ಹಿರಿಯ ಮಲಯಾಳಂ ಕವಿ ಮೇಲೆ ದಾಳಿ ಪ್ರಕರಣ: ಬಿಜೆಪಿ ಸದಸ್ಯ ಸೇರಿ 6 ಮಂದಿಯ ಬಂಧನ

Update: 2018-02-06 09:06 GMT
ಕುರೀಪುಝ ಶ್ರೀಕುಮಾರ್

ಕೊಲ್ಲಂ, ಫೆ.6: ಸೋಮವಾರ ಸಂಜೆ ಖ್ಯಾತ ಮಲಯಾಳಂ ಕವಿ ಕುರೀಪುಝ ಶ್ರೀಕುಮಾರ್ ಅವರ ಮೇಲೆ ಕೊಲ್ಲಂನಲ್ಲಿ ನಡೆದ ದಾಳಿಯ ಹಿಂದೆ ಸಂಘಪರಿವಾರದ ಕೈವಾಡವಿದೆಯೆಂದು ಶಂಕಿಸಲಾಗಿದೆ. ಪೊಲೀಸರು ಈ ಘಟನೆಯ ಸಂಬಂಧ ಬಂಧಿಸಿದ ಆರು ಮಂದಿಯಲ್ಲಿ ಒಬ್ಬ ಸ್ಥಳೀಯ ಬಿಜೆಪಿ ಘಟಕದ ಹಾಗೂ ಪಂಚಾಯತ್ ಸದಸ್ಯರಾಗಿದ್ದಾರೆಂದು ತಿಳಿದು ಬಂದಿದೆ.

ಶ್ರೀಕುಮಾರ್ ಅವರು ಸಮಾರಂಭದಲ್ಲಿ ಭಾಗವಹಿಸಿ ಹೊರಡುತ್ತಿದ್ದಂತೆಯೇ ಗುಂಪೊಂದು ಅವರನ್ನು ಸುತ್ತುವರಿದು ಬೆದರಿಸಿ, ನಿಂದಿಸಿ  ಅವರನ್ನು ತಳ್ಳಲಾರಂಭಿಸಿತ್ತು. "ನನ್ನ ಸುತ್ತ ಮಾನವ ಸರಪಳಿಯ ರಕ್ಷಣೆ ಇಲ್ಲದೇ ಹೋಗಿದ್ದರೆ ಅವರು ನನ್ನ  ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದರು, ಆದರೆ ನನಗೆ ಭಯವಿಲ್ಲ'' ಎಂದು 62 ವರ್ಷದ ಶ್ರೀಕುಮಾರ್ ಹೇಳಿಕೊಂಡಿದ್ದಾರೆ. ಸ್ಥಳೀಯ ದೇವಸ್ಥಾನದ ಕಾಂಪೌಂಡ್ ಗೋಡೆ ನಿರ್ಮಾಣ ಕುರಿತಂತೆ ಮೇಲ್ಜಾತಿಯ ನಾಯರ್ ಗಳು ಹಾಗೂ ದಲಿತರ ನಡುವೆ  ಆ ಪ್ರದೇಶದಲ್ಲಿ ಒಂದು ವರ್ಷದಿಂದ ಮುಂದುವರಿದುಕೊಂಡು ಬಂದಿರುವ ಸಂಘರ್ಷ ಸ್ಥಿತಿಯ ಬಗ್ಗೆ ತಾನು ಸಮಾರಂಭದಲ್ಲಿ ಮಾತನಾಡಿದ್ದು ದುಷ್ಕರ್ಮಿಗಳಿಗೆ ಪಥ್ಯವಾಗಿರದೇ ಇದ್ದಿರಬಹುದು ಎಂದು ಶ್ರೀಕುಮಾರ್ ಹೇಳಿದ್ದಾರೆ.

ದೇವಳದ ಕಾಂಪೌಂಡ್ ಗೋಡೆಯು ಹಲವಾರು ಸಮಾರಂಭಗಳು ನಡೆಯುವ ಹತ್ತಿರದ ಮೈದಾನವೊಂದಕ್ಕೆ ಸಂಪರ್ಕವನ್ನು ಕಡಿತಗೊಳಿಸುತ್ತಿರುವುದರಿಂದ ಹಾಗೂ ಇದೊಂದು ಸಾರ್ವಜನಿಕ ಮೈದಾನವಾಗಿರುವ ಕಾರಣ ಕಂಪೌಂಡ್ ಗೋಡೆ ನಿರ್ಮಾಣವನ್ನು ದಲಿತರು ವಿರೋಧಿಸುತ್ತಿದ್ದಾರೆ. ದಲಿತರು ಈ ಗೋಡೆಯನ್ನು ಜಾತಿ ಗೋಡೆ ಎಂದೂ ಕರೆಯುತ್ತಿದ್ದಾರೆ.

ರವಿವಾರ ಪ್ರತಿಭಟನೆಯೊಂದನ್ನು ಆಯೋಜಿಸಲಾಗಿತ್ತಾದರೂ ಅದಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲ. ಆದರೂ ಪ್ರತಿಭಟನಾಕಾರರು ಅಲ್ಲಿ ನೆರೆದಾಗ ಪೊಲೀಸರು  ಅವರನ್ನು ಚದುರಿಸಲು ಯತ್ನಿಸಿದಾಗ  ಆರೆಸ್ಸೆಸ್ ಕಾರ್ಯಕರ್ತರು ದಲಿತ ವಿರೋಧಿ ಘೋಷಣೆಗಳನ್ನು ಕೂಗಿ ದಲಿತರನ್ನು ನಿಂದಿಸಿದ ವಿಚಾರವನ್ನು ಶ್ರೀಕುಮಾರ್ ತಮ್ಮ ಸೋಮವಾರದ ಭಾಷಣದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News