೆಂಗಳೂರು, ಜ. 26: ಗಣರಾಜ್ಯೋತ್ಸವದ ಅಂಗವಾಗಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ದೇಶ ಭಕ್ತಿಯ ಹಿರಿಮೆಯ ಜತೆಗೆ ಸಾಂಸ್ಕೃತಿಕ ಸಂಭ್ರಮ ಮನೆಮಾಡಿತ್ತು. ಶಾಲಾ ವಿದ್ಯಾರ್ಥಿಗಳು, ಪೊಲೀಸರು, ಯೋಧರು ರೋಮಾಂಚನಗೊಳಿಸುವ ಪ್ರದರ್ಶನ ನೀಡಿ ನೋಡುಗರ ಮನ ಸೆಳೆದರು.

ಗಣರಾಜ್ಯೋತ್ಸವದ ಅಂಗವಾಗಿ ರಾಜ್ಯಪಾಲರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆ ವಾಯು ಸೇನೆ ಹೆಲಿಕ್ಯಾಪ್ಟರ್‌ನಿಂದ ಪುಷ್ಪಮಳೆ ಸುರಿಸಲಾಯಿತು.
ವಿದ್ಯಾರ್ಥಿಗಳ ನಾಡು-ನುಡಿ ದೇಶದ ಇತಿಹಾಸ ಪರಿಚಯಿಸುವ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು. ನಗರದ ಚಿಕ್ಕಬಿದರಕಲ್ಲು ಸರಕಾರಿ ಪ್ರೌಢಶಾಲೆಯ 650 ಮಕ್ಕಳು ಒಗ್ಗೂಡಿ ಪ್ರಸ್ತುತಪಡಿಸಿದ ಪುಣ್ಯಭೂಮಿ ಭಾರತ ಗೀತೆಗೆ ನೃತ್ಯ ಪ್ರದರ್ಶಿಸಿದರೆ, ಕ್ಲಾರೆನ್ಸ್ ಪಬ್ಲಿಕ್ ಶಾಲೆಯ ಮಕ್ಕಳು ನಾವು ಪ್ರಚಂಡ ಭಾರತೀಯರು, ವಿಶಾಲ ಮೃದಯದವರು ಗೀತೆಗಳಿಗೆ ನೃತ್ಯ ಮಾಡಿದರು.

ಸಾಹಸ ಪ್ರದರ್ಶನ: ಸೇನಾ ತಂಡದ ಯೋಧರು ವಿವಿಧ ರೀತಿಯ ಮೈ ನವಿರೇಳಿಸುವ ಪ್ರದರ್ಶನ ನೀಡಿದರು. ಮಿಲಿಟರಿ ಪೊಲೀಸ್ ತಂಡ ಶ್ವೇತ ಅಶ್ವ ತಂಡದಿಂದ ಮೋಟಾರ್ ಸೈಕಲ್ ಪ್ರದರ್ಶನ, ಯೋಧರ ಕುದುರೆ ಸವಾರಿ ಸಹ ಆಕರ್ಷಕವಾಗಿತ್ತು. ತಮಿಳುನಾಡಿನ ತಂಡದವರ ಕಲಾರಿ ಸಮರ ಯುದ್ಧ ನೋಡುಗರನ್ನು ನಿಬ್ಬೆರಗಾಗಿಸಿತು.

ಪಥಸಂಚಲನ: ಭಾರತೀಯ ಸೇನೆಯ ಯೋಧರು, ಕೆಎಸ್‌ಆರ್‌ಪಿ, ಗಹ ರಕ್ಷಕದಳ, ವಿವಿಧ ಶಾಲಾ ಮಕ್ಕಳು ಸೇರಿದಂತೆ ರಮಣಮಹರ್ಷಿ ಅಂಧ ಶಾಲಾ ಮಕ್ಕಳು ಕವಾಯತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದದ್ದು ವಿಶೇಷವಾಗಿತ್ತು. ಹಿನ್ನೆಲೆ ಗಾಯಕ ರಮೇಶ್ ಚಂದ್ರ ತಂಡದವರಿಂದ ನಾಡಗೀತೆ ಹಾಗೂ ರೈತ ಗೀತೆಗಳನ್ನು ಹಾಡಿದರು. ಪೋಲಿಸ್ ಬ್ಯಾಂಡ್ ತಂಡ ರಾಷ್ಟ್ರಗೀತೆಗಳು ಕೇಳುಗರಲ್ಲಿ ನಾಡು-ನುಡಿಯ ಬಗ್ಗೆ ಹೆಮ್ಮೆ ಮೂಡಿಸಿದವು.

ಗಮನ ಸೆಳೆದ ಸ್ತಬ್ಧಚಿತ್ರ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಬಾರಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರಗಳು ಗಮನಸೆಳೆದವು. ಈ ಬಾರಿ ವನ್ಯಜೀವಿಗಳ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ಆನೆ, ಹುಲಿ, ಕೊಕ್ಕರೆ, ಸಿಂಗಳೀಕ ಸೇರಿದಂತೆ ಪಕ್ಷಿ ಸಂಕುಲಗಳನ್ನೊಳಗೊಂಡಂತೆ ತಯಾರಿಸಿರುವ ಸ್ತಬ್ಧ ಚಿತ್ರ ಗಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News