ರಾಜ್ಯವನ್ನು ಬರ ಮುಕ್ತವನ್ನಾಗಿಸಲು ಕೃಷಿ ಭಾಗ್ಯ ಯೋಜನೆ: ವಜುಭಾಯಿ ವಾಲಾ

Update: 2018-02-05 13:45 GMT

ಬೆಂಗಳೂರು, ಫೆ.5: ರಾಜ್ಯವನ್ನು ಬರ ಮುಕ್ತವನ್ನಾಗಿಸಲು, ಮಳೆಯಾಶ್ರಿತ ಕೃಷಿಕರಿಗೆ ನೆರವು ಒದಗಿಸಲು ‘ಕೃಷಿ ಭಾಗ್ಯ ಯೋಜನೆ’ಯನ್ನು ಪ್ರಾರಂಭಿಸಲಾಗಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ಕಿರು ನೀರಾವರಿ ಮತ್ತು ಅಗತ್ಯ ಪರಿಕರಗಳೊಂದಿಗೆ ರೈತರ ಜಮೀನುಗಳಲ್ಲಿ 1.90 ಲಕ್ಷ ಮಳೆ ನೀರು ಕೊಯ್ಲು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಈ ಯೋಜನೆಯಡಿಯಲ್ಲಿ 1,898 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದರು.

8,891 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 2,672 ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ 367 ಕೆರೆ ಮತ್ತು ಎತ್ತಿನಹೊಳೆ ಯೋಜನೆಯಡಿಯಲ್ಲಿ 527 ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ. ನಾಲ್ಕು ವರ್ಷಗಳಲ್ಲಿ 1,654 ಕೋಟಿ ರೂ.ಗಳನ್ನು ಕೃಷಿ ಯಾಂತ್ರೀಕರಣಕ್ಕಾಗಿ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ವಿಮೆ ಯೋಜನೆ (ಪಿಎಂಎಫ್‌ಬಿವೈ) ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಯಲ್ಲಿ 10.46 ಲಕ್ಷ ರೈತರು ಬೆಳೆ ವಿಮೆಯನ್ನು ಹೊಂದಿದ್ದಾರೆ. 6.25 ಲಕ್ಷ ರೈತರು ಇಳುವರಿ ಕೊರತೆಯ ಕಾರಣದಿಂದ ವಿಮೆ ಪರಿಹಾರವಾಗಿ 1,005.96 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

22.27 ಲಕ್ಷ ರೈತರಿಗೆ ಅನುಕೂಲವಾಗುವಂತೆ ಸಹಕಾರ ಸಂಸ್ಥೆಗಳಿಂದ ಪಡೆದಿರುವ 8,165 ಕೋಟಿ ರೂ.ವರೆಗಿನ ಕೃಷಿ ಸಾಲವನ್ನು 2017-18ನೆ ಸಾಲಿನಲ್ಲಿ ಮನ್ನಾ ಮಾಡಲಾಗಿದೆ. 2013ರಲ್ಲಿ ಜಾರಿಗೆ ತಂದ ನೂತನ ಕೃಷಿ ಮಾರಾಟ ನೀತಿಯು ದೇಶದಲ್ಲಿಯೇ ಪ್ರಪ್ರಥಮ ಮಾದರಿಯಾಗಿದೆ. ಈ ನೀತಿಯ ಅಡಿಯಲ್ಲಿ, ತಂತ್ರಜ್ಞಾನ ಆಧಾರಿತ ಆನ್‌ಲೈನ್ ವ್ಯಾಪಾರ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.

302 ಪ್ರಾಥಮಿಕ ಪಶುವೈದ್ಯಕೀಯ ಕೇಂದ್ರಗಳನ್ನು ಪಶು ಚಿಕಿತ್ಸಾಲಯಗಳನ್ನಾಗಿ ಉನ್ನತೀಕರಿಸಲಾಗಿದೆ. 476 ಪಶುವೈದ್ಯಾಧಿಕಾರಿಗಳ ನೇರ ನೇಮಕಾತಿಗೆ ಕ್ರಮ, ಕ್ಷೀರಧಾರೆ ಯೋಜನೆಯಡಿ ನಾಲ್ಕು ವರ್ಷಗಳಲ್ಲಿ 1,206 ಕೋಟಿ ರೂ.ವೆಚ್ಚ ಮಾಡಲಾಗಿದೆ. ಮೀನುಗಾರರಿಗೆ ಡೀಸಲ್ ಸಹಾಯಧನ ನೀಡಲು 284 ಕೋಟಿ ರೂ., ಮೀನು ಉತ್ಪಾದನೆ ಹೆಚ್ಚಿಸಲು ಮತ್ತು ಮೀನು ಕೃಷಿಕರನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿನ ಪ್ರಮುಖ ಕೆರೆಗಳ 2,500 ಹೆಕ್ಟೇರ್ ಪ್ರದೇಶದಲ್ಲಿ ‘ಮತ್ಸ್ಯ ಕೃಷಿ ಆಶಾಕಿರಣ’ ಯೋಜನೆ’ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

13 ಸಾವಿರಕ್ಕಿಂತ ಹೆಚ್ಚಿನ ಮೀನುಗಾರರು ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳಲು ಮತ್ಸ್ಯ ಆಶ್ರಯ ಯೋಜನೆಯು ನೆರವು ನೀಡಿದೆ. ಮೀನುಗಾರಿಕೆ ಬಂದರುಗಳು ಮತ್ತು ಇಳಿದಾಣ ಕೇಂದ್ರಗಳ ನಿರ್ಮಾಣ, ನವೀಕರಣ ಮತ್ತು ಹೂಳೆತ್ತುವಿಕೆಗೆ ಹಾಗೂ ಮೀನುಗಾರಿಕೆ ಬಂದರು ಕಟ್ಟೆಗಳು, ಸೇತುವೆಗಳು, ರಸ್ತೆಗಳು, ಮೀನು ಮರಿ ಕೇಂದ್ರಗಳು ಮತ್ತು ಮೀನುಗಾರಿಕೆ ಮಾರುಕಟ್ಟೆಗಳ ನಿರ್ಮಾಣಕ್ಕಾಗಿ ಐದು ವರ್ಷಗಳಲ್ಲಿ 309 ಕೋಟಿ ರೂ.ವೆಚ್ಚ ಮಾಡಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.

ಜಲ ಸಂಪನ್ಮೂಲ ಇಲಾಖೆಗೆ ಕಳೆದ ಐದು ವರ್ಷಗಳಲ್ಲಿ 58,393 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದ್ದು, ಕಳೆದ ಡಿಸೆಂಬರ್ ಅಂತ್ಯಕ್ಕೆ 43,348 ಕೋಟಿ ರೂ. ಮಾಡಿ, 2.64 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ. ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು (ಗ್ರಾಮಾಂತರ), ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿನ ಬರಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಪುನಶ್ಚೇತನಗೊಳಿಸಲು ಬಹು ನಿರೀಕ್ಷಿತ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಕೆರೆಗಳನ್ನು ಭರ್ತಿ ಮಾಡುವುದಕ್ಕಾಗಿ ಬೆಂಗಳೂರು ನಗರದಿಂದ ಸಂಸ್ಕರಿಸಿದ ಕೊಳಚೆ ನೀರನ್ನು ಬಳಸಿಕೊಳ್ಳುವ ಎರಡು ಪ್ರಮುಖ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು  ತಿಳಿಸಿದರು. ಕರ್ನಾಟಕವು ದೇಶದಲ್ಲಿಯೆ ಹೆಚ್ಚಿನ ಸಂಖ್ಯೆಯಲ್ಲಿ 406 ಹುಲಿಗಳನ್ನು ಹೊಂದಿದೆ. ಇಡೀ ದೇಶದಾದ್ಯಂತ ಇರುವ ಒಟ್ಟು ಆನೆಗಳ ಸಂಖ್ಯೆಯ ಶೇ.25ರಷ್ಟು ಅಂದರೆ ಸುಮಾರು 6,072 ಆನೆಗಳು ಇಲ್ಲಿವೆ. ವನಮಹೋತ್ಸವದ ಅಡಿಯಲ್ಲಿ ಗಿಡ ನೆಡುವ ಬೃಹತ್ ಕಾರ್ಯಕ್ರಮಗಳಿಂದ ಅರಣ್ಯ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕಳೆದ ವರ್ಷ ಸುಮಾರು 3 ಸಾವಿರ ಕಿ.ಮೀ.ಗಳವರೆಗೆ ರಸ್ತೆ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ವಿಸ್ತರಿಸಿದೆ. ಅರಣ್ಯವನ್ನು ರಕ್ಷಿಸುವುದಕ್ಕೆ ಮತ್ತು ಒತ್ತುವರಿದಾರರನ್ನು ನಿವಾರಿಸಲು ಅರಣ್ಯ ಗಡಿಗಳಿಗೆ ತಡೆಗಟ್ಟುಗಳನ್ನು ಅಳವಡಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News