150 ವರ್ಷಗಳ ಬಳಿಕ ಜ.31ಕ್ಕೆ ಆಕಾಶದಲ್ಲಿ 'ವಿಶಿಷ್ಟ ವಿದ್ಯಮಾನ'!

Update: 2018-01-29 15:06 GMT

ಬೆಂಗಳೂರು, ಜ. 29: 150 ವರ್ಷಗಳ ಬಳಿಕ ಜನವರಿ 31 ರಂದು ಆಗಸದಲ್ಲಿ ಕಾಣಿಸಲಿರುವ ನೀಲಿ, ತಾಮ್ರ, ಕೆಂಪು ಮಿಶ್ರಿತ, ಅಪರೂಪದ ‘ಚಂದ್ರ ಗ್ರಹಣ’ವನ್ನು ಆಸಕ್ತರು ಕಣ್ತುಂಬಿಕೊಳ್ಳಬಹುದು.

ಇದೇ ತಿಂಗಳ 31ರಂದು ಸಂಭವಿಸಲಿರುವ ಚಂದ್ರಗ್ರಹಣದ ಸಂದರ್ಭದಲ್ಲಿ ಚಂದ್ರ ಸಾಮಾನ್ಯ ಹುಣ್ಣಿಮೆಯ ಚಂದ್ರನಿಗಿಂತ ಶೇ.14ರಷ್ಟು ದೊಡ್ಡದಾಗಿಯೂ ಮತ್ತು ಶೇ.30ರಷ್ಟು ಪ್ರಕಾಶಮಾನವಾಗಿಯೂ ಗೋಚರಿಸಲಿದೆ. ಹೀಗಾಗಿ ಇದನ್ನು ‘ದೈತ್ಯ ಚಂದ್ರ’ ಎಂದು ಕರೆಯುತ್ತಾರೆ. ಈ ಅತ್ಯಂತ ಅಪರೂಪದ ರಮ್ಯ, ನೆರಳು-ಬೆಳಕಿನ ಆಟದ ಚಂದ್ರಗ್ರಹಣ ನೇರ ವೀಕ್ಷಣೆಯಿಂದ ಕಣ್ಣುಗಳಿಗೆ ಯಾವುದೇ ರೀತಿಯ ಅಪಾಯವಿಲ್ಲ ಎಂದು ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಗ್ರಹಣದ ಸಂದರ್ಭದಲ್ಲಿ ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ಸಾಲಿನಲ್ಲಿ ನಿಲ್ಲುವ ಕಾರಣ ಭೂಮಿಯ ನೆರಳು ಚಂದ್ರನ ಮೇಲೆ ಬೀಳಲಿದೆ. ಆದುದರಿಂದ ಈ ಅಪರೂಪದ ಚಂದ್ರಗ್ರಹಣ ವೀಕ್ಷಣೆಗೆ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜ.23ಕ್ಕೆ ಸುತ್ತೋಲೆಯನ್ನು ಹೊರಡಿಸಿದೆ.

1866ರ ಮಾರ್ಚ್ 31ರಂದು ಅಂದರೆ 150 ವರ್ಷಗಳ ಹಿಂದೆ ಸಂಭವಿಸಿದ್ದ ನೀಲಿ ಚಂದ್ರ, ದೈತ್ಯ ಚಂದ್ರ ಮತ್ತು ತಾಮ್ರಬಣ್ಣದ ಅತ್ಯಪರೂಪದ ಚಂದ್ರ ಗ್ರಹಣ ಜ.31ರಂದು ದೇಶದಲ್ಲಿ ಮತ್ತೊಮ್ಮೆ ಸಂಭವಿಸಲಿದೆ. ಆ ದಿನ ಸಂಜೆ 6:13ರಿಂದ ಪೂರ್ಣಚಂದ್ರ ಗ್ರಹಣ ಸಂಭವಿಸಲಿದ್ದು, 6:31ರ ಹೊತ್ತಿಗೆ ಗ್ರಹಣವಾಗಲಿದೆ. 7:31ರ ವೇಳೆ ಚಂದ್ರ ಸಂಪೂರ್ಣ ಕೆಂಪಾಗಿ ಗೊಚರಿಸಲಿದ್ದು, ರಾತ್ರಿ 9:38ರ ಸುಮಾರಿಗೆ ಗ್ರಹಣ ಬಿಡಲಿದೆ.

ಭಯಮುಕ್ತ ಚಂದ್ರಗ್ರಹಣ: ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಗೋಚರಿಸಲಿರುವ ಅಪರೂಪದ ಚಂದ್ರಗ್ರಹಣವನ್ನು ಶಾಲಾ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ನೆರೆ ಮನೆಯವರೊಂದಿಗೆ ತಪ್ಪದೆ ವೀಕ್ಷಿಸಿ ಎಂದು ರಾಜ್ಯದಲ್ಲಿ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ, ವಿಜ್ಞಾನ ಪರಿಷತ್ತು ಸೇರಿ ವಿವಿಧ ಸಂಘ-ಸಂಸ್ಥೆಗಳು ಪ್ರಚಾರ ಆಂದೋಲನವನ್ನು ಕೈಗೊಂಡಿವೆ.

ಈ ಬಾರಿಯ ಚಂದ್ರಗ್ರಹಣವನ್ನು ನಿರ್ಭೀತಿಯಿಂದ ಮಕ್ಕಳು, ಗರ್ಭಿಣಿಯರು, ವೃದ್ಧರು ಸೇರಿ ಎಲ್ಲರೂ ವೀಕ್ಷಿಸಬಹುದು. ಆ ಸಮಯದಲ್ಲಿ ಆಹಾರ, ನೀರು ಸೇವಿಸಬಹುದು, ದೈನಂದಿನ ಚಟುವಟಿಕೆಗಳಲ್ಲಿಯೂ ತೊಡಗಬಹುದು. ಇದರಿಂದ ಯಾವುದೇ ಅಪಾಯವಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ.

ಸಾಮೂಹಿಕ ವೀಕ್ಷಣೆ: ಬೆಂಗಳೂರಿನ ಜನತೆಗೆ ಜ.31ರ ಸಂಜೆ 6:31ರ ಹೊತ್ತಿಗೆ ಪೂರ್ಣಚಂದ್ರ ಗ್ರಹಣ ಸಂಭವಿಸಲಿದ್ದು, 7:31ರ ಹೊತ್ತಿಗೆ ಸಂಪೂರ್ಣ ಕೆಂಪಾಗಿ ಚಂದ್ರ ಗೊಚರಿಸಲಿದ್ದಾನೆ.

ಬೆಂಗಳೂರಿನ ಶ್ರೀನಗರ, ಬಸವೇಶ್ವರ ನಗರ, ವಿಜಯನಗರ-ಚಂದ್ರ ಲೇಔಟ್, ರಾಜಾಜಿನಗರ-ಭಾಷ್ಯಂ ವೃತ್ತ, ಕೆಂಗೇರಿ ಉಪನಗರ, ಆರ್.ಟಿ. ನಗರ, ಮತ್ತಿಕೆರೆ-ಜೆಪಿ ಪಾರ್ಕ್ ಸೇರಿದಂತೆ ವಿವಿಧೆಡೆಗಳಲ್ಲಿ ‘ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ’ ಚಂದ್ರ ಗ್ರಹಣ ಸಾಮೂಹಿಕ ವೀಕ್ಷಣೆಗೆ ‘ಟೆಲಿಸ್ಕೋಪ್’ ವ್ಯವಸ್ಥೆ ಕಲ್ಪಿಸಿದೆ.

ಜ.31ರ ಸಂಜೆ 5.18ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುತ್ತದೆ. ಉದಯ ಕಾಲದಲ್ಲಿ (ಬೆಂಗಳೂರಿನಲ್ಲಿ ಸಂಜೆ 6.15ಕ್ಕೆ) ಚಂದ್ರಗ್ರಹಣ ಸಂಭವಿಸಲಿದ್ದು, ಇದನ್ನೇ ‘ಬ್ಲಡ್ ಮೂನ್’ ಎಂದು ಕರೆಯುತ್ತಾರೆ. ಅಂದು ಸಂಜೆ 6.21ಕ್ಕೆ ಗ್ರಹಣದ ಪೂರ್ಣಾವಸ್ಥೆ ಆರಂಭವಾಗಲಿದ್ದು, ರಾತ್ರಿ 7.38ಕ್ಕೆ ಮುಕ್ತಾಯವಾಗಲಿದೆ. ರಾತ್ರಿ 8.42ಕ್ಕೆ ಚಂದ್ರ ಭೂಮಿಯ ದಟ್ಟವಾದ ನೆರಳಿನಿಂದ ಸಂಪೂರ್ಣ ಹೊರಬರುತ್ತದೆ.

ಅತ್ಯಂತ ಅಪರೂಪದ-ರೋಮಾಚನಕಾರಿ ಅನುಭವ ನೀಡುವ ಚಂದ್ರಗ್ರಹಣ ಜ.31ಕ್ಕೆ ಸಂಭವಿಸುತ್ತಿದ್ದು, ಬರಿಗಣ್ಣಿನಿಂದ ಎಲ್ಲರೂ ವೀಕ್ಷಿಸಬಹುದು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವ ದೃಷ್ಟಿಯಿಂದ ಆ ದಿನ ವಿಸ್ಮಯಕಾರಿ ಚಂದ್ರಗ್ರಹಣದ ವಿವರಣೆಯನ್ನು ಜನಸಾಮಾನ್ಯರಿಗೆ ತಿಳಿಸಿಕೊಡಲಾಗುವುದು’
-ಭರತ್ ಕೆಂಗೇರಿ ಉಪನಗರ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ

‘ಜ.31ಕ್ಕೆ ಸಂಪೂರ್ಣ ಚಂದ್ರಗ್ರಹಣವಾಗಲಿದ್ದು, ಈ ಸಾಲಿನ ಮೂರನೇ ಸೂಪರ್ ಮೂನ್ ಇದಾಗಲಿದೆ. ಒಂದೆ ತಿಂಗಳಿನಲ್ಲಿ ಎರಡು ಹುಣ್ಣಿಮೆ ಬರುವುದನ್ನು ಬ್ಲೂಮೂನ್ ಎಂದು ಕರೆಯಲಾಗುತ್ತದೆ. ಇದೊಂದು ಅಪರೂಪ ಮತ್ತು ಕಾಕತಾಳೀಯ. ಇಂತಹ ಸಂದರ್ಭವನ್ನು ವೀಕ್ಷಿಸಲು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತಿಳಿಸಲು ಸೂಚನೆ’
-ಸಾರ್ವಜನಿಕ ಇಲಾಖೆ ಸುತ್ತೋಲೆ

ಚಂದ್ರಗ್ರಹಣ ಕಾಣುವ ಸ್ಥಳಗಳು: ಬೆಂಗಳೂರು-6.15ಕ್ಕೆ, ಮಂಗಳೂರು-6.27ಕ್ಕೆ, ಮೈಸೂರು-6.20ಕ್ಕೆ, ಧಾರವಾಡ-6.22ಕ್ಕೆ, ಬಾಗಲಕೋಟೆ-6.18ಕ್ಕೆ, ಕಲಬುರ್ಗಿ-6.12ಕ್ಕೆ ಚಂದ್ರೋದಯವಾಗಲಿದೆ. ಸಾರ್ವಜನಿಕರಿಗಾಗಿ ನೆಹರು ತಾರಾಲಯವು ಸಂಜೆ 6.30ರಿಂದ ರಾತ್ರಿ 8.30ರ ವರೆಗೂ ಈ ಖಗೋಳ ವಿದ್ಯಮಾನ ವೀಕ್ಷಿಸಲು ಸಿದ್ದತೆ ಮಾಡಿದೆ’
-ನೆಹರೂ ತಾರಾಲಾಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News