5ನೇ ತರಗತಿ ಮಕ್ಕಳಿಗೆ ಜೆಇಇ, ನೀಟ್ ತರಬೇತಿ!

Update: 2018-01-28 04:07 GMT

ಚೆನ್ನೈ, ಜ.28: ಐಐಟಿ-ಜೆಇಇ, ಎನ್‌ಇಇಟಿ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು 11ನೇ ತರಗತಿಯಲ್ಲೇ ತರಬೇತಿ ಆರಂಭಿಸುವುದು ಗೊತ್ತು. ಆದರೆ ಐದನೇ ತರಗತಿಯ ಮಕ್ಕಳಿಗೇ ಈ ತರಬೇತಿ ನೀಡುವುದನ್ನು ನೀವು ಕೇಳಿದ್ದೀರಾ?

ತಮ್ಮ ಮಕ್ಕಳನ್ನು ಜೆಇಇ, ನೀಟ್ ಪರೀಕ್ಷೆಗಳಿಗೆ ಸಜ್ಜುಗೊಳಿಸಬೇಕು ಎಂಬ ಪೋಷಕರನ್ನು ಸೆಳೆಯುವ ಸಲುವಾಗಿ ತಮಿಳುನಾಡಿನ ಕೋಚಿಂಗ್ ಸೆಂಟರ್‌ಗಳು 10 ವರ್ಷದ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್‌ಗಳನ್ನು ಅರಂಭಿಸಿವೆ. ಥರ್ಮೋಡೈನಾಮಿಕ್ಸ್, ಫ್ಲೂಯಿಡ್‌ಮೆಷಿನ್, ಕ್ಯಾಲಿಕ್ಲಸ್‌ನಂಥ ಕ್ಲಿಷ್ಟ ವಿಷಯಗಳನ್ನು ಮಕ್ಕಳ ತಲೆಗೆ ತುಂಬುವ ಪ್ರಯತ್ನ ನಡೆಯುತ್ತಿದೆ. ಮಕ್ಕಳಿಗೆ ಎಳವೆಯಲ್ಲೇ ತರಬೇತಿ ನೀಡುವುದು ಒಳ್ಳೆಯದು ಎಂಬ ಸಬೂಬು ನೀಡಿ ಹಲವು ಶಾಲೆಗಳು ಈಗಾಗಲೇ ಇಂಥ ಕೋಚಿಂಗ್ ಸೆಂಟರ್‌ಗಳ ಜತೆ ಒಪ್ಪಂದ ಮಾಡಿಕೊಂಡಿವೆ.

"ಆರನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗನಿಗೆ ತರಬೇತಿ ನೀಡುವ ಸಂಬಂಧ ಶಾಲಾಡಳಿತ ಸೂಚನೆ ನೀಡಿದೆ. ಆದರೆ ನಾವು ಆ ಪ್ರಸ್ತಾವ ತಿರಸ್ಕರಿಸಿದ್ದೇವೆ. ಇಂಥ ಕಠಿಣ ತರಬೇತಿಯನ್ನು ಸ್ವೀಕರಿಸುವ ಸ್ಥಿತಿಯಲ್ಲಿ ಮಕ್ಕಳು ಇಲ್ಲ" ಎನ್ನುವುದು ವೇಲಮ್ಮಾಳ್ ಶಾಲೆಯ ವಿದ್ಯಾರ್ಥಿಯ ತಂದೆ ಅಂಬತ್ತೂರ್ ವಿವರಿಸಿದರು. ಆದರೆ ಸ್ಪರ್ಧೆಗೆ ಮಕ್ಕಳು ಸಜ್ಜಾಗಬೇಕು ಎಂಬ ಕಾರಣಕ್ಕೆ ಕೆಲವರು ವಿದ್ಯಾರ್ಥಿಗಳನ್ನು ಇಂಥ ಕೋಚಿಂಗ್‌ಗೆ ಕಳುಹಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.

ಚೆನ್ನೈನ ಪ್ರತಿಷ್ಠಿತ ಎರ್ವಿನ್ ಮೆಟ್ರಿಕ್ಯುಲೇಶನ್ ಶಾಲೆಯಲ್ಲಿ 5, 6 ಮತ್ತು 7ನೇ ತರಗತಿ ಮಕ್ಕಳು ಕನಿಷ್ಠ ವಾರಕ್ಕೆ ಎರಡು ಗಂಟೆಗಳ ಕೋಚಿಂಗ್ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಟೈಮ್ ಇನ್‌ಸ್ಟಿಟ್ಯೂಟ್ ಜತೆ ಒಪ್ಪಂದ ಮಾಡಿಕೊಂಡು ಈ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಅಣಕು ಜೆಇಇ/ ನೀಟ್ ಪರೀಕ್ಷೆಗಳನ್ನೂ ಪ್ರತಿ ತಿಂಗಳು ನಡೆಸಲಾಗುತ್ತಿದೆ ಎಂದು ಪ್ರಾಚಾರ್ಯ ಬಿ.ಪುರುಷೋತ್ತಮ್ ಬಹಿರಂಗಪಡಿಸಿದರು.

ಐದನೇ ತರಗತಿಯಿಂದಲೇ ಮಕ್ಕಳಿಗೆ ಕೋಚಿಂಗ್ ನೀಡುವಂತೆ ಹಲವು ಶಾಲೆಗಳು ಮನವಿ ಮಾಡಿಕೊಂಡಿವೆ. ಆದರೆ ನಾವು ಒಂಬತ್ತನೇ ತರಗತಿಯ ಬಳಿಕವಷ್ಟೇ ಕೋಚಿಂಗ್ ನೀಡುತ್ತಿದ್ದೇವೆ ಎನ್ನುವುದು ವಿನ್ನರ್ಸ್‌ ಅಕಾಡೆಮಿಯ ಸಂಸ್ಥಾಪಕ ಸಂಹಜ್ ದದ್ಲಾನಿ ಹೇಳಿಕೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News