ಸದಾಶಿವ ಆಯೋಗದ ವರದಿ ವಿಚಾರ: ಜ.29 ರಂದು ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ

Update: 2018-01-26 14:49 GMT

ಬೆಂಗಳೂರು, ಜ.26: ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯನ್ನು ಸಾರ್ವಜನಿಕ ಚರ್ಚೆಯಿಲ್ಲದೆ ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ಜ.29ರಂದು ರಾಜ್ಯದ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟಿಸಲು ನಿರ್ಧರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯಾಧ್ಯಕ್ಷ ರಾಘವೇಂದ್ರ ನಾಯ್ಕಿ, ದಲಿತ ಸಮುದಾಯಗಳಿಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳ ಕುರಿತು ನ್ಯಾ.ಸದಾಶಿವ ಆಯೋಗದ ವರದಿ ಬೆಳಕು ಚೆಲ್ಲಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಬೋವಿ, ಲಂಬಾಣಿ, ಛಲವಾದಿ, ಕೊರಚ, ದೊಂಬಿದಾಸ, ಬುಡ್ಗ ಜಂಗಮ, ಸಿಳ್ಳೆಕ್ಯಾತ ಸೇರಿದಂತೆ ಇತ್ಯಾದಿ ದಲಿತ-ಅಲೆಮಾರಿ ಜನಾಂಗಗಳನ್ನು ಪಟ್ಟಿಯಿಂದ ಕೈ ಬಿಡುವ ಮಾತುಗಳು ಕೇಳಿ ಬರುತ್ತಿದೆ ಎಂದರು.

ಈ ನಡುವೆ ರಾಜ್ಯ ಸರಕಾರ ಏಕಪಕ್ಷೀಯವಾಗಿ ಸದಾಶಿವ ಆಯೋಗದ ವರದಿ ಬಹಿರಂಗಪಡಿಸದೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಮುದಾಯದ ಹಿತಕ್ಕಾಗಿ ಪ್ರತಿಭಟನೆ ಹಾದಿ ಹಿಡಿದಿದ್ದೇವೆ ಎಂದು ತಿಳಿಸಿದರು.

ಆಯೋಗದ ವರದಿ ಸಂಬಂಧಿತ ಡಿ.14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಯಾ ಜನಾಂಗದ ಜನಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ‘ವರದಿಯಲ್ಲಿ ದೋಷಪೂರಿತ ಅಂಶಗಳ ಬಗ್ಗೆ ಪರಿಶೀಲಿಸಲು ಕಾನೂನು ಇಲಾಖೆಗೆ ಒಪ್ಪಿಸಿ, ನ್ಯೂನತೆಗಳು ಕಂಡುಬಂದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದರು.

ಚರ್ಚೆಯಿಲ್ಲದೆ ಕಾನೂನು ಇಲಾಖೆ ನೀಡಿರುವುದು ಸಮಂಜಸವಲ್ಲ ಎಂಬುವುದು ನಮ್ಮ ವಾದ. ಹೀಗಿದ್ದರೂ ಅಂತಿಮವಾಗಿ ಕಾನೂನು ಇಲಾಖೆ ಪರಿಶೀಲಿಸಿದ ಬಳಿಕ ಕೇಂದ್ರಕ್ಕೆ ಶಿಫಾರಸ್ಸಿಗೆ ಸಚಿವ ಸಂಪುಟ ಸಭೆ ಮುಂದೆ ವರದಿ ಬರಲಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಬೇಕು. ಈ ಉದ್ದೇಶದಿಂದಲೇ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಧರಣಿ ನಡೆಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಯಡಿಯೂರಪ್ಪ ಮನೆ ಮುಂದೆ ಧರಣಿ: ರಾಜಕೀಯ ಲಾಭಕ್ಕಾಗಿ ಚರ್ಚೆಯಾಗದಿರುವ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿಸಲು ಪ್ರಚೋದಿಸುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಮನವರಿಕೆ ಮಾಡಲು ಫೆ.1ರಂದು ಶಿಕಾರಿಪುರದಲ್ಲಿರುವ ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ವಿವರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹಾಗೂ ಇನ್ನಿತರ ಪದಾಧಿಕಾರಿಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News