ಕರ್ನಾಟಕ ಪೋಲಿಯೊ ಮುಕ್ತವಾಗಿದ್ದರೂ ಲಸಿಕೆ ಕಾರ್ಯಕ್ರಮ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ

Update: 2018-01-28 07:22 GMT

ಬೆಂಗಳೂರು, ಜ.28: ಕಳೆದ ಏಳು ವರ್ಷಗಳಿಂದ ರಾಜ್ಯ ಪೋಲಿಯೋ ಮುಕ್ತವಾಗಿದೆ. ಆದರೆ ನಮ್ಮ ಪಕ್ಕದ ರಾಷ್ಟ್ರಗಳೂ ಪೋಲಿಯೋ ಮುಕ್ತ ಆಗಬೇಕು. ಇಲ್ಲದಿದ್ದರೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಅಲ್ಲಿಯವರೆಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಿಲ್ಲಿಸುವುದಿಲ್ಲ. ಇದು ನಿರಂತರವಾದ ಪ್ರಕ್ರಿಯೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆ ಕರ್ನಾಟಕ ಪೋಲಿಯೋ ಮುಕ್ತ ಎಂದು ಘೋಷಣೆ ಮಾಡಿದೆ. ಇತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪೋಲಿಯೋ ಪ್ರಕರಣ ವರದಿಯಾಗಿಲ್ಲ. ಮಕ್ಕಳು ಪೋಲಿಯೋದಿಂದ ಮುಕ್ತ ಆಗಬೇಕಾದರೆ ವರ್ಷದಲ್ಲಿ ಎರಡು ಬಾರಿ ಲಸಿಕೆ ಹಾಕಿಸಬೇಕು ಎಂದು ಮುಖ್ಯಮಂತ್ರಿ  ಮನವಿ ಮಾಡಿದರು. 

ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದರಿಂದಲೇ ನಮ್ಮ ರಾಜ್ಯ ಪೋಲಿಯೋ ಮುಕ್ತ ಆಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸರ್ಕಾರ ಪೋಲಿಯೋ ಲಸಿಕೆ ಆಂದೋಲನ ನಡೆಸುತ್ತಿದ್ದು, ಇದಕ್ಕಾಗಿ 32,437 ಕೇಂದ್ರಗಳನ್ನು ಸ್ಥಾಪಿಸಿದೆ. ಜೊತೆಗೆ 51,972 ತಂಡಗಳನ್ನು ರಚಿಸಿದ್ದು, 1,03,944 ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. 65,546 ಮೇಲ್ಚಿಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದು, 941 ಸಂಚಾರಿ ತಂಡಗಳೂ ಕಾರ್ಯ ನಿರ್ವಹಿಸುತ್ತಿವೆ . ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಒಂದರಿಂದ ಐದು ವರ್ಷದ ವರೆಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಬೇಕು ಎಂಬುದು ನಮ್ಮ ಉದ್ದೇಶ. ಲಸಿಕೆ ಹಾಕಿಸುವುದರಿಂದ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಇದು ಮಹತ್ವದ ಕಾರ್ಯಕ್ರಮ. ಮಾರ್ಚ್ 11ರಂದು ಎರಡನೇ ಸುತ್ತಿನ ಕಾರ್ಯಕ್ರಮ ನಡೆಯಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News