ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿಗಳಿಗೆ ಗುಂಡೇಟು

Update: 2018-02-02 12:54 GMT

ಬೆಂಗಳೂರು, ಫೆ.2: ಪೊಲೀಸರ ಮೇಲೆ ಹಲ್ಲೆ ನಡೆಸಿ ರೈಫಲ್ ಕಸಿದುಕೊಂಡು ಪರಾರಿಯಾಗಿದ್ದ ಆರೋಪ ಪ್ರಕರಣ ಸಂಬಂಧ ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂಲತಃ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭಗೋಲಿ ಗ್ರಾಮದ ನಿವಾಸಿಗಳಾದ ರಾಯ್‌ಸಿಂಗ್(35), ಆಜಂಬಾಯ್‌ಸಿಂಗ್ ಮೆಹರ್(25), ಜಿತೇನ್ ರೇಮಾಸಿಂಗ್ ಪಲಾಶೆ(19), ಸುರೇಶ್ ಕೋದ್ರಿಯಾ ಮೆಹರ್(19) ಹಾಗೂ ಅಬುಬಾಯ್‌ಸಿಂಗ್ ಮೊಹೆರ್(21) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಆಜಂ ಬಾಯ್‌ಸಿಂಗ್ ಮೆಹರ್, ಜಿತೇನ್ ರೇಮಾಸಿಂಗ್ ಪಲಾಶೆ ಮತ್ತು ಸುರೇಶ್ ಕೋದ್ರಿಯಾ ಮೆಹರ್ ಕಾಲಿಗೆ ಗುಂಡು ತಗುಲಿ ಗಾಯವಾಗಿದ್ದು, ಮೂವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಂದ .303 ರೈಫಲ್ ಹಾಗೂ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ತಿಳಿಸಿದ್ದಾರೆ.

ಪ್ರಕರಣದ ವಿವರ: ಜ.18ರಂದು ಕೊಡಿಗೇಹಳ್ಳಿ ಠಾಣೆ ಪೇದೆಗಳಾದ ಪರಮೇಶಪ್ಪಮತ್ತು ಸಿದ್ದಪ್ಪಎಂಬುವವರು ರಾತ್ರಿ ಪಾಳಿಯಲ್ಲಿದ್ದಾಗ ನಾಲ್ವರು ದುಷ್ಕರ್ಮಿಗಳ ತಂಡ ಇವರ ಮೇಲೆ ಹಲ್ಲೆ ನಡೆಸಿ ರೈಫಲ್‌ಅನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಪತ್ತೆಗಾಗಿ ಈಶಾನ್ಯ ವಿಭಾಗದ ಡಿಸಿಪಿ ಗಿರೀಶ್ ಅವರು ಯಲಹಂಕ ಉಪವಿಭಾಗದ ಎಸಿಪಿ ಪ್ರಭಾಕರ್ ಬಾರ್ಕಿ ಅವರನ್ನೊಳಗೊಂಡ ನಾಲ್ಕು ತಂಡಗಳನ್ನು ರಚಿಸಿದ್ದರು. ಎಸಿಪಿ ಪ್ರಭಾಕರ್ ಬಾರ್ಕಿ, ಸಂಪಿಗೆಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅಂಜನ್‌ಕುಮಾರ್, ವಿದ್ಯಾರಣ್ಯಪುರ ಪಿಎಸ್ಸೈ ಅಣ್ಣಯ್ಯ ಹಾಗೂ ಸಿಬ್ಬಂದಿಗಳಾದ ನರಸಿಂಹ ಮತ್ತು ಅರುಣ್‌ಕುಮಾರ್ ತಂಡ ಖಚಿತ ಮಾಹಿತಿ ಮೇರೆಗೆ ಮಧ್ಯಪ್ರದೇಶದ ಥಾರ್ ಜಿಲ್ಲೆಯ ಭಗೋಲಿ ಎಂಬ ಊರಿಗೆ ತೆರಳಿ ಅಲ್ಲಿನ ಪೊಲೀಸರ ಸಹಾಯದಿಂದ ಶಂಕಿತ ಆರೋಪಿ ರಾಯ್‌ಸಿಂಗ್(35) ಎಂಬಾತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಬಂದು ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ಆಯುಕ್ತ ಟಿ.ಸುನೀಲ್ ಕುಮಾರ್ ವಿವರಿಸಿದರು.

ವಿಚಾರಣೆ ವೇಳೆ ಕೊಡಿಗೇಹಳ್ಳಿ ಠಾಣೆಯ ರಾತ್ರಿ ಬೀಟ್ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತೆಗೆದುಕೊಂಡು ಹೋಗಿದ್ದ .303 ರೈಫಲ್ ತನ್ನ ಸಹಚರರ ಬಳಿ ಇದೆ ಎಂದು ರಾಯ್‌ಸಿಂಗ್ ಹೇಳಿದ್ದ. ಸಹಚರರಾದ ಆಜಂಬಾಯ್‌ಸಿಂಗ್ ಮೆಹರ್, ಜಿತೇನ್ ರೇಮಾಸಿಂಗ್ ಪಲಾಶೆ, ಸುರೇಶ್ ಕೋದ್ರಿಯಾ ಮೆಹರ್ ಮತ್ತು ಅಬುಬಾಯ್‌ಸಿಂಗ್ ಯಲಹಂಕ ಉಪನಗರ ಬಳಿಯ ಹೀರಸಾಗರ ರಸ್ತೆ ಕೆಂಪನಹಳ್ಳಿ ಎಂಬ ಊರಿನ ಬಳಿ ಇರುವ ಸರಕಾರಿ ವಸತಿ ಯೋಜನೆಯ ನಿರ್ಮಾಣ ಹಂತದ ಮನೆಗಳಲ್ಲಿರುತ್ತಾರೆ ಎಂದು ಪೊಲೀಸರ ಮುಂದೆ ರಾಯ್‌ಸಿಂಗ್ ಹೇಳಿದ್ದನು ಎಂದು ಸನೀಲ್ ಕುಮಾರ್ ಮಾಹಿತಿ ನೀಡಿದರು.

ಈತನ ಮಾಹಿತಿಯಂತೆ ಉಪ ಪೊಲೀಸ್ ಆಯುಕ್ತರ ನಿರ್ದೇಶನದಂತೆ ವಿದ್ಯಾರಣ್ಯಪುರ ಠಾಣೆ ಎಸ್ಸೈ ರಾಮಮೂರ್ತಿ, ಎಸ್ಸೈ ಅಣ್ಣಯ್ಯ ಹಾಗೂ ಸಿಬ್ಬಂದಿಗಳಾದ ಗೋಪಾಲ್, ಚಿದಂಬರ್ ಚತ್ತರಕ್ಕಿ, ಮಹದೇವಮೂರ್ತಿ, ಚನ್ನಬಸವ ಅವರ ತಂಡ ಆರೋಪಿ ರಾಯ್‌ಸಿಂಗ್‌ನನ್ನು ಕರೆದುಕೊಂಡು ಶುಕ್ರವಾರ ಮುಂಜಾನೆ 3:45ರ ಸುಮಾರಿಗೆ ಯಲಹಂಕ ಉಪನಗರ ಬಳಿಯ ಆಶ್ರಯ ಯೋಜನೆಯ ಮನೆ ಬಳಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಬಂದಿರುವ ವಿಷಯ ತಿಳಿದು ಆರೋಪಿಗಳು ತಮ್ಮ ಬಳಿಯಿದ್ದ ರೈಫಲ್, ಚಾಕು ಮತ್ತು ಕಲ್ಲುಗಳಿಂದ ಎಸ್ಸೈ ರಾಮಮೂರ್ತಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಈ ವೇಳೆ ಎಸ್ಸೈ ರಾಮಮೂರ್ತಿ ಹಾಗೂ ಪಿಎಸ್ಸೈ ಅಣ್ಣಯ್ಯ ಅವರು ಆತ್ಮರಕ್ಷಣೆಗಾಗಿ ತಮ್ಮ ಸರ್ವಿಸ್ ಪಿಸ್ತೂಲ್‌ಗಳಿಂದ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಈ ಗುಂಡು ಮೂವರಿಗೆ ತಗುಲಿ ಗಾಯಗೊಂಡು ಕುಸಿದು ಬಿದ್ದಿದ್ದಾರೆ.

ತಕ್ಷಣ ಪೊಲೀಸರು ಗಾಯಾಳು ಹಾಗೂ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಎಸ್ಸೈ ರಾಮಮೂರ್ತಿ, ಪಿಎಸ್ಸೈ ಅಣ್ಣಯ್ಯ ಹಾಗೂ ಪೇದೆ ಚಿದಂಬರ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News