ರಶ್ಯ: ಬಂಧಿತ ಪ್ರತಿಪಕ್ಷ ನಾಯಕನ ಬಿಡುಗಡೆ

Update: 2018-01-29 18:51 GMT

ಮಾಸ್ಕೊ, ಜ. 29: ಮಾರ್ಚ್‌ನಲ್ಲಿ ನಡೆಯಲಿರುವ ಚುನಾವಣೆಯ ವಿರುದ್ಧ ಸಾವಿರಾರು ಮಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವಂತೆಯೇ, ಮಾಸ್ಕೊದಲ್ಲಿ ಬಂಧನಕ್ಕೊಳಗಾದ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಅವರನ್ನು ಬಿಡುಗಡೆ ಮಾಡಲಾಗಿದೆ.

ಈ ಚುನಾವಣೆಯು ಮತ್ತೊಮ್ಮೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಅಧಿಕಾರಕ್ಕೆ ತರುವುದು ಎಂದು ವ್ಯಾಪಕವಾಗಿ ಭಾವಿಸಲಾಗಿದೆ.

‘‘ನಾನೀಗ ಸ್ವತಂತ್ರನಾಗಿದ್ದೇನೆ’’ ಎಂಬುದಾಗಿ ನವಾಲ್ನಿ ರವಿವಾರ ರಾತ್ರಿ ಟ್ವಿಟರ್‌ನಲ್ಲಿ ಹೇಳಿದರು. ‘‘ಇವತ್ತು ಅತ್ಯಂತ ಮಹತ್ವದ ದಿನವಾಗಿದೆ. ತಮ್ಮ ಹಕ್ಕುಗಳಿಗಾಗಿ ಹೋರಾಡಲು ಹೆದರದ ಎಲ್ಲರಿಗೂ ನನ್ನ ವಂದನೆಗಳು’’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರತಿಪಕ್ಷದ ನಾಯಕನ ಕರೆಗೆ ಓಗೊಟ್ಟು ಸಾವಿರಾರು ಮಂದಿ ಮುಂಬರುವ ‘ನಕಲಿ ಚುನಾವಣೆ’ಯ ವಿರುದ್ಧ ಹತ್ತಕ್ಕೂ ಅಧಿಕ ನಗರಗಳಲ್ಲಿ ಮರಗಟ್ಟುವ ಚಳಿಯನ್ನೂ ಲೆಕ್ಕಿಸದೆ ಪ್ರತಿಭಟಿಸಿದರು.

ರವಿವಾರ ಮಾಸ್ಕೊ ಮಧ್ಯಭಾಗದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ನವಾಲ್ನಿ ‘‘ಸುಲಿಗೆಕೋರರು ಮತ್ತು ಕಳ್ಳರು’ ಎಂಬುದಾಗಿ ಸರಕಾರವನ್ನು ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಅವರನ್ನು ಪೊಲೀಸರು ಬಂಧಿಸಿ ಜೈಲಿಗೆ ಕರೆದೊಯ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News