ಮೃತದೇಹವನ್ನು 70 ಕಿಲೋಮೀಟರ್ ಎಳೆದೊಯ್ದ ಬಸ್!

Update: 2018-02-04 07:26 GMT

ಬೆಂಗಳೂರು, ಫೆ.4: ಬಸ್ಸಿನಡಿಗೆ ಸಿಲುಕಿದ ವ್ಯಕ್ತಿಯ ಮೃತದೇಹವನ್ನು 70 ಕಿಲೋ ಮೀಟರ್‌ವರೆಗೆ ಎಳೆದೊಯ್ದ ವಿಚಿತ್ರವಾದರೂ ಸತ್ಯಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಈ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

"ಅಪಘಾತ ಸಂತ್ರಸ್ತರನ್ನು ಸುಮಾರು 200-300 ಮೀಟರ್ ಎಳೆದುಕೊಂಡು ಹೋದ ಘಟನೆ ನಮಗೆ ಗೊತ್ತು. ಆದರೆ ಇದೊಂದು ತೀರಾ ನಂಬಲಸಾಧ್ಯ ಘಟನೆ" ಎಂದು ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಮೊಹಿನುದ್ದೀನ್ ಎಂಬ ಚಾಲಕ ತಮಿಳುನಾಡಿನ ಕೂನೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಲೀಪರ್ ಬಸ್ ಚಾಲನೆ ಮಾಡುತ್ತಿದ್ದ. "ಬಸ್ಸು ಬೆಂಗಳೂರಿನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಚನ್ನಪಟ್ಟಣಕ್ಕೆ ಬಂದಾಗ ದೊಡ್ಡ ಸದ್ದು ಕೇಳಿಸಿತು. ಬಸ್ಸಿಗೆ ಕಲ್ಲು ಬಡಿದಿರಬೇಕು ಅಂದುಕೊಂಡೆ. ಹಿಂಬದಿಯ ದೃಶ್ಯ ಪ್ರದರ್ಶಿಸುವ ಕನ್ನಡಿಯಲ್ಲಿ ನೋಡಿದಾಗ ಏನೂ ಕಾಣಿಸಲಿಲ್ಲ. ಆದ್ದರಿಂದ ಚಾಲನೆ ಮುಂದುವರಿಸಿದೆ" ಎಂದು ಚಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಬಸ್ಸು ಮುಂಜಾನೆ 2:35ಕ್ಕೆ ಬೆಂಗಳೂರು ತಲುಪಿತು. ಮೈಸೂರು ರಸ್ತೆ ಸ್ಯಾಟಲೈಟ್ ಸ್ಟೇಷನ್, ಮೆಜಿಸ್ಟಿಕ್, ಶಾಂತಿನಗರ ಸ್ಟೇಷನ್‌ಗೆ ಹೋಗಿ ಡಿಪೋಗೆ ಬಂತು. ಮೊಹಿನುದ್ದೀನ್ ವಾಹನ ನಿಲ್ಲಿಸಿ ವಿಶ್ರಾಂತಿಗೆ ತೆರಳಿದ್ದ. ಮುಂಜಾನೆ 8ರ ಸುಮಾರಿಗೆ ಬಸ್ಸನ್ನು ತೊಳೆಯಲು ಮುಂದಾದಾಗ, ಬಸ್ಸಿನ ಅಂಡರ್‌ ಕ್ಯಾರಿಯೇಜ್‌ಗೆ ಮೃತದೇಹ ಸಿಕ್ಕಿಹಾಕಿಕೊಂಡಿರುವುದು ಸ್ವಚ್ಛತಾ ಸಿಬ್ಬಂದಿಯ ಗಮನಕ್ಕೆ ಬಂದು ವಿಲ್ಸನ್‌ ಗಾರ್ಡನ್ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು.

ಪೊಲೀಸರು ಬಂದು ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹತ್ತು ವರ್ಷ ಅನುಭವವಿರುವ ಚಾಲಕ ಮೊಹಿನುದ್ದೀನ್‌ನನ್ನು ನಿರ್ಲಕ್ಷ್ಯದ ಚಾಲನೆ ಮತ್ತು ಸಾಕ್ಷ್ಯನಾಶ ಆರೋಪದಲ್ಲಿ ಬಂಧಿಸಲಾಗಿದೆ. ಇದುವರೆಗೆ ಯಾವ ಅಪಘಾತಕ್ಕೂ ಈತ ಕಾರಣನಾಗಿರಲಿಲ್ಲ. ಬಸ್ಸಿನ ಅಡಿಗೆ ವ್ಯಕ್ತಿ ಬಿದ್ದಿರುವುದು ಗಮನಕ್ಕೇ ಬಂದಿಲ್ಲ ಎಂದು ಚಾಲಕ ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News