ವಿದೇಶ ಪ್ರವಾಸ: 'ಪ್ರಧಾನಿ ಜತೆಗಿರುವ ಖಾಸಗಿ ವ್ಯಕ್ತಿಗಳ ಪಟ್ಟಿ ನೀಡಿ'

Update: 2018-01-30 08:11 GMT

ಹೊಸದಿಲ್ಲಿ, ಜ.30: ಪ್ರಧಾನಿ ನರೇಂದ್ರ ಮೋದಿಯ ಅಧಿಕೃತ ವಿದೇಶ ಪ್ರವಾಸದ ವೇಳೆ ಅವರ ಜತೆ ಹೋಗುವ ಗಣ್ಯರು ಹಾಗೂ ಉದ್ಯಮಿಗಳ ಬಗ್ಗೆ ‘ಭದ್ರತಾ ಕಾರಣಗಳು’ ಎಂಬ ನೆಪವೊಡ್ಡಿ ಮಾಹಿತಿ ನಿರಾಕರಿಸಲು ಪ್ರಧಾನಿ ಕಾರ್ಯಾಲಯ ನಡೆಸಿದ ಸತತ ಪ್ರಯತ್ನಗಳ ಹೊರತಾಗಿಯೂ ಮುಖ್ಯ ಮಾಹಿತಿ ಆಯೋಗವು 2014 ಹಾಗೂ 2017ರ ನಡುವೆ ಸರಕಾರಿ ವೆಚ್ಚದಲ್ಲಿ ಪ್ರಧಾನಿಯ ವಿದೇಶ ಪ್ರವಾಸದ ಸಂದರ್ಭ ಅವರ ಜತೆಗಿರುವ ಅವರ ಭದ್ರತೆಗೆ ಸಂಬಂಧಪಡದ ಖಾಸಗಿ ವ್ಯಕ್ತಿಗಳ ಹೆಸರು/ಪಟ್ಟಿ ನೀಡುವಂತೆ ಆದೇಶಿಸಿದೆ.

''ಪ್ರಧಾನಿಯ ಅಂತಾರಾಷ್ಟ್ರೀಯ ಪ್ರವಾಸದ ಸಂದರ್ಭ ಅವರ ಜತೆಗಿರುವ ಖಾಸಗಿ ಉದ್ಯಮ ಸಂಸ್ಥೆಗಳ ಸಿಇಒಗಳು, ಮಾಲಕರು, ಪಾಲುದಾರರು, ಖಾಸಗಿ ಉದ್ಯಮ ಸಂಸ್ಥೆಗಳ ಅಧಿಕಾರಿಗಳ ಮುಂತಾದವರ ಪಟ್ಟಿ ನೀಡಬೇಕು'' ಎಂದು ಕೋರಿ ನೀರಜ್ ಶರ್ಮ ಎಂಬವರು ಕಳೆದ ವರ್ಷದ ಜುಲೈಯಲ್ಲಿ ಸಲ್ಲಿಸಿದ್ದ ಅಪೀಲನ್ನು ಪರಿಗಣಿಸಿ ಮುಖ್ಯ ಮಾಹಿತಿ ಆಯುಕ್ತ ಆರ್.ಕೆ.ಮಾಥುರ್ ಮೇಲಿನ ಆದೇಶ ನೀಡಿದ್ದಾರೆ.

ಪ್ರಧಾನಿ ಜತೆ ಪ್ರಯಾಣಿಸಲು ಆಯ್ಕೆ ಮಾಡುವಾಗ ಅನುಸರಿಸಲಾಗುವ ಮಾನದಂಡದ ಬಗ್ಗೆಯೂ ಶರ್ಮ ಮಾಹಿತಿ ಕೇಳಿದ್ದರು. ಸೆಪ್ಟೆಂಬರ್ 1, 2017ರಂದು ಇದಕ್ಕೆ ಉತ್ತರ ನೀಡಿದ ಪ್ರಧಾನಿ ಕಾರ್ಯಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ, ಪ್ರಧಾನಿಯ ದೇಶೀಯ ಮತ್ತು ವಿದೇಶಿ ಪ್ರವಾಸಗಳ ಮಾಹಿತಿ ಪಿಎಂಒ ವೆಬ್‌ಸೈಟ್ ನಲ್ಲಿ ಲಭ್ಯವಿವೆ ಎಂದು ಹೇಳಿದ್ದರಲ್ಲದೆ, ಅವರ ಜತೆಗೆ ಪ್ರಯಾಣಿಸುವ ನಿಯೋಗಗಳ ಸದಸ್ಯರ ಬಗೆಗಿನ ಮಾಹಿತಿಯನ್ನು ಸುರಕ್ಷಾ ಕಾರಣಗಳಿಗಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಹಾಗೂ ಆರ್‌ಟಿಐ ಕಾಯಿದೆ 2005ರ ಅನ್ವಯ ಈ ಮಾಹಿತಿ ನೀಡುವುದರಿಂದ ವಿನಾಯಿತಿಯಿದೆ ಎಂದೂ ಹೇಳಿದ್ದರು.

ಇದರಿಂದ ತೃಪ್ತರಾಗದ ಶರ್ಮ ಸೆಪ್ಟೆಂಬರ್ 29, 2017ರಂದು ಎರಡನೇ ಬಾರಿ ಅಪೀಲು ಸಲ್ಲಿಸಿ ತಾವು ಕೇಳಿದ ಮಾಹಿತಿ ನೀಡಲಾಗಿಲ್ಲ ಹಾಗೂ ಮಧ್ಯಾಂತರ ವರದಿ ನೀಡುವ ಮೂಲಕ ಆರ್‌ಟಿಐ ಅರ್ಜಿಗೆ ಉತ್ತರವನ್ನು ಉದ್ದೇಶಪೂರ್ವಕವಾಗಿ ವಿಳಂಬಿಸುತ್ತಿದ್ದಾರೆಂದು ಹೇಳಿದ್ದರು. ಈಗಿನ ಪ್ರಧಾನಿ ಕಾರ್ಯಾಲಯ ನೀಡಲು ನಿರಾಕರಿಸಿದಂತಹ ಮಾಹಿತಿಗಳು ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ವೆಬ್ ತಾಣದಲ್ಲಿ ಲಭ್ಯವಿತ್ತು ಎಂದೂ ದೂರುದಾರ ಶರ್ಮ ತಿಳಿಸಿದ್ದರು.

ಪ್ರಧಾನಿಯ ಜತೆಗಿರುವ ನಿಯೋಗದ ಸದಸ್ಯರನ್ನು ಟಿವಿ ಚಾನೆಲುಗಳಲ್ಲಿ ಕಾಣಬಹುದು ಹಾಗೂ ಪತ್ರಿಕೆಗಳಲ್ಲೂ ಅವರ ಹೆಸರುಗಳು ಉಲ್ಲೇಖಗೊಂಡಿವೆ ಎಂದು ಶರ್ಮ ಅವರ ಎರಡನೇ ದೂರಿಗೆ ನೀಡಿದ ಉತ್ತರದಲ್ಲಿ ಪ್ರಧಾನಿ ಕಾರ್ಯಾಲಯವು ತಿಳಿಸಿತ್ತು. ನಿಯೋಗದ ಸದಸ್ಯರು ಮಾಧ್ಯಮಕ್ಕೆ ಕಾಣಿಸುವುದಾದರೆ ಭದ್ರತಾ ಸಮಸ್ಯೆಗಳಿಲ್ಲವೇ ಎಂದು ಶರ್ಮ ಪ್ರಶ್ನಿಸಿದ್ದರು.

ಪ್ರಧಾನಿ ಜತೆಗಿರುವ ಖಾಸಗಿ ನಿಯೋಗದ ಖರ್ಚುವೆಚ್ಚಗಳನ್ನು ಸರಕಾರವೇ ನಿಭಾಯಿಸುವುದರಿಂದ ಈ ಮಾಹಿತಿ ಸಾರ್ವಜನಿಕರಿಗೆ ನೀಡಬೇಕಿದೆ, ತಾನೇನು ನಿಯೋಗದಲ್ಲಿರುವ ಎಲ್ಲಾ ರಾಜತಾಂತ್ರಿಕರ ಹಾಗೂ ಭದ್ರತಾ ಸಿಬ್ಬಂದಿಯ ಮಾಹಿತಿ ಕೇಳುತ್ತಿಲ್ಲ ಎಂದು ಶರ್ಮ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಅವರ ಅಪೀಲನ್ನು ಎತ್ತಿ ಹಿಡಿದಿರುವ ಮುಖ್ಯ ಮಾಹಿತಿ ಆಯುಕ್ತರು ಪ್ರಧಾನಿಯ ವಿದೇಶ ಪ್ರವಾಸಗಳಿಗೆ ಅವರ ಜತೆ ತೆರಳುವ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಇರುವ ಇತರ ಖಾಸಗಿ ವ್ಯಕ್ತಿಗಳ ಹೆಸರುಗಳ ಪಟ್ಟಿಯನ್ನು ಆದೇಶದ ಪ್ರತಿ ದೊರೆತ 30 ದಿನಗಳೊಳಗಾಗಿ ನೀಡಬೇಕೆಂದು ಪ್ರಧಾನಿ ಕಾರ್ಯಾಲಯಕ್ಕೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News