12 ದಿನಗಳ ನಂತರ ಅಪಹರಣಕ್ಕೊಳಗಾಗಿದ್ದ ಬಾಲಕನ ರಕ್ಷಣೆ: ಪೊಲೀಸರ ಗುಂಡಿಗೆ ಓರ್ವ ಅಪಹರಣಕಾರ ಬಲಿ

Update: 2018-02-06 16:17 GMT

ಹೊಸದಿಲ್ಲಿ,ಫೆ.6: ಜನವರಿ 25ರಂದು ಪೂರ್ವ ದಿಲ್ಲಿಯಲ್ಲಿ ಶಾಲಾ ವ್ಯಾನಿನಿಂದ  ಅಪಹರಣಕ್ಕೊಳಗಾಗಿದ್ದ ಐದು ವರ್ಷದ ಬಾಲಕನೊಬ್ಬನನ್ನು  ಸೋಮವರ ತಡರಾತ್ರಿ ಪೊಲೀಸರು ರಾಜಧಾನಿಯಿಂದ 40 ಕಿ.ಮೀ. ದೂರದಲ್ಲಿರುವ ಸಾಹಿದಾಬಾದ್ ಎಂಬಲ್ಲಿನ ಫ್ಲ್ಯಾಟ್ ಒಂದರಿಂದ ರಕ್ಷಿಸಿದ್ದು ಈ ಸಂದರ್ಭ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಅಪಹರಣಕಾರರಲ್ಲೊಬ್ಬ ಮೃತಪಟ್ಟಿದ್ದಾನೆ. ಇನ್ನಿತರ ಆರೋಪಿಗಳು ಗಾಯಗೊಂಡಿದ್ದು ಅವರನ್ನು ಬಂಧಿಸಲಾಗಿದೆ.

ನರ್ಸರಿಯಲ್ಲಿ ಕಲಿಯುತ್ತಿದ್ದ ಬಾಲಕನನ್ನು ಆತನ ಮೂರನೇ ತರಗತಿಯಲ್ಲಿ ಕಲಿಯುತ್ತಿದ್ದ  ಸೋದರಿ ಸಹಿತ 14 ಮಕ್ಕಳಿದ್ದ ಶಾಲಾ ವ್ಯಾನಿನಿಂದ ದಿಲ್ಶದ್ ಗಾರ್ಡನ್ಸ್ ಸಮೀಪ ಅಪಹರಿಸಲಾಗಿತ್ತು. ವಿದ್ಯಾರ್ಥಿಯೊಬ್ಬನನ್ನು ವ್ಯಾನಿಗೆ ಹತ್ತಿಸಲು ವಾಹನವನ್ನು ನಿಲ್ಲಿಸಿದ್ದ ಸಂದರ್ಭ ಬೈಕಿನಲ್ಲಿ ಬಂದ ಹೆಲ್ಮೆಟ್‍ಧಾರಿಗಳು  ಚಾಲಕನ ತಲೆಗೆ ಬಂದೂಕನ್ನು ಗುರಿಯಾಗಿಸಿಟ್ಟು ಬಾಲಕನನ್ನು ಅಪಹರಿಸಿದ್ದರು. ಅಪಹರಣ ನಡೆಸಿದ ದಿನದಿಂದ ಬಾಲಕನನ್ನು ಅವರು ಸಾಹಿದಾಬಾದ್ ನಲ್ಲಿರುವ ಅಪಾರ್ಟ್‍ಮೆಂಟ್ ಕಟ್ಟಡದ ಐದನೇ ಮಹಡಿಯಲ್ಲಿನ ಫ್ಲ್ಯಾಟಿನಲ್ಲಿರಿಸಿದ್ದರು. ಜನವರಿ 28ರಂದು ಅವರಲ್ಲೊಬ್ಬ ಬಾಲಕನ ಹೆತ್ತವರಿಗೆ ಕರೆ ಮಾಡಿ ರೂ. 50 ಲಕ್ಷ ಬೇಡಿಕೆಯಿರಿಸಿದ ನಂತರ ಪೊಲೀಸರು ಅವರೆಲ್ಲಿರಬಹುದೆಂದು ಪತ್ತೆ ಹಚ್ಚಿದ್ದು  ಸೋಮವಾರ ದಾಳಿ ನಡೆಸಿ ಬಾಲಕನನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News