ಕೇಂದ್ರ ಬಜೆಟ್, ಜಿಎಸ್ ಟಿ: ಮೋದಿ ಸರ್ಕಾರದ ವಿರುದ್ಧ ರಾಮ್‌ದೇವ್ ಚಾಟಿ

Update: 2018-02-02 15:27 GMT

ಹೊಸದಿಲ್ಲಿ, ಫೆ.2: ಕೇಂದ್ರ ಸರಕಾರ ಮಂಡಿಸಿದ 2018-19ರ ಸಾಲಿನ ಬಜೆಟ್ ಕುರಿತು ಮಧ್ಯಮವರ್ಗದ ಜನತೆಗೆ ಅಸಮಾಧಾನವಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್ ಹೇಳಿದ್ದಾರೆ.

 ಇಂಡಿಯಾ ಟಿವಿ ನಡೆಸಿದ ಬಜೆಟ್ ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಜೆಟ್ ಬಗ್ಗೆ ಮಧ್ಯಮವರ್ಗದವರಿಗೆ ಅಸಮಾಧಾನವಿದೆ. ಮೋದಿ ಸರಕಾರ ಈ ಕುರಿತು ಗಮನಹರಿಸಬೇಕು ಎಂದರು.

  ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಗಗನಕ್ಕೇರಿದ್ದು, ಈ ಬೆಲೆ ಏರಿಕೆಯನ್ನು ನಿಯಂತ್ರಿಸಿ, ಇಳಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಬೇಕಿದೆ . ಅಲ್ಲದೆ 5 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿಧಿಸಬಾರದು ಎಂದು ರಾಮ್‌ದೇವ್ ಹೇಳಿದರು. ಆಯುರ್ವೇದ ವೈದ್ಯಚಿಕಿತ್ಸಾ ಕ್ರಮವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ರಚಿಸಲಾಗಿರುವ ಆಯುಷ್ ಇಲಾಖೆಯ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿರುವುದಾಗಿ ತಿಳಿಸಿದ ಅವರು, ಇಲಾಖೆಯಲ್ಲಿ ಕುಳಿತಿರುವವರು ಕೇವಲ ‘ಲಾಬಿ’ ನಡೆಸುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆ ಟೀಕಿಸಿದರು.

ಜಿಎಸ್‌ಟಿಯಿಂದ ಜನತೆಗೆ ಆಗುತ್ತಿರುವ ತೊಂದರೆಯ ಬಗ್ಗೆ ಪ್ರತಿಕ್ರಿಯಿಸಿದ ರಾಮ್‌ದೇವ್, ಜಿಎಸ್‌ಟಿ ಪ್ರಕ್ರಿಯೆ ಅತ್ಯಂತ ಜಟಿಲವಾಗಿದ್ದು , ಈ ಕುರಿತು ಸರಕಾರ ಗಮನ ಹರಿಸಬೇಕಿದೆ ಎಂದರು. ದೇಶದ ರೈತರ ಸ್ಥಿತಿ ಕಂಡರೆ ದಿಗಿಲಾಗುತ್ತದೆ. ಕೃಷಿಯಿಂದ ಯಾವುದೇ ಲಾಭ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ತಮ್ಮ ದೈನಂದಿನ ಖರ್ಚಿಗೆ ಸಾಕಾಗುವಷ್ಟು ಆದಾಯ ಮಾತ್ರ ಲಭಿಸುತ್ತಿದೆ ಎಂದರು.

    ದೇಶದ ಸರಕಾರಿ ಶಾಲೆ ಮತ್ತು ಆಸ್ಪತ್ರೆಗಳ ಚಿಂತಾಜನಕ ಪರಿಸ್ಥಿತಿ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಲೋಪಗಳಿವೆ. ಸರಕಾರಿ ಶಾಲೆಗಳ ಜೊತೆಗೇ ಸರಕಾರಿ ಆಸ್ಪತ್ರೆಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಗಂಭೀರ ಸಮಸ್ಯೆಯಾಗಿದೆ ಎಂದು ಉತ್ತರಿಸಿದರು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಬಗ್ಗೆ ಸರಕಾರ ಇನ್ನಷ್ಟು ಗಮನ ನೀಡಿ, ಈ ಕ್ಷೇತ್ರದ ಸೇವೆ ಬಡವರಿಗೆ ಉಚಿತವಾಗಿ ದೊರೆಯುವಂತೆ ಮಾಡಬೇಕಾಗಿದೆ ಎಂದರು.

 ಆದರೂ, ಇದೊಂದು ನಿಷ್ಪಕ್ಷಪಾತದ ಬಜೆಟ್ ಆಗಿದ್ದು, ಜನಸಾಮಾನ್ಯರ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಜನತೆಯ ಪರವಾದ ಬಜೆಟ್ ಆಗಿದೆ . ಜಾತಿವಾದದ ಬಗ್ಗೆ ಸೊಲ್ಲೆತ್ತದೆ ಅಭಿವೃದ್ಧಿಗೊಳ್ಳಬೇಕಿರುವ ಕ್ಷೇತ್ರದ ಬಗ್ಗೆ ಬೆಳಕು ಚೆಲ್ಲಿದೆ. ಇದೇ ಪ್ರಥಮ ಬಾರಿಗೆ ಸರಕಾರವೊಂದು ಬಡವರ ಹಾಗೂ ಸಮಾಜದ ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ಬೃಹತ್ ಮೊತ್ತವನ್ನು ನಿಗದಿಗೊಳಿಸಿದೆ ಎಂದು ರಾಮ್‌ದೇವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News