ನಾಡಿನ ಜನರ ನಿರೀಕ್ಷೆ ಹುಸಿ ಮಾಡಿದ ಮೋದಿ

Update: 2018-02-06 04:16 GMT

 ರಾಜ್ಯದಲ್ಲಿ ಬಿಜೆಪಿಯು ಅಮಿತ್ ಶಾ ಮತ್ತು ನರೇಂದ್ರ ಮೋದಿಯವರನ್ನೇ ಮುಂದಿಟ್ಟು ಚುನಾವಣೆ ಎದುರಿಸುವ ತೀರ್ಮಾನವನ್ನು ಮಾಡಿದೆ. ಅಮಿತ್ ಶಾ ಎರಡು ಬಾರಿ ರಾಜ್ಯಕ್ಕೆ ಆಗಮಿಸಿ ಮಾಧ್ಯಮಗಳ ಮೂಲಕ ‘ಚಾಣಕ್ಯ’ನಾಗುವ ಪ್ರಯತ್ನ ನಡೆಸಿದರಾದರೂ ಅದು ಫಲಿಸಲಿಲ್ಲ. ಅಮಿತ್ ಶಾ ನಿರ್ದೇಶನದಂತೆ ಬಿಜೆಪಿ ಮುಖಂಡರು ರಾಜ್ಯದಲ್ಲಿ ಉದ್ವಿಗ್ನ ವಾತಾವರಣವನ್ನು ನಿರ್ಮಾಣ ಮಾಡಲು ಸರ್ವ ಪ್ರಯತ್ನ ಮಾಡಿದರೂ, ಜನತೆಯ ವಿವೇಕ, ಸಮಯ ಪ್ರಜ್ಞೆ, ತಾಳ್ಮೆಯ ಕಾರಣದಿಂದ ಅವರು ಯಶಸ್ವಿಯಾಗಲಿಲ್ಲ. ಅಮಿತ್ ಶಾ ನೇತೃತ್ವದ ಪರಿವರ್ತನಾ ರ್ಯಾಲಿ ಸಂಪೂರ್ಣ ವಿಫಲವಾಯಿತು. ಅಮಿತ್ ಶಾ ಇದ್ದ ಸಮಾರಂಭಕ್ಕೇ ಜನರನ್ನು ಸೇರಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಇದರಿಂದ ಅಮಿತ್ ಶಾ ತೀವ್ರ ಮುಖಭಂಗಕ್ಕೊಳಗಾಗಿ ರಾಜ್ಯದಿಂದ ತೆರಳಿದ್ದರು. ಇದರ ಬೆನ್ನಿಗೇ ರಾಜಸ್ಥಾನದಲ್ಲಿ ಬಿಜೆಪಿಗೆ ಎದುರಾದ ಸೋಲು, ಮತ್ತೆ ಕರ್ನಾಟಕದ ಕಡೆಗೆ ಮುಖ ಹೊರಳಿಸದಂತಹ ಸನ್ನಿವೇಶವನ್ನು ಅಮಿತ್ ಶಾಗೆ ನಿರ್ಮಾಣ ಮಾಡಿದೆ. ಇದೀಗ ಅಂತಿಮವಾಗಿ ಪ್ರಧಾನವೇಷವನ್ನೇ ಕರ್ನಾಟಕದ ಕಣಕ್ಕಿಳಿಸಲಾಗಿದೆ. ಪರಿವರ್ತನಾ ಯಾತ್ರೆಯ ಸಮಾರೋಪ ಸಮಾವೇಶಕ್ಕೆ ಮೋದಿಯೇ ಆಗಮಿಸಿದರು. ಆದರೆ ಮೋದಿ ಆಗಮನದ ಮುಖ್ಯ ಉದ್ದೇಶ ಚದುರಿ ಹೋಗಿರುವ ರಾಜ್ಯ ಬಿಜೆಪಿ ನಾಯಕರನ್ನು ಒಂದುಗೂಡಿಸುವುದಾಗಿತ್ತು. ಈ ಕಾರಣಕ್ಕೇ ಇರಬೇಕು, ಮೋದಿಯಿರುವ ವೇದಿಕೆಯಲ್ಲಿ ಎಲ್ಲ ಭಿನ್ನ ಮತೀಯ ಮುಖಂಡರಿಗೆ ಸಮಾನ ಅವಕಾಶವನ್ನು ನೀಡಲಾಗಿದೆ.

 ಕೇಂದ್ರದ ಕುರಿತಂತೆ ರಾಜ್ಯದ ಜನತೆ ತೀವ್ರ ಅಸಮಾಧಾನವನ್ನು ಹೊಂದಿರುವ ಹೊತ್ತಿನಲ್ಲಿ ಮೋದಿ ಕರ್ನಾಟಕಕ್ಕೆ ಆಗಮಿಸಿದರು. ಮಹಾದಾಯಿ ಯೋಜನೆಯಲ್ಲಿ ಕರ್ನಾಟಕಕ್ಕಾಗಿರುವ ಅನ್ಯಾಯದಿಂದ ಹಿಡಿದು, ಬಜೆಟ್‌ನಲ್ಲಿ ಕರ್ನಾಟಕದ ಕುರಿತ ನಿರ್ಲಕ್ಷವೂ ಜನರನ್ನು ಕೆರಳಿಸಿತ್ತು. ನಿರುದ್ಯೋಗಿಗಳು ಪಕೋಡಾ ಮಾರಲಿ ಎಂಬ ಮೋದಿಯ ಹೇಳಿಕೆಯೂ ರಾಜ್ಯದಲ್ಲಿ ತೀವ್ರ ಟೀಕೆಗೆ ಒಳಗಾಗಿತ್ತು. ನರೇಂದ್ರ ಮೋದಿಯವರು ಆಗಮಿಸುತ್ತಿರುವುದು ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ. ಮೋದಿ ಖಂಡಿತವಾಗಿಯೂ ರಾಜ್ಯದ ಜನರನ್ನು ಮನವೊಲಿಸಲು ಸಿಹಿ ಸುದ್ದಿಗಳೊಂದಿಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಮುಖ್ಯವಾಗಿ ಮಹಾದಾಯಿ ಕುರಿತಂತೆ ಮೋದಿ ವೌನ ಮುರಿದು, ರೈತರ ಪರವಾಗಿ ಮಾತನಾಡಿದ್ದಿದ್ದರೆ ಅದರಿಂದ ರಾಜ್ಯ ಬಿಜೆಪಿಗೆ ಬಹಳಷ್ಟು ಪ್ರಯೋಜನವಾಗುತ್ತಿತ್ತು. ಕುಡಿಯುವ ನೀರಿಗೂ ಉತ್ತರ ಕರ್ನಾಟಕ ಹಪಹಪಿಸುತ್ತಿರುವಾಗ, ಪ್ರವಾಸೋದ್ಯಮದ ನೆಪವೊಡ್ಡಿ ಗೋವಾ ಸರಕಾರ ಮಹಾದಾಯಿ ಯೋಜನೆಗೆ ಅಡ್ಡಿ ಪಡಿಸುತ್ತಿರುವುದು ಪ್ರಧಾನಿಗೆ ತಿಳಿಯದ ವಿಷಯವಲ್ಲ. ಮೋದಿಯವರು ಇಚ್ಛಿಸಿದರೆ ಗೋವಾ ಸರಕಾರವನ್ನು ಒಪ್ಪಿಸುವುದೂ ಕಷ್ಟವಾಗಲಾರದು. ಬಿಜೆಪಿಯ ವರ್ಚಸ್ಸು ರಾಜ್ಯದಲ್ಲಿ ಪಾತಾಳ ತಲುಪಿದೆ. ಅದನ್ನು ಮೇಲೆತ್ತಲು ಬರೇ ಮೋದಿಯ ಒಣ ‘ಭಾಷಣ’ದಿಂದ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಮಹಾದಾಯಿ ಯೋಜನೆಗೆ ಪೂರಕವಾಗುವಂತಹ ಒಂದು ಹೇಳಿಕೆಯನ್ನು ನೀಡಿದ್ದರೂ ಅದು ಬಿಜೆಪಿಗೆ ಜೀವದ್ರವ್ಯವಾಗಿ ಬಿಡುತ್ತಿತ್ತು. ಆದರೆ ಮಹಾದಾಯಿಯ ಕುರಿತಂತೆ ಮಹಾ ವೌನವನ್ನು ತಾಳಿದರು. ರಾಜ್ಯಾದ್ಯಂತ ಈ ಕುರಿತಂತೆ ನಡೆದ ಪ್ರತಿಭಟನೆಯ ಬಗ್ಗೆ ಗೊತ್ತಿದ್ದೂ ಅದರ ಕುರಿತಂತೆ ನಿರ್ಲಕ್ಷ ತಾಳಿದರು. ಸರಿ, ಬಿಜೆಪಿ ಆಡಳಿತಕ್ಕೆ ಬಂದರೆ ಮಾಡಬಹುದಾದ ಕೆಲಸ ಕಾರ್ಯಗಳ ಕುರಿತ ವಿಷಯಗಳನ್ನಾದರೂ ಪ್ರಧಾನಿಯೆನ್ನುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಮಂಡಿಸಬಹುದಿತ್ತು. ವೇದಿಕೆಯಲ್ಲಿ ರಾಜ್ಯಕ್ಕಾಗಿ ಕೆಲವು ಕೊಡುಗೆಗಳನ್ನಾದರೂ ಘೋಷಿಸಬಹುದಿತ್ತು. ಆದರೆ ಇವಾವುದನ್ನೂ ಮಾಡದೇ, ತಾನು ಮಾಡುವ ಭಾಷಣವೇ ಕರ್ನಾಟಕದ ಜನರಿಗೆ ನೀಡುವ ಉಡುಗೊರೆ ಎಂಬಂತೆ ವರ್ತಿಸಿದರು.

ಮುಖ್ಯವಾಗಿ ಮೋದಿಯ ಭಾಷಣದಲ್ಲಿ ಪ್ರಧಾನಿಯ ಮಾತನಲ್ಲಿರಬೇಕಾದ ಘನತೆ ಇರಲಿಲ್ಲ. ಮೂರನೇ ದರ್ಜೆಯ ಭಾಷೆಯಲ್ಲಿ ಅವರು ರಾಜ್ಯ ಸರಕಾರವನ್ನು ನಿಂದಿಸಿದರು. ಭ್ರಷ್ಟಾಚಾರದಲ್ಲಿ ನಂ.1 ಎಂದರು. ಆದರೆ ಅಂತಹ ಮಹಾ ಭ್ರಷ್ಟಾಚಾರ ಪ್ರಕರಣಗಳು ಯಾವ್ಯಾವುವು ಎನ್ನುವ ವಿವರಗಳನ್ನು ನೀಡಲಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದ ಕಾಲದಲ್ಲಿ ನಡೆದ ಭ್ರಷ್ಟಾಚಾರಗಳಿಗೆ ಹೋಲಿಸಿದರೆ, ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ನಡೆದಿರುವ ಸಣ್ಣ ಪುಟ್ಟ ಹಗರಣಗಳು ಏನೇನೂ ಅಲ್ಲ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೇ ಜೈಲಿಗೆ ಹೋಗಿ ಬಂದಿರುವಾಗ, ಸಿದ್ದರಾಮಯ್ಯರನ್ನು ಅತ್ಯಂತ ಕೆಟ್ಟದಾಗಿ ಮೋದಿ ನಿಂದಿಸಿರುವುದು ಅವರ ಹತಾಶೆಗೆ ಹಿಡಿದ ಕನ್ನಡಿ. ಅಭಿವೃದ್ಧಿಯಲ್ಲಿ ರಾಜ್ಯ ಹಿಂದಿದೆ ಎಂದಿದ್ದಾರೆ. ಅಪರಾಧ ಪ್ರಕರಣ ಹೆಚ್ಚಳವಾಗಿದೆ ಎಂದಿದ್ದಾರೆ. ಆದರೆ ಇಂದಿಗೂ ಕರ್ನಾಟಕ ದೇಶಕ್ಕೆ ಮಾದರಿಯಾಗಿದೆ. ಗುಜರಾತ್‌ಗೆ ಹೋಲಿಸಿದರೆ ಶಿಕ್ಷಣ, ಆರೋಗ್ಯ, ತಂತ್ರಜ್ಞಾನ ಇವೆಲ್ಲದರಲ್ಲೂ ಕರ್ನಾಟಕ ಉನ್ನತ ಮಟ್ಟದಲ್ಲಿದೆ. ಕನಿಷ್ಠ ಗುಜರಾತ್, ರಾಜಸ್ಥಾನ, ಹರ್ಯಾಣ, ಉತ್ತರ ಪ್ರದೇಶಗಳ ಜೀವನ ಮಟ್ಟವನ್ನು ಕರ್ನಾಟಕಕ್ಕೆ ಹೋಲಿಸಿ ನೋಡಿದರೂ ಪ್ರಧಾನಿಯ ಮಾತುಗಳಲ್ಲಿರುವ ಪೊಳ್ಳುತನ ಬಯಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಆಮ್ಲಜನಕದ ಸಿಲಿಂಡರ್ ಕೊರತೆಯಿಂದ ಒಂದೇ ವಾರದಲ್ಲಿ ಮುನ್ನೂರಕ್ಕೂ ಅಧಿಕ ಮಕ್ಕಳು ಮೃತಪಟ್ಟರು. ಅಂತಹ ಯಾವ ಘಟನೆಗಳೂ ಕರ್ನಾಟಕದಲ್ಲಿ ಈವರೆಗೆ ನಡೆದಿಲ್ಲ. ರಾಜಸ್ಥಾನ ಗುಂಪು ಹತ್ಯೆ ಮತ್ತು ಅತ್ಯಾಚಾರಗಳಿಗಾಗಿ ಕುಖ್ಯಾತವಾಗುತ್ತಿದೆ. ಕರ್ನಾಟಕದ ಸ್ಥಿತಿ ರಾಜಸ್ಥಾನಕ್ಕೆ ಹೋಲಿಸಿದರೆ ಅತ್ಯುತ್ತಮವಾಗಿದೆ. ಸಂಘಪರಿವಾರದ ಪುಂಡಾಟಗಳಿಗೆ ರಾಜಸ್ಥಾನ, ಉತ್ತರ ಪ್ರದೇಶ ತೆರುತ್ತಿರುವ ಬೆಲೆಯೇನು ಎನ್ನುವುದನ್ನು ಮಾಧ್ಯಮಗಳಲ್ಲಿ ಓದುತ್ತಿದ್ದೇವೆ. ಅಂತಹ ಪುಂಡರಿಗೆ ಕಡಿವಾಣ ಹಾಕುವುದನ್ನೇ ಮುಸ್ಲಿಮರ ತುಷ್ಟೀಕರಣ, ಹಿಂದೂಗಳ ಮೇಲೆ ದೌರ್ಜನ್ಯ ಎಂದು ಪ್ರಧಾನಿಯೊಬ್ಬರು ಬೇಜವಾಬ್ದಾರಿಯಿಂದ ಮಾತನಾಡಿದರೆ ಅದನ್ನು ಕರ್ನಾಟಕದ ಜನರು ಗಂಭೀರವಾಗಿ ಹೇಗೆ ಸ್ವೀಕರಿಸಿಯಾರು? ರಾಜಸ್ಥಾನದಲ್ಲಿ ‘ಪದ್ಮಾವತ್’ ಹೆಸರಿನಲ್ಲಿ ದೊಂಬಿಗಳು ನಡೆದಾಗ, ಗಣರಾಜ್ಯೋತ್ಸವದ ಹೆಸರಲ್ಲಿ ಕಾಸಗಂಜ್‌ನಲ್ಲಿ ಸಂಘಪರಿವಾರ ಅಮಾಯಕ ಮುಸ್ಲಿಮರ ಮೇಲೆ ದಾಳಿ ನಡೆಸಿದಾಗ, ಗೋರಖ್‌ಪುರದಲ್ಲಿ ನೂರಾರು ಮಕ್ಕಳು ಒಂದೇ ದಿನ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಬಾಯಿ ಬಿಚ್ಚದ, ಕನಿಷ್ಠ ಒಂದು ಹೇಳಿಕೆಯನ್ನೂ ನೀಡದ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು, ಇಲ್ಲಿ ಎಲ್ಲವೂ ಕೆಟ್ಟು ಹೋಗಿದೆ ಎಂದರೆ ಅದನ್ನು ಸ್ವೀಕರಿಸುವುದಾದರೂ ಹೇಗೆ? ಇದೇ ಸಂದರ್ಭದಲ್ಲಿ ಪ್ರಧಾನಿ ಸಮಾವೇಶಕ್ಕೆ ಜನ ಸೇರಿಸಲು ಹಣ ವಿತರಿಸಲಾಗಿದೆ ಎನ್ನುವ ಆರೋಪಗಳು ಮಾಧ್ಯಮಗಳಲ್ಲಿ ಕೇಳಿ ಬಂದಿವೆ.

 ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಒಣ ಭಾಷಣವನ್ನು ಜನರಿಗೆ ಹಂಚಿ ಹೋಗಿದ್ದಾರೆ. ಅದರಿಂದ ಹಿಂಡಿದರೆ ಒಂದು ಹನಿ ನೀರೂ ಇಲ್ಲ. ಮೋದಿಯ ದೆಸೆಯಿಂದ ರಾಜ್ಯ ಬಿಜೆಪಿಗೆ ಹೊಸ ಚೈತನ್ಯ ಬರಬಹುದು ಎನ್ನುವ ನಿರೀಕ್ಷೆಯೂ ಸುಳ್ಳಾಗಿದೆ. ಬದಲಿಗೆ ಬಿಜೆಪಿಗೆ ಇನ್ನಷ್ಟು ಹಿನ್ನಡೆಯಾಗುವ ಸೂಚನೆಗಳು ಕಾಣುತ್ತಿವೆ. ಮೋದಿಯ ಭಾಷಣ ಕೇಳಲು ಜನರನ್ನು ಸೇರಿಸಲು ಬಿಜೆಪಿ ಹಣ ಹಂಚಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ನೋಟು ನಿಷೇಧದಿಂದ ದೇಶದಲ್ಲಿ ಕಪ್ಪು ಹಣವೆಲ್ಲ ದೇಶದ ಖಜಾನೆ ಸೇರಿದೆ ಎಂದಾದರೆ ಬಿಜೆಪಿ ಹಂಚುತ್ತಿರುವ ಹಣ ಅವರಿಗೆ ಎಲ್ಲಿಂದ ಬಂತು ಎನ್ನುವುದು ತನಿಖೆಗೆ ಅರ್ಹವಾದ ಅಂಶವಾಗಿದೆ. ರಾಜ್ಯ ಸರಕಾರದ ಭ್ರಷ್ಟಾಚಾರದ ಕುರಿತಂತೆ ಮಾತನಾಡಿದ ನರೇಂದ್ರ ಮೋದಿ ಈ ಹಣದ ಕುರಿತಂತೆಯೂ ವಿವರಗಳನ್ನು ನೀಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News