ಸರಕಾರದಿಂದ ಅವಕಾಶವಾದಿ ಕ್ಷುದ್ರ ರಾಜಕಾರಣ: ಶೋಭಾ ಕರಂದ್ಲಾಜೆ

Update: 2018-01-26 14:43 GMT

ಬೆಂಗಳೂರು, ಜ.26: ರಾಜ್ಯ ಸರಕಾರವು ಕೋಮು ಆಧಾರದ ಮೇಲೆ ಆರೋಪಿಗಳನ್ನು ಪ್ರತ್ಯೇಕಿಸಲು ಹುನ್ನಾರ ನಡೆಸಿದ್ದು, ಕೇವಲ ಮುಗ್ಧ ಅಲ್ಪಸಂಖ್ಯಾತರ ಮೇಲಿನ ಪ್ರಕರಣಗಳನ್ನು ಮಾತ್ರವೇ ಕೈ ಬಿಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರೋಪಿಗಳನ್ನು ಕೋಮಿನ ಆಧಾರದ ಮೇಲೆ ಪ್ರತ್ಯೇಕಿಸಲು ಸರಕಾರ ಮುಂದಾಗಿದೆ. ಇದು ಓಲೈಕೆ ರಾಜಕಾರಣದ ಪರಾಕಾಷ್ಠೆಯಾಗಿದೆ. ಕಾಂಗ್ರೆಸ್ ಪಕ್ಷದ ಮತ ರಾಜಕಾರಣವಿದು. ಈ ಅವಕಾಶವಾದಿ ಕ್ಷುದ್ರ ರಾಜಕಾರಣವನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದು ಅವರು ಪ್ರಕಟನೆಯಲ್ಲಿ ಹೇಳಿದ್ದಾರೆ.

ಜ.19ರಂದು ಈ ಸಂಬಂಧ ರಾಜ್ಯದ ಡಿಜಿ ಮತ್ತು ಐಜಿಪಿ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಎಲ್ಲ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಮಂಗಳೂರು ಹಾಗೂ ಬೆಳಗಾವಿ ಪೊಲೀಸ್ ಆಯುಕ್ತರಿಗೆ ನೀಡಿರುವ ಸೂಚನೆಯು ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಳ್ಳುವ ಕಾಂಗ್ರೆಸ್ಸಿನ ಕುಟಿಲ ನೀತಿಗೆ ನಿದರ್ಶನವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆರೋಪಿಗಳನ್ನು ಕೇವಲ ಕೋಮು ಆಧಾರದ ಮೇಲೆ ಗುರುತಿಸಿ ಬಿಡುಗಡೆ ಮಾಡುವುದರಿಂದ ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ರಾಜ್ಯದ ಶಾಂತಿ ಭಂಗಕ್ಕೂ ಕಾರಣವಾಗಬಹುದು. ಭವಿಷ್ಯದಲ್ಲಿ ರಾಜ್ಯದ ಆತಂಕಕಾರಿ ದಿನಗಳಿಗೂ ಇದು ಕಾರಣವಾಗಬಹುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೇವಲ ಅಲ್ಪಸಂಖ್ಯಾತರು ಮುಗ್ಧರು ಎನ್ನುವಂತೆ ಬಿಂಬಿಸುವುದು ಮುಖ್ಯಮಂತ್ರಿ ತಮ್ಮ ಪ್ರಮಾಣ ವಚನದ ಸಂದರ್ಭದಲ್ಲಿ ಎಲ್ಲರನ್ನೂ ತಾರತಮ್ಯವಿಲ್ಲದೇ ನ್ಯಾಯ ಮತ್ತು ಸಮಾನತೆಯನ್ನು ಖಾತ್ರಿಪಡಿಸುವುದಾಗಿ ನೀಡುವ ವಾಗ್ದಾನಕ್ಕೆ ತದ್ವಿರುದ್ಧವಾಗಿದೆ. ರಾಜ್ಯ ಸರಕಾರ ಈ ಮೂಲಕ ಸಂವಿಧಾನಕ್ಕೂ ಅಪಚಾರವೆಸಗಿದೆ ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್ ನ ವೋಟ್‌ಬ್ಯಾಂಕ್ ರಾಜಕಾರಣ ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯಿಂದಾಗಿ ಶತಮಾನಕ್ಕಿಂತ ಹಳೆಯದಾದ ಪಕ್ಷವನ್ನು ದೇಶದ ಜನರು ಈಗಾಗಲೆ ತಿರಸ್ಕರಿಸಿದ್ದಾರೆ. ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತರ್ಕಹೀನ ಮತ್ತು ಕುಟಿಲ ರಾಜಕಾರಣಕ್ಕೆ ರಾಜ್ಯದ ಜನರು ತಕ್ಕಪಾಠ ಕಲಿಸುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News