ಬೆಂಗಳೂರಿನ ತಮಿಳು ಶಾಲೆಗಳಲ್ಲಿನ ಕನ್ನಡ ಶಿಕ್ಷಕರ ಕೊರತೆ ನೀಗಿಸಲು ಕ್ರಮ: ಸಿದ್ದರಾಮಯ್ಯ

Update: 2018-01-28 08:15 GMT

ಬೆಂಗಳೂರು, ಜ.28: ನಗರದಲ್ಲಿನ ತಮಿಳು ಶಾಲೆಗಳಲ್ಲಿನ ಕನ್ನಡ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಂತ ಕವಿ ತಿರುವಳ್ಳುವರ್ ಅವರ ದಿನದ ಅಂಗವಾಗಿ ಹಲಸೂರಿನಲ್ಲಿರುವ ತಿರುವಳ್ಳುವರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.

ಬೆಂಗಳೂರಿನಲ್ಲಿ ತಮಗೆ ಜಾಗ ನೀಡುವಂತೆ ತಮಿಳು ಸಂಘ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ಸರ್ಕಾರಿ ಜಾಗವನ್ನು ಗುರುತಿಸಿ ಸಂಘಕ್ಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಂಗಳೂರು ಹಾಗೂ ಚನ್ನೈನಲ್ಲಿ ತಿರುವಳ್ಳುವರ್ ಅವರ ಪ್ರತಿಮೆ ಇದೆ. ತಿರುವಳ್ಳುವರ್ ಅವರ ಪ್ರತಿಮೆ ತಮಿಳುನಾಡು ಹಾಗೂ ಕರ್ನಾಟಕದ ಬಾಂಧವ್ಯವನ್ನು ಬೆಸೆದಿದೆ. ಭಾಷೆ ಮನುಷ್ಯನ ಅಭಿವ್ಯಕ್ತಿ ಸಾಧನ. ಭಾಷೆ ಎಂಬುದು ಭಾವನೆಗಳನ್ನು ಕೆರಳಿಸಬಾರದು. ಬಾಂಧವ್ಯ ಬೆಸೆಯಬೇಕು. ನಮ್ಮ ರಾಜ್ಯದಲ್ಲಿರುವ ತಮಿಳು ಭಾಷಿಕರು ಕನ್ನಡ ಕಲಿತು ಕನ್ನಡಿಗರ ಜೊತೆಗೆ ಉತ್ತಮ ಬಾಂಧವ್ಯದಿಂದ ಇದ್ದಾರೆ. ಈ ಸಂದರ್ಭದಲ್ಲಿ ತಮಿಳು ಭಾಷಿಕರು ಹಾಗೂ ರಾಜ್ಯದ ಜನತೆಗೆ ತಿರುವಳ್ಳುವರ್ ದಿನದ ಶುಭಾಶಯ ಕೋರುತ್ತೇನೆ ಎಂದರು.

ಮುಖ್ಯಮಂತ್ರಿಯಾದ ಬಳಿಕ ಪ್ರತಿವರ್ಷ ಇಲ್ಲಿಗೆ ಬಂದು ತಿರುವಳ್ಳುವರ್ ಅವರಿಗೆ ಗೌರವ ಸಲ್ಲಿಸುತ್ತೇನೆ. 9 ವರ್ಷಗಳ ಹಿಂದೆ ಪ್ರತಿಮೆ ಅನಾವರಣ ಆದಾಗಲೂ ಪ್ರತಿಪಕ್ಷ ನಾಯಕನಾಗಿ ಇಲ್ಲಿಗೆ ಬಂದಿದ್ದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News