ಎಸ್‌ಐಟಿ ಅವಧಿ ಒಂದು ವರ್ಷ ವಿಸ್ತರಣೆಗೆ ಸಚಿವ ಸಂಪುಟ ನಿರ್ಣಯ

Update: 2018-01-31 18:39 GMT

ಬೆಂಗಳೂರು, ಜ.31: ರಾಜ್ಯದ ಕಾರವಾರ ಹಾಗೂ ಮಂಗಳೂರು ಬಂದರು ಮೂಲಕ ಅಕ್ರಮವಾಗಿ ಅದಿರು ಸಾಗಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಕೈ ಬಿಟ್ಟಿರುವ 76 ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಜ್ಯದ ಎಸ್‌ಐಟಿಯ ಕಾರ್ಯಾವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಣೆಗೆ ಸಚಿವ ಸಂಪುಟ ಸಭೆ ಮಹತ್ವದ ನಿರ್ಣಯಗೊಂಡಿದೆ.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ಪ್ರಕಟಿಸಿದರು.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಕೋಟ್ಯಂತರ ರೂ.ಮೌಲ್ಯದ ಕಬ್ಬಿಣದ ಅದಿರು ನಾಪತ್ತೆಯಾಗಿರುವ ಬಗ್ಗೆ ಸುದೀರ್ಘ ತನಿಖೆ ನಡೆಸಿ ಲೋಕಾಯುಕ್ತರು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ಸವಿವರ ವರದಿ ಅನ್ವಯ ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ರಾಜ್ಯ ಸರಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಆದರೆ, ಹಲವು ತಿಂಗಳುಗಳಿಂದ ತನಿಖೆ ನಡೆಸದೆ ಸೂಕ್ತ ಸಾಕ್ಷಾಧಾರಗಳಿಲ್ಲ ಎಂದು ಸಿಬಿಐ ಈ ಪ್ರಕರಣಗಳನ್ನು ರಾಜ್ಯ ಸರಕಾರಕ್ಕೆ ವಾಪಸ್ ಕಳುಹಿಸಿತ್ತು ಎಂದು ಅವರು ಹೇಳಿದರು.

ಇದೀಗ ಅಕ್ರಮ ಗಣಿಗಾರಿಕೆ ಕುರಿತ ತನಿಖೆಯನ್ನು ವಿಶೇಷ ತನಿಖಾ ತಂಡದ ಮೂಲಕ ಮರು ತನಿಖೆ ನಡೆಸಲು ಕಳೆದ ಸಚಿವ ಸಂಪುಟ ಸಭೆ ಸಮ್ಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಗಣಿಗಾರಿಕೆಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗಾಗಿ ಲೋಕಾಯುಕ್ತದಿಂದ ರಚನೆಗೊಂಡ ವಿಶೇಷ ತನಿಖಾ ತಂಡದ ಅವಧಿಯನ್ನು ಪ್ರಸಕ್ತ ಸಾಲಿನ ಜ.24 ರಿಂದ ಒಂದು ವರ್ಷದ ಅವಧಿಗೆ ವಿಸ್ತರಿಸಲು ಸಂಪುಟ ನಿರ್ಧರಿಸಿದೆ ಎಂದು ಜಯಚಂದ್ರ ಹೇಳಿದರು. ಈ ಮೊದಲು ಎಸ್‌ಐಟಿಯಲ್ಲಿ ಒಟ್ಟು 73 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ 28 ಪ್ರಕರಣಗಳಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದೆ. ಅಲ್ಲದೆ, 20 ಪ್ರಕರಣಗಳಲ್ಲಿ ವಿಚಾರಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿದೆ. ಒಂದು ಪ್ರಕರಣ ಬಿಡುಗಡೆ ಹೊಂದಿದೆ. ಏಳು ಪ್ರಕರಣಗಳು ವಿಚಾರಣೆಯ ಹಂತದಲ್ಲಿದೆ ಎಂದು ಅವರು ತಿಳಿಸಿದರು.

ಎರಡು ಪ್ರಕರಣಗಳು ತನಿಖಾ ಹಂತದಲ್ಲಿದೆ. ಅಂತೆಯೇ, 19 ಪ್ರಕರಣಗಳಲ್ಲಿ ‘ಬಿ’ ವರದಿ ಸಲ್ಲಿಕೆಯಾಗಿದೆ. ಎರಡು ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ದೊರೆತಿದೆ. ಜತೆಗೆ 26 ಪ್ರಕರಣಗಳು ತನಿಖೆಯ ಪ್ರಗತಿಯಲ್ಲಿದೆ. ಐದು ಪ್ರಕರಣಗಳಲ್ಲಿ ಅಭಿಯೋಜನೆಗೆ ಇನ್ನೂ ಅನುಮತಿ ದೊರೆತಿಲ್ಲ. ಸಕ್ರಿಯವಾಗಿ ತನಿಖೆಯಲ್ಲಿರುವ ಪ್ರಕರಣಗಳ ಸಂಖ್ಯೆ 19. ಸಂಪುಟ ಸಭೆಯ ಇಂದಿನ ನಿರ್ಧಾರದಿಂದ ಇದೀಗ ಮತ್ತೆ 76 ಪ್ರಕರಣಗಳು ಎಸ್‌ಐಟಿ ತನಿಖೆಯ ತೆಕ್ಕೆಗೆ ಒಳಪಡಲಿದೆ ಎಂದು ಅವರು ಹೇಳಿದರು.

ಬಹುತೇಕ ಪ್ರಕರಣಗಳಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಸಮರ್ಥವಾಗಿ ತನಿಖೆ ನಡೆಸಲು ಯಾವುದೆ ಕಾರ್ಯ ಒತ್ತಡವಿಲ್ಲ. ಆದಾಗ್ಯೂ ಅವಶ್ಯಕ ಸಿಬ್ಬಂದಿ ಅಥವಾ ಇನ್ನಿತರೆ ಸವಲತ್ತು ಸೌಲಭ್ಯ ಬಯಸಿದರೆ ಅವುಗಳನ್ನು ಸರಕಾರ ಒದಗಿಸಲಿದೆ ಎಂದು ಜಯಚಂದ್ರ ಮಾಹಿತಿ ನೀಡಿದರು.

ರಾಜ್ಯದ 2,85,98,975 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು 1028 ಹಡಗಿನಲ್ಲಿ ತುಂಬಿ ಸಾಗಣೆ ಮಾಡಲಾಗಿದೆ. ಗೋವಾ, ಪಣಜಿ ಮತ್ತು ಮರ್ಮಗೋವಾ ಬಂದರಿನಲ್ಲಿ ನಡೆದಿದೆ ಎನ್ನಲಾದ ಪ್ರಕರಣಗಳನ್ನು ಸಿಬಿಐ ತನ್ನ ತನಿಖೆಯಲ್ಲಿ ಈಗಾಗಲೇ ಮುಕ್ತಾಯಗೊಳಿಸಿದೆ ಎಂದು ಅವರು ಹೇಳಿದರು.

ತಮಿಳುನಾಡಿನ ಎರಡು ಬಂದರಿನಲ್ಲಿ ನಡೆದಿದೆ ಎನ್ನಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ನಡೆಸಲು ಸಿಬಿಐಗೆ ಇನ್ನೂ ಅನುಮತಿ ದೊರೆತಿಲ್ಲ. ಆಂಧ್ರಪ್ರದೇಶದಲ್ಲಿನ ಮೂರು ಬಂದರುಗಳಲ್ಲಿ ನಡೆದಿದೆ ಎನ್ನಲಾದ ಪ್ರಕರಣಗಳನ್ನು ಸಿಬಿಐ ತನಿಖೆ ನಡೆಸುತ್ತಿದೆ ಎಂದು ಜಯಚಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News