ನಾವು ಧ್ವನಿಯೆತ್ತದಿದ್ದರೆ ಗೌರಿಯನ್ನ ಮತ್ತೆ ಮತ್ತೆ ಸಾಯಿಸಿದಂತಾಗುತ್ತದೆ: ದಿನೇಶ್ ಅಮೀನ್ ಮಟ್ಟು

Update: 2018-01-29 13:32 GMT

"ಗೌರಿಯ ಹತ್ಯೆ ಸಿದ್ಧಾಂತಕ್ಕಾಗಿ ಮಾಡಿದ ಹತ್ಯೆ"

ಬೆಂಗಳೂರು, ಜ. 29: ಗೌರಿಹತ್ಯೆ ವೈಯಕ್ತಿಕ ಕಾರಣದ ಹತ್ಯೆಯಲ್ಲ, ಬದಲಿಗೆ ಸಿದ್ಧಾಂತಕ್ಕಾಗಿ ಮಾಡಿದ ಹತ್ಯೆ. ಗೌರಿ ಯಾವ ಆಶಯಗಳಿಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ್ದಾಳೆಯೋ ಆ ಆಶಯಗಳನ್ನು ಜೀವಂತವಾಗಿಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ.

 ಸೋಮವಾರ ನಗರದ ಪುರಭವನಲ್ಲಿ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಗೌರಿ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಗೌರಿ ದಿನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೌರಿಯ ಹತ್ಯೆಗೆ ಕಾರಣರಾದವರನ್ನು ಶಿಕ್ಷಿಸಿದರೆ ನಮ್ಮ ಆಶಯ ಈಡೇರುವುದಿಲ್ಲ ಎಂದರು.

ಗೌರಿ ಸಿದ್ಧಾಂತದ ಧ್ವನಿಯಿಟ್ಟುಕೊಂಡಿದ್ದಳು. ಆ ಧ್ವನಿ ಮತ್ತೆ ಕೇಳುವಂತೆ ಮಾಡಬೇಕು. ಈ ಸಂದರ್ಭದಲ್ಲಿ ನಾವೆಲ್ಲರೂ ಧ್ವನಿ ಎತ್ತದಿದ್ದರೆ ಗೌರಿಯನ್ನ ಮತ್ತೆ ಮತ್ತೆ ಸಾಯಿಸಿದಂತಾಗುತ್ತದೆ. ಹೀಗಾಗಿ, ಗೌರಿ ಆಶಯಗಳನ್ನು ಜೀವಂತವಾಗಿರಿಸಲು ಹೋರಾಟ ಮಾಡಬೇಕಿದೆ ಎಂದು ಅವರು ಹೇಳಿದರು.

ರಾಜ್ಯ, ದೇಶ, ವಿಶ್ವದಾದ್ಯಂತ ಗೌರಿ ಪ್ರತಿಧ್ವನಿಸುತ್ತಿದ್ದಾಳೆ. ಅಕ್ಕನನ್ನು ಕಳೆದುಕೊಂಡವರಂತೆ ಎಲ್ಲರೂ ರೋದಿಸತೊಡಗಿದ್ದಾರೆ. ಈ ಪ್ರೀತಿಗೆ ಗೌರಿ ಪಾತ್ರರಾಗಿದ್ದಾರೆ ಎಂದ ಅವರು, ಆಕೆ ತನಗಿಂತ ಚಿಕ್ಕವರನ್ನು ‘ಮರಿ’, ‘ಕೂಸು’ ಎಂದು ಸಂಭೋದಿಸುತ್ತಿದ್ದಳು. ಮಕ್ಕಳನ್ನು ಹೆತ್ತ ತಾಯಿಯಾಗದಿದ್ದರೂ ಲಕ್ಷಾಂತರ ಮಕ್ಕಳಿಗೆ ಪ್ರೀತಿ ಕೊಟ್ಟ ಅಮ್ಮನಾಗಿದ್ದಾಳೆ. ಗೌರಿಯ ಗುಬ್ಬಚ್ಚಿಯಂತಹ ಸಣ್ಣದೇಹದೊಳಗಡೆ ಪ್ರೀತಿ ತುಂಬಿದ ದೊಡ್ಡ ಹೃದಯವಿತ್ತು ಎಂದು ಅವರು ಸ್ಮರಿಸಿದರು.

ಗೌರಿಯಲ್ಲಿ ಅಭೂತಪೂರ್ವ ಮುಗ್ಧತೆಯಿತ್ತು. ಮಕ್ಕಳು ಪ್ರಬುದ್ಧರಾದಂತೆ ಮುಗ್ಧತೆ ಕಳೆದುಕೊಳ್ಳುತ್ತಾರೆ. ಹಿರಿಯರು ಪ್ರಬುದ್ಧತೆ ಜೊತೆಗೆ ಮುಗ್ಧತೆ ಉಳಿಸಿಕೊಳ್ಳಬೇಕು. ಗೌರಿ ಕೊನೆಯವರೆಗೂ ಮುಗ್ಧತೆ ಉಳಿಸಿಕೊಂಡಿದ್ದಳು ಎಂದು ಹೇಳಿದರು.

ಲಂಕೇಶ್ ಶಾಲೆಯ ವಿದ್ಯಾರ್ಥಿಗಳು: ನಾವೆಲ್ಲ ಲಂಕೇಶ್ ಎನ್ನುವ ಏಕೋಪಾಧ್ಯಾಯ ಶಾಲೆಯ ವಿದ್ಯಾರ್ಥಿಗಳು. ಲಂಕೇಶ್ ನನಗೆ ಗುರುಗಳಾಗಿರಲಿಲ್ಲ. ಆದರೆ, ನನ್ನಂತಹ ಲಕ್ಷಾಂತರ ಏಕಲವ್ಯರಿಗೆ ಅವರು ಮಾನಸಗುರುಗಳಾಗಿದ್ದರು. ಲಂಕೇಶ್ ರ ಮೂವರು ಮಕ್ಕಳು ಮಾತ್ರವಲ್ಲ ಲಕ್ಷಾಂತರ ಶಿಷ್ಯರು, ಓದುಗರು, ಅಭಿಮಾನಿಗಳು ಕೂಡ ಲಂಕೇಶರ ವಾರಸುದಾರರು. ಗೌರಿ ಅಪ್ಪನನ್ನು ಮೀರಿಸಿದ್ದಾಳೆ ಎಂದು ಅವರು ತಿಳಿಸಿದರು

ಆ್ಯಕ್ಟಿವ್ ಜರ್ನಲಿಸ್ಟ್: ಗೌರಿ ಕೇವಲ ಜರ್ನಲಿಸ್ಟ್ ಆಗಿರಲಿಲ್ಲ, ಆಕೆ ಆಕ್ಟಿವ್ ಜರ್ನಲಿಸ್ಟ್ ಆಗಿದ್ದರು. ಮುಖಪುಟದ ತಲೆಬರಹ ನೋಡಿದವರು ಆಕೆಯನ್ನು ಮುಖಾಮುಖಿಯಾದಾಗ ಖಂಡಿತ ನಿರಾಶೆಯಾಗುತ್ತಿದ್ದರು. ಕೊನೆಯವರೆಗೂ ಗೌರಿ, ಯಾರನ್ನೂ ವೈಯಕ್ತಿಕವಾಗಿ ದ್ವೇಷಿಸಲಿಲ್ಲ ಎಂದು ಹೇಳಿದರು.

ಲಂಕೇಶ್ ಕೂಡ ಆಕ್ಟಿವ್ ಜರ್ನಲಿಸ್ಟ್ ಆಗಿದ್ದರು. ಅಂದಿನ ಕಾಲದ ಎಲ್ಲ ಆಯಾಮಗಳನ್ನು ಮೀರಿ ಪತ್ರಿಕೆ ಆರಂಭಿಸಿದ್ದರು. 80ರ ದಶಕದಲ್ಲಿ ರೈತ, ದಲಿತ, ಭಾಷಾ ಚಳವಳಿಗಳ ಬೆಂಬಲಕ್ಕೆ ನಿಂತಿದ್ದರು. ಕೊನೆಗೆ ಚುನಾವಣೆ ಎದುರಾದಾಗ ಇಂತಹವರನ್ನೆ ಗೆಲ್ಲಿಸಿ ಎಂದು ಫರ್ಮಾನು ಹೊರಡಿಸುತ್ತಿದ್ದರು. ಕೊನೆಗೆ ತಾವೇ ಒಂದು ರಾಜಕೀಯ ಪಕ್ಷ ಸ್ಥಾಪಿಸಿದರು. ಹಾಗೆ ನೋಡಿದರೆ ಲಂಕೇಶ್ ಕೂಡ ಆಕ್ಟಿವ್ ಜರ್ನಲಿಸ್ಟ್ ಆಗಿದ್ದರು. ಗೌರಿ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋದರೇ ಹೊರತು ಬೇರೆ ಅಡ್ಡದಾರಿ ತುಳಿಯಲಿಲ್ಲ ಎಂದು ಅವರು ನುಡಿದರು.

ಇಂದು ಪತ್ರಿಕೋದ್ಯಮದ ಬಣ್ಣ, ವಿನ್ಯಾಸಗಳು ಬದಲಾಗಿವೆ. ‘ಸುದ್ದಿಗಿಂತ ಜಾಹೀರಾತು, ಓದುಗರಿಗಿಂತ ಗ್ರಾಹಕನೇ ಮುಖ್ಯ’ ಎಂದು ಪತ್ರಿಕೆಯ ಮಾಲಕರು ತಿಳಿದುಕೊಂಡಿರುವುದು ಬೇಸರದ ಸಂಗತಿ. ಸಂವಿಧಾನ ಬದಲಾಯಿಸುವ ಪ್ರಜಾಪ್ರಭುತ್ವದ ಬುಡವನ್ನೆ ಅಲ್ಲಾಡಿಸುತ್ತಿರುವ ಕಾಲವಿದು ಎಂದು ಹೇಳಿದರು.

ಇದೇ ವೇಳೆ ‘ನಾನು ಗೌರಿ’, ‘ಗೌರಿ ಹೂವು’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಹೋರಾಟಗಾರ್ತಿ ಕೆ.ನೀಲಾ, ಡಾ.ವಡ್ಡಗೆರೆ ನಾಗರಾಜಯ್ಯ, ಲೇಖಕಿ ಅಕ್ಷತಾ ಹುಂಚದಕಟ್ಟೆ ಸೇರಿದಂತೆ ಪ್ರಮುಖರಿದ್ದರು.

ನಾವು ಗೌರಿಯನ್ನು ಸಮಾಧಿ ಮಾಡಿಲ್ಲ, ಬದಲಿಗೆ ಬಿತ್ತಿದ್ದೇವೆ. ಅವಳ ವಿಚಾರಗಳು ಬೆಳೆದು ಹೆಮ್ಮರವಾಗಿ ಎಲ್ಲಾ ಕಡೆ ಹರಡಲಿವೆ.

-ಪ್ರಕಾಶ್ ರೈ, ನಟ, ನಿರ್ದೇಶಕ.

.................................

ವೇಮುಲರ ಮರಣ ಕನ್ಹಯ್ಯ ಕುಮಾರ್, ಶೆಹ್ಲಾ ರಶೀದ್, ಜಿಗ್ನೇಶ್ ಮೇವಾನಿಯನ್ನು ಈ ದೇಶಕ್ಕೆ ಕೊಡುಗೆಯಾಗಿ ಕೊಟ್ಟಿದೆ ಮತ್ತು ಗೌರಿಯ ಹತ್ಯೆ ನಾನು, ನನ್ನಂತವರು ಗಟ್ಟಿಯಾಗಿ ಮಾತನಾಡುವಂತೆ ಮಾಡಿದೆ’.

-ಪ್ರಕಾಶ್ ರೈ, ನಟ, ನಿರ್ದೇಶಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News