ಛತ್ತೀಸ್‌ಗಢ: ಮತದಾರರ ಓಲೈಕೆಗೆ 'ಸ್ಮಾರ್ಟ್' ರಾಜಕೀಯ !

Update: 2018-02-01 04:28 GMT

ರಾಯಪುರ, ಫೆ. 1: ವರ್ಷಾಂತ್ಯದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮತದಾರರ ಓಲೈಕೆಗೆ ಆಡಳಿತಾರೂಢ ಬಿಜೆಪಿ ಮುಂದಾಗಿದ್ದು, ರಾಜ್ಯದಲ್ಲಿ 50 ಲಕ್ಷ ಮಹಿಳೆಯರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಸ್ಮಾರ್ಟ್‌ಫೋನ್‌ಗಳನ್ನು ವಿತರಿಸಲು ನಿರ್ಧರಿಸಿದೆ.

ಕಳೆದ ವರ್ಷ ಘೋಷಿಸಿದ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಸಂಚಾರ ಕ್ರಾಂತಿ ಯೋಜನೆ ಅಂಗವಾಗಿ ಮೊಬೈಲ್ ವಿತರಿಸಲಾಗುತ್ತಿದೆ. ಸರ್ಕಾರದ ಕ್ರಮವನ್ನು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಸಂವಿಧಾನ ವಿರೋಧಿ ಎಂದು ಬಣ್ಣಿಸಿದ್ದು, ಇದು ರಾಜಕೀಯ ಪ್ರೇರಿತ ಕ್ರಮ ಎಂದು ಕಟುವಾಗಿ ಟೀಕಿಸಿದೆ.

"ನಾನು ಒಳ್ಳೆಯ ಆಡಳಿತಕ್ಕೆ ಒತ್ತು ನಿಡಿದ್ದೇನೆ. ಒಳ್ಳೆಯ ಆಡಳಿತ ರಾಜಕಾರಣ ಎನ್ನುವುದಾದರೆ ಅಡ್ಡಿಯೇನೂ ಇಲ್ಲ" ಎಂದು 2003ರಿಂದ ಅಧಿಕಾರದಲ್ಲಿರುವ ರಮಣ್ ಸಿಂಗ್ ತಿರುಗೇಟು ನೀಡಿದ್ದಾರೆ.

ಸಂಚಾರ ಕ್ರಾಂತಿ ಯೋಜನೆ ಹಲವು ಲಾಭಗಳನ್ನು ಹೊಂದಿದ್ದು, ಇದಕ್ಕೆ ಪರ್ಯಾಯ ಇಲ್ಲ. ಸಾಮಾಜಿಕ- ಆರ್ಥಿಕ ಉನ್ನತಿಗೆ ಹಾಗೂ ಸಬಲೀಕರಣಕ್ಕೆ ಇದು ಪ್ರಮುಖ ಸಾಧನ. ಮಹಿಳೆಯರಿಗೆ ಇದನ್ನು ವಿತರಿಸುವ ಮೂಲಕ ಅವರ ಸಬಲೀಕರಣಕ್ಕೆ ಮುಂದಾಗಿದ್ದೇವೆ. ಇದು ಗ್ರಾಮೀಣ ಪ್ರದೇಶದ ಜನಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಲಿದೆ" ಎಂದು ಸಿಎಂ ಸಮರ್ಥಿಸಿಕೊಂಡಿದ್ದಾರೆ.

ಸರ್ಕಾರದ ಯೋಜನೆ ಅನ್ವಯ 40.6 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಮೀಣ ಮಹಿಳೆಯರಿಗೆ ನೀಡಲಾಗುತ್ತದೆ. ನಗರದ ಮಹಿಳೆಯರಿಗೆ 5.60 ಲಕ್ಷ ಫೋನ್‌ಗಳನ್ನು ನೀಡಲಾಗುತ್ತಿದ್ದು, 40 ಸಾವಿರ ಫೋನ್‌ಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ನೀಡಲು ಉದ್ದೇಶಿಸಲಾಗಿದೆ. ಛತ್ತೀಸ್‌ಗಢದಲ್ಲಿ ಶೇಕಡ 29.15 ಮಂದಿ ಮಾತ್ರ ಮೊಬೈಲ್ ಬಳಸುತ್ತಿದ್ದು, ಈ ಪ್ರಮಾಣ ದೇಶದಲ್ಲೇ ಕನಿಷ್ಠ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News