ಭಾರತದ ಕ್ಷಿಪಣಿಗಳು ಗಣರಾಜ್ಯೋತ್ಸವ ಪರೇಡ್ ಗೆ ಸೀಮಿತವೇ ? : ಶಿವಸೇನಾ ಸಂಸದನ ಪ್ರಶ್ನೆ

Update: 2018-02-05 13:40 GMT

ಹೊಸದಿಲ್ಲಿ,ಫೆ.5 : ಗಡಿ ನಿಯಂತ್ರಣ ರೇಖೆಯ ಸಮೀಪ ಪಾಕಿಸ್ತಾನದಿಂದ ಸತತ ಕದನ ವಿರಾಮ ಉಲ್ಲಂಘನೆ ನಡೆಯುತ್ತಿರುವುದನ್ನು ಬಲವಾಗಿ ಟೀಕಿಸಿದ ಶಿವಸೇನೆ ಸಂಸದ ಸಂಜಯ್ ರಾವತ್, ಭಾರತ ತನ್ನ ನೆರೆಯ ರಾಷ್ಟ್ರಕ್ಕೆ ತನ್ನ ಶಕ್ತಿ ಪ್ರದರ್ಶನ ನಡೆಸಬೇಕೆಂದು ಹೇಳಿದ್ದಾರೆ. ರವಿವಾರ ಭಿಂಬೆರ್ ಗಾಲಿ ಸೆಕ್ಟರ್ ನಲ್ಲಿ ಮೋರ್ಟರ್ ದಾಳಿಗೆ  ಭಾರತದ ನಾಲ್ಕು ಮಂದಿ ಸೈನಿಕರು ಹತರಾದ ಹಿನ್ನೆಲೆಯಲ್ಲಿ ರಾವತ್ ಅವರ ಹೇಳಿಕೆ ಬಂದಿದೆ.

"ಪಾಕಿಸ್ತಾನ ನಮ್ಮ ಸೈನಿಕರ ವಿರುದ್ಧ ಕ್ಷಿಪಣಿ ಪ್ರಯೋಗಿಸಿದೆ. ನಮ್ಮ ಕ್ಷಿಪಣಿಗಳು ಗಣರಾಜ್ಯೋತ್ಸವ ದಿನದ ಪೆರೇಡ್ ನಲ್ಲಿ ಪ್ರದರ್ಶನಕ್ಕಷ್ಟೇ ಸೀಮಿತವೇ ?'' ಎಂದು ಅವರು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದ ಕಡೆಯಿಂದ ಶೆಲ್ ದಾಳಿ ಪೂಂಚ್ ಜಿಲ್ಲೆಯ ಶಹಾಪುರ ಪ್ರದೇಶದಲ್ಲಿ ರವಿವಾರ ಬೆಳಿಗ್ಗೆ 11.15ರ ಸುಮಾರಿಗೆ ಆರಂಭವಾಗಿದ್ದು ಸಂಜೆಯ ಹೊತ್ತಿಗೆ ಬಲಕೋಟೆ ಸೆಕ್ಟರ್ ನ ಮೆಂಧರ್ ಹಾಗೂ ರಜೌರಿ ಜಿಲ್ಲೆಯ ಮಂಜಕೋಟೆಗೆ ವ್ಯಾಪಿಸಿತ್ತು.

ಭಾರತದ ಸೇನೆ ಪಾಕಿಸ್ತಾನಕ್ಕೆ ತೀವ್ರ ಪ್ರತಿರೋಧವೊಡ್ಡುತ್ತಿದೆ ಎಂದು ಸೇನಾ ವಕ್ತಾರರೊಬ್ಬರು ಹೇಳಿದ್ದಾರೆ. ನಮ್ಮ ಸೈನಿಕರ ಪ್ರಾಣ ಬಲಿ ವ್ಯರ್ಥವಾಗದು, ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದೇವೆ'' ಎಂದರು.

ಕಳೆದ ವರ್ಷ ಪಾಕಿಸ್ತಾನದಿಂದ 147 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದ್ದರೆ 2016ರಲ್ಲಿ ಈ ಸಂಖ್ಯೆ 217 ಆಗಿತ್ತು, 2015ರಲ್ಲಿ 387 ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿದ್ದವು. ಪಾಕಿಸ್ತಾನಿ ಸೇನೆ ಈ ಬಾರಿ ಪ್ರಬಲ ಕ್ಷಿಪಣಿಗಳನ್ನು ಉಪಯೋಗಿಸಿದ್ದವು ಎಂದು ಸೇನಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News