‘ಎಡಕಲ್ಲು ಗುಡ್ಡದ ಮೇಲೆ’ ಖ್ಯಾತಿಯ ಚಿತ್ರನಟ ಚಂದ್ರಶೇಖರ್ ನಿಧನ

Update: 2018-01-27 06:09 GMT

ಬೆಂಗಳೂರು, ಜ.27: ‘ಎಡಕಲ್ಲು ಗುಡ್ಡದ ಮೇಲೆ’ ಕನ್ನಡ ಚಿತ್ರದ ಖ್ಯಾತಿಯ ಚಂದ್ರಶೇಖರ್ ಹೃದಯಾಘಾತದಿಂದ ಕೆನಡಾದಲ್ಲಿ ಶನಿವಾರ ನಿಧನರಾಗಿದ್ದಾರೆ.

ಚಂದ್ರಶೇಖರ್ ಪತ್ನಿ ಶೀಲಾ, ಮಗಳು ತನ್ಯಾರನ್ನು ಅಗಲಿದ್ದಾರೆ.

ಚಂದ್ರಶೇಖರ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆ ತರುವ ಬಗ್ಗೆ ಪ್ರಯತ್ನ ನಡೆಸಲಾಗುತ್ತಿದೆ.

1969ರಲ್ಲಿ ‘ನಮ್ಮ ಮಕ್ಕಳು’ ಚಿತ್ರದಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಚಂದ್ರಶೇಖರ್ ಬಿ.ವಿ. ಕಾರಂತ್ ಹಾಗೂ ಗಿರೀಶ್ ಕಾರ್ನಾಡ್ ಅವರ ರಾಷ್ಟ್ರಪ್ರಶಸ್ತಿ ವಿಜೇತ ‘ವಂಶವೃಕ್ಷ’ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. 1973ರಲ್ಲಿ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಆ ಬಳಿಕ ಸಂಪತ್ತಿಗೆ ಸವಾಲ್, ಹಂಸಗೀತೆ, ರಾಜ ನನ್ನ ರಾಜ, ಮಾಗಿಯ ಕನಸು,ಶಂಕರ್ ಗುರು ಸಹಿತ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ವಿವಾಹದ ಬಳಿಕ ಚಂದ್ರಶೇಖರ್ ಕೆನಡಾಕ್ಕೆ ತೆರಳಿದ್ದರು. ಭಾರತೀಯ ಹೈಕಮಿಶನ್‌ನಲ್ಲಿ ವೀಸಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಆದರೆ ಅವರು ಕನ್ನಡ ಚಿತ್ರರಂಗದೊಂದಿಗೆ ನಂಟು ಕಳೆದುಕೊಂಡಿರಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಸ್ಯಾಂಡಲ್‌ವುಡ್ ಚಿತ್ರದಲ್ಲಿ ನಟಿಸಿದ್ದರು. ಚಂದ್ರಶೇಖರ್ ಮೊದಲ ಬಾರಿ ‘ಪೂರ್ವಪರ’ ಚಿತ್ರವನ್ನು ನಿದೇಶಿಸಿದ್ದು, ಈ ಚಿತ್ರ ಟೊರೊಂಟೊದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ ಎನಿಸಿಕೊಂಡಿತ್ತು. ಆಸ್ಟ್ರೇಲಿಯ ಸಹಿತ ಇತರ ದೇಶಗಳಲ್ಲಿ ಈ ಚಿತ್ರ ಪ್ರದರ್ಶನ ಕಂಡಿತ್ತು.

ಒಟ್ಟು 60ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಚಂದ್ರಶೇಖರ್ ಇತ್ತೀಚೆಗೆ ಬಿಡುಗಡೆಯಾದ '30 ಗಂಟೆ, 30 ದಿನ, 30 ಸೆಕೆಂಡ್' ಚಿತ್ರ ಅವರನ ನಟನೆಯ ಕೊನೆಯ ಚಿತ್ರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News