ಅಧಿವೇಶನ ಕಲಾಪ ಇನ್ನು ‘ಕಾಗದ ರಹಿತ’: ಸಭಾಪತಿ ಶಂಕರಮೂರ್ತಿ

Update: 2018-02-02 12:59 GMT

ಬೆಂಗಳೂರು, ಫೆ. 2: ಹಿಮಾಚಲ ಪ್ರದೇಶದ ಮಾದರಿಯಲ್ಲೆ ವಿಧಾನ ಮಂಡಲ ಅಧಿವೇಶನ ಕಲಾಪ ‘ಕಾಗದ ರಹಿತ’ (ಡಿಜಿಟಲ್) ಆಗುವತ್ತ ಹೆಜ್ಜೆಯನ್ನಿಡುತ್ತಿದ್ದು, ಈ ಬಗ್ಗೆ ಶಾಸಕರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ವಿಧಾನ ಮಂಡಲ ಮುಖ್ಯಸಚೇತಕರ ಸಭೆಯಲ್ಲಿ ಈ ಸಂಬಂಧ ಚರ್ಚೆ ನಡೆಸಲಾಗಿದೆ. ಮುಂದಿನ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗುವ ಸದಸ್ಯರಿಗೆ ಡಿಜಿಟಲ್ ತಂತ್ರಜ್ಞಾನದ ತರಬೇತಿ ನೀಡಬೇಕಾಗುತ್ತದೆ ಎಂದರು.

ಆನ್‌ಲೈನ್ ಮೂಲಕವೇ ಪ್ರಶ್ನೆ: ವಿಧಾನ ಮಂಡಲ ಕಲಾಪ ಕಾಗದ ರಹಿತ ಆಗುವ ನಿಟ್ಟಿನಲ್ಲಿ ಇದೇ ಮೊದಲಬಾರಿಗೆ ಶಾಸಕರಿಂದ ಆನ್‌ಲೈನ್ ಮೂಲಕ ಪ್ರಶ್ನೆ ಕೇಳಲು ಅವಕಾಶ ಕಲ್ಪಿಸಲಾಗಿದೆ. ಈವರೆಗೂ 25ಕ್ಕೂ ಹೆಚ್ಚು ಪ್ರಶ್ನೆಗಳು ಬಂದಿವೆ ಎಂದು ಶಂಕರಮೂರ್ತಿ ತಿಳಿಸಿದರು.

ಜಂಟಿ ಅಧಿವೇಶನ: ಫೆ.5ರ ಸೋಮವಾರ ಬೆಳಗ್ಗೆ 11ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಅನಂತರ ಐದು ದಿನಗಳ ಕಾಲ(ಫೆ.9ರ ವರೆಗೆ) ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ ಎಂದು ಅವರು ವಿವರ ನೀಡಿದರು.

ಬಜೆಟ್ ಮಂಡನೆ: ಫೆ.16ರ ಮಧ್ಯಾಹ್ನ 12:30ಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದು, ಫೆ. 28ರ ವರೆಗೆ ಬಜೆಟ್ ಮೇಲಿನ ಚರ್ಚೆ ನಡೆಯಲಿದೆ ಎಂದು ಶಂಕರಮೂರ್ತಿ ಇದೇ ವೇಳೆ ತಿಳಿಸಿದರು.

ಕೇವಲ 40 ದಿನ ಕಲಾಪ: 2005ರಲ್ಲಿ ಎರಡೂ ಸದನಗಳಲ್ಲಿ ವರ್ಷದಲ್ಲಿ ಕನಿಷ್ಠ 60 ದಿನಗಳ ಕಲಾಪ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, 2015ರಲ್ಲಿ ಮಾತ್ರ 60 ದಿನಗಳ ಕಲಾಪ ನಡೆದಿದ್ದು, ಉಳಿದ ವರ್ಷದಲ್ಲಿ 60 ದಿನಗಳು ನಡೆದಿಲ್ಲ. 2017ರಲ್ಲಿ ಕೇವಲ 40 ದಿನಗಳಷ್ಟೇ ನಡೆಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಬಜೆಟ್ ಅಧಿವೇಶನ ನನ್ನ ಕೊನೆಯ ಅಧಿವೇಶನವಾಗಲಿದ್ದು, ಸಭಾಪತಿಯಾದ ಎಂಟು ವರ್ಷಗಳ ಅವಧಿಯಲ್ಲಿ 15-16 ವಿಧೇಯಕಗಳಷ್ಟೇ ಪೂರ್ಣ ಪ್ರಮಾಣದಲ್ಲಿ ಚರ್ಚೆಯ ಬಳಿಕ ಅಂಗೀಕಾರಗೊಂಡಿವೆ. ಆದರೆ, ನೂರಕ್ಕೂ ಹೆಚ್ಚು ವಿಧೇಯಕಗಳ ಬಗ್ಗೆ ಯಾವುದೇ ಚರ್ಚೆ ಇಲ್ಲದೆ ತರಾತುರಿಯಲ್ಲಿ ಅನುಮೋದನೆ ಪಡೆದುಕೊಂಡಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News