ವಿಪಕ್ಷಗಳ ಆರೋಪ ಸತ್ಯಕ್ಕೆ ದೂರ: ಎಂಎಸ್‌ಐಎಲ್ ಸ್ಪಷ್ಟನೆ

Update: 2018-01-26 17:40 GMT

ಬೆಂಗಳೂರು, ಜ.26: ನದಿಯ ಮರಳು ಆಮದು ಪ್ರಕ್ರಿಯೆಯಲ್ಲಿ ಎಂಎಸ್‌ಐಎಲ್ 5850 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಿಪಕ್ಷ ನಾಯಕರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಇದುವರೆಗೆ ಎಂಎಸ್‌ಐಎಲ್ (ಮೈಸೂರ್ ಸೇಲ್ಸ್ ಇಂಟರ್‌ನ್ಯಾಷನಲ್ ಲಿ.) 37 ಲಕ್ಷ ರೂ.ವೌಲ್ಯದ 935 ಮೆಟ್ರಿಕ್ ಟನ್‌ಗಳಷ್ಟು ನದಿಯ ಮರಳನ್ನು ಮಲೇಷ್ಯಾದಿಂದ ಬೆಂಗಳೂರಿಗೆ ಆಮದು ಮಾಡಿಕೊಂಡಿದ್ದು ಇದರ ಮಾರಾಟ ಪ್ರಕ್ರಿಯೆ ಈಗಷ್ಟೇ ಆರಂಭಗೊಂಡಿದೆ.

 ಅಲ್ಲದೆ ಮಾರುಕಟ್ಟೆಯ ಬೇಡಿಕೆಯ ಆಧಾರದಲ್ಲಿ ಮುಂದಿನ ರಫ್ತು ಪ್ರಕ್ರಿಯೆ ನಡೆಯಲಿದೆ. ಹೀಗಿರುವಾಗ 5,850 ಕೋಟಿ ರೂ. ಹಣ ದುರುಪಯೋಗವಾಗಿದೆ ಎಂಬ ವಿರೋಧ ಪಕ್ಷದ ನಾಯಕರ ಆರೋಪಕ್ಕೆ ಅರ್ಥವಿಲ್ಲ. ಮುಂದಿನ ಐದು ವರ್ಷದಲ್ಲಿ 180 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಮರಳಿನ ಬೇಡಿಕೆಯಿದ್ದು ಈ ವಹಿವಾಟಿನ ಮೊತ್ತ 7,000 ಕೋಟಿ ರೂ. ಆಗಲಿದೆ ಎಂದು ಸಂಸ್ಥೆ ತಿಳಿಸಿದೆ.

     ಅಲ್ಲದೆ ಟೆಂಡರ್ ಪ್ರಕ್ರಿಯೆಯ ಕುರಿತೂ ಸಂದೇಹ ವ್ಯಕ್ತಪಡಿಸಲಾಗಿದೆ. ಈ ಕುರಿತೂ ಸ್ಪಷ್ಟನೆ ನೀಡುತ್ತಿದ್ದೇವೆ. ಸರಕಾರದ ಇ-ಪೋರ್ಟಲ್‌ನಲ್ಲಿ ಎಂಎಸ್‌ಐಎಲ್ ಮರಳು ಆಮದಿಗೆ 25-5-2017ರಂದು ಟೆಂಡರನ್ನು ಆಹ್ವಾನಿಸಿದ್ದು, 12-72017ರಂದು ಟೆಂಡರ್ ತೆರೆಯಲಾಗಿದೆ. ಮೆ ಫಿಝಾ ಡೆವಲಪರ್ಸ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈ. ಲಿ. ಹಾಗೂ ಯುಎಇಯ ಮೆ ಪೊಸಿಡೆನ್ ಎಫ್‌ಝಡ್‌ಇ ಸಂಸ್ಥೆಗಳು 1.50 ಕೋಟಿ ರೂ.ಯ ಇಎಂಡಿಯನ್ನು ಆರ್‌ಟಿಜಿಎಸ್ ವ್ಯವಸ್ಥೆಯ ಮೂಲಕ ಸಲ್ಲಿಸಿದ್ದವು. ಎರಡೂ ಸಂಸ್ಥೆಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ಟೆಂಡರ್ ತೆರೆದಿದ್ದು, ಫಿಝಾ ಡೆವಲಪರ್ಸ್ ಸಂಸ್ಥೆ ಸೂಕ್ತ ದಾಖಲೆಪತ್ರಗಳನ್ನು ಅಪ್-ಲೋಡ್ ಮಾಡದ ಕಾರಣ ಅವರಿಗೆ ಲಿಖಿತವಾಗಿ ತಿಳಿಸಿ, ಅವರಿಂದ ಸ್ವೀಕೃತಿ ಪತ್ರ ಪಡೆಯಲಾಗಿದೆ. ಯುಎಇ ಸಂಸ್ಥೆಯ ಟೆಂಡರನ್ನು ಟೆಂಡರ್ ತಜ್ಞ ಸಮಿತಿ ಪರಿಶೀಲಿಸಿದ ಬಳಿಕ , ಆರ್ಥಿಕ ಬಿಡ್ ತೆರೆಯಲಾಗಿದೆ. ಪ್ರತೀ ಮೆಟ್ರಿಕ್ ಟನ್‌ಗೆ 2,300 ರೂ. ದರವನ್ನು ಬಿಡ್‌ನಲ್ಲಿ ನಿಗದಿಪಡಿಸಿದೆ.

 ಅಲ್ಲದೆ ತಮಿಳುನಾಡು ನದಿಯ ಮರಳನ್ನು ಪ್ರತೀ ಮೆಟ್ರಿಕ್ ಟನ್‌ಗೆ 925 ರೂ.ನಂತೆ ಆಮದು ಮಾಡಿಕೊಂಡಿದೆ ಎಂಬ ಹೇಳಿಕೆಯೂ ಸತ್ಯಕ್ಕೆ ದೂರವಾಗಿದೆ. ಕೇರಳದಲ್ಲಿ ಪ್ರತೀ ಟನ್‌ಗೆ 2,500 ರೂ.ನಂತೆ ಮರಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂಬುದು ಸಂಸ್ಥೆಯ ಗಮನಕ್ಕೆ ಬಂದಿದೆ. ಆದ್ದರಿಂದ ಮೆಟ್ರಿಕ್ ಟನ್‌ಗೆ 2,300 ರೂ. (ಪ್ಯಾಕಿಂಗ್ ಶುಲ್ಕ , ಜಿಎಸ್‌ಟಿ ಸೇರಿ ದರ ಅತ್ಯಂತ ಕನಿಷ್ಟವಾಗಿದೆ. ಅಲ್ಲದೆ ಎಂ-ಸ್ಯಾಂಡ್(ಮ್ಯಾನುಫ್ಯಾಕ್ಚರ್ಡ್ ಸ್ಯಾಂಡ್)ಅಥವಾ ಉತ್ಪಾದಿತ ಮರಳು ಹಾಗೂ ನದಿಯ ಮರಳಿನ ಬೆಲೆಗೆ ಸಾಕಷ್ಟು ವ್ಯತ್ಯಾಸವಿರುವುದು ಸಹಜವಾಗಿದೆ.

ಮಲೇಶ್ಯಾದಿಂದ ಆಮದು ಮಾಡಿಕೊಂಡ ಮರಳಿನ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ. ಎಂಎಸ್‌ಐಎಲ್ ಯಾವುದೇ ಮುಂಗಡ ಹಣ ಪಾವತಿಸಿಲ್ಲ . ಈ ಹಿನ್ನೆಲೆಯಲ್ಲಿ, ವಿಪಕ್ಷ ನಾಯಕರ ಆರೋಪ ನಿರಾಧಾರವಾಗಿದೆ ಮತ್ತು ಇದರಲ್ಲಿ ಹುರುಳಿಲ್ಲ ಎಂದು ಎಂಎಸ್‌ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ ಮತ್ತು ಆಡಳಿತ ನಿರ್ದೇಶಕ ಜಿ.ಸಿ.ಪ್ರಕಾಶ್ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News