ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆಗೆ ಆಗ್ರಹ: ಫೆ.8 ರಂದು ಬಿಸಿಯೂಟ ನೌಕರರಿಂದ ವಿಧಾನಸೌಧ ಚಲೋ

Update: 2018-01-29 17:05 GMT

ಬೆಂಗಳೂರು, ಜ.29: ಭಾರತೀಯ ಕಾರ್ಮಿಕರ ಸಮ್ಮೇಳನದ ಶಿಫಾರಸ್ಸಿನಂತೆಯೆ ಬಿಸಿಯೂಟ ನೌಕರರಿಗೆ ಕನಿಷ್ಠ ಕೂಲಿ ಹಾಗೂ ಸಾಮಾಜಿಕ ಭದ್ರತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಫೆ.8 ರಂದು ಬಿಸಿಯೂಟ ನೌಕರರು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಬಿಸಿಯೂಟ ನೌಕರರ ಒಕ್ಕೂಟದ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳು ಶಾಲಾ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎನ್ನುವ ಉದ್ದೇಶದಿಂದ ಬಿಸಿಯೂಟ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ಲಕ್ಷಾಂತರ ಮಹಿಳೆಯರು ಉದ್ಯೋಗವನ್ನು ಪಡೆದಿದ್ದು, ಜೀವನ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿಗಳಿಂದ ಇದೀಗ ಕೆಲಸ ಕಳೆದುಕೊಳ್ಳುವ ಆತಂಕದ ಸ್ಥಿತಿಯಲ್ಲಿದ್ದಾರೆ. ಮತ್ತೊಂದು ಕಡೆ ಕನಿಷ್ಠ ಜೀವನ ನಡೆಸಲು ಸಾಧ್ಯವಾಗದಂತಹ ಕೂಲಿ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸರಕಾರ ಹಿಂದಿನ ವರ್ಷ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನಾಗಿ ಮಾರ್ಪಡಿಸಲು ನಿರ್ಧರಿಸಲಾಗಿತ್ತು. ಇದರಿಂದಾಗಿ 25 ಲಕ್ಷ ಬಿಸಿಯೂಟ ಮಹಿಳೆಯರು ಶೇ.80ರಷ್ಟು ಉದ್ಯೋಗವನ್ನು ಕಳೆದುಕೊಳ್ಳುವ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ, ರಾಜ್ಯದಲ್ಲಿ ಈಗಾಗಲೇ ಹಲವಾರು ಸರಕಾರಿ ಶಾಲೆಗಳು ಮುಚ್ಚಿರುವುದರಿಂದ ನೂರಾರು ಮಹಿಳೆಯರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಆದುದರಿಂದ ಬಿಸಿಯೂಟ ನೌಕರರಿಗೆ ಉದ್ಯೋಗ ಭದ್ರತೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಬಿಸಿಯೂಟ ಯೋಜನೆ ಅಡಿಯಲ್ಲಿ 25 ಲಕ್ಷ ನೌಕರರು ಅತಿ ಕಡಿಮೆ ವೇತನದಲ್ಲಿ ದುಡಿಯುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಯಾವುದೇ ರೀತಿಯ ವೇತನ ಹೆಚ್ಚಳ ಮಾಡಿಲ್ಲ. ಬದಲಿಗೆ ಹಂತ ಹಂತವಾಗಿ ಕೇಂದ್ರೀಕೃತ ಅಡುಗೆ ಕೇಂದ್ರಗಳನ್ನು ಆರಂಭ ಮಾಡುವ ಮೂಲಕ ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಬಜೆಟ್‌ನಲ್ಲಿ ನೀಡುತ್ತಿದ್ದ ಅನುದಾನ ಕಡಿತಗೊಳಿಸಿ ಯೋಜನೆಯನ್ನು ನಿರ್ನಾಮ ಮಾಡಲು ತಯಾರಿ ನಡೆಸಿದ್ದಾರೆ. ಐಸಿಡಿಎಸ್, ಅಕ್ಷರ ದಾಸೋಹ ಯೋಜನೆ ಹಾಗೂ ಎನ್‌ಆರ್‌ಎಚ್‌ಎಮ್ ಯೋಜನೆಗಳಿಗೆ ಶೇ.60 ರಷ್ಟು ಅನುದಾನವನ್ನು ಕಡಿಮೆ ಮಾಡಿದ್ದು, ದೇಶದ ಕೋಟ್ಯಂತರ ಫಲಾನುಭವಿಗಳಿಗೆ ಸಿಗುತ್ತಿದ್ದ ಸವಲತ್ತುಗಳನ್ನು ಅಮಾನವೀಯವಾಗಿ ಸರಕಾರ ಹಿಂಪಡೆಯಲಾಗಿದೆ ಎಂದರು.

ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೊಷಣೆಗಳು ಸಂಪೂರ್ಣ ಪೊಳ್ಳುತನದಿಂದ ಕೂಡಿದ್ದು, ಈ ಯೋಜನೆಗಳಲ್ಲಿ ಒಂದು ಕೋಟಿ ಜನರಲ್ಲಿ ಶೇ.90 ರಷ್ಟು ಮಹಿಳೆಯರಿದ್ದಾರೆ. ಶೇ.50 ರಷ್ಟು ಫಲಾನುಭವಿ ಮಹಿಳೆಯರಿದ್ದಾರೆ. ಆದರೆ, ಸರಕಾರ ತಾಯಿಯ ಆರೋಗ್ಯ ಮತ್ತು ಆಹಾರಕ್ಕೆ ನೀಡುವ ಅನುದಾನವನ್ನು ಕಡಿತಗೊಳಿಸಿ, ಘೋಷಣೆಗಳ ಮೂಲಕ ಜನರನ್ನು ಮೋಸ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಬೇಡಿಕೆಗಳು: ಬಿಸಿಯೂಟ ನೌಕರರಿಗೆ ಐದು ಸಾವಿರ ವೇತನ ನೀಡಬೇಕು. ಕನಿಷ್ಠ ಕೂಲಿ ಹಾಗು ಸಾಮಾಜಿಕ ಭದ್ರತೆ ನೀಡಬೇಕು. ಶಿಕ್ಷಣ ಇಲಾಖೆಯಿಂದ ನೇರವಾಗಿ ಬಿಸಿಯೂಟ ನೌಕರರನ್ನು ಮೇಲ್ವಿಚಾರಣೆ ಮಾಡಬೇಕು. ಪಿಯುಸಿವರೆಗೂ ಬಿಸಿಯೂಟ ಯೋಜನೆ ವಿಸ್ತರಿಸಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ 2 ಅಡುಗೆಯವರನ್ನು ನೇಮಿಸಬೇಕು. ಎಲ್ಲ ನೌಕರರಿಗೂ ರಾಷ್ಟ್ರೀಯ ಸ್ವಾಸ್ಥ ಬಿಮಾ ಯೋಜನೆ ಜಾರಿ ಮಾಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ಕೈ ಬಿಡುವುದನ್ನು ನಿಲ್ಲಿಸಬೇಕು. ಬರಗಾಲ ಹಾಗೂ ವಿಶೇಷ ದಿನಗಳಲ್ಲಿ ವೇತನ ನೀಡಬೇಕು. ನೌಕರರಿಗೆ ಪೆನ್ಷನ್ ಸೌಲಭ್ಯ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News