ನಮ್ಮ ಮೆಟ್ರೋ: ಮಹಿಳೆಯರಿಗಾಗಿ ಮೂರು ಪ್ರತ್ಯೇಕ ಬೋಗಿ

Update: 2018-02-06 18:35 GMT

ಬೆಂಗಳೂರು, ಫೆ.6: ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿಡಬೇಕೆಂಬ ಬೇಡಿಕೆ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಫೆ.14 ರಂದು ಹೊಸ ಬೋಗಿಗಳು ಜೋಡಿಸುವ ಕುರಿತು ರೈಲ್ವೆ ಬೋಗಿ ಉತ್ಪಾದನಾ ಕಾರ್ಖಾನೆ ಮುಂದಾಗಿದ್ದು, ಮಾರ್ಚ್ ಅಂತ್ಯಕ್ಕೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಹಲವು ಮಹಿಳಾ ಪರ ಸಂಘ-ಸಂಸ್ಥೆಗಳು ಹಾಗೂ ಪ್ರಯಾಣಿಕರು ಪ್ರತ್ಯೇಕ ಬೋಗಿ ಅವಶ್ಯಕತೆಯಿದೆ ಎಂದು ಹಲವು ದಿನಗಳಿಂದ ಒತ್ತಾಯಿಸುತ್ತಿದ್ದರು. ಇದರಿಂದಾಗಿ ಮೈಟ್ರೋ ರೈಲಿನ ಲೋಕೋ ಪೈಲಟ್ ಕ್ಯಾಬಿನ್ ಹಿಂಭಾಗದಲ್ಲಿ ಆರು ಬೋಗಿಗಳನ್ನು ಮಹಿಳೆಯರಿಗಾಗಿ ಮಾತ್ರ ಮೀಸಲಿರಿಸಿ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದ್ದಾರೆ.

ನಮ್ಮ ಮೆಟ್ರೋ ಮೊದಲ ಹಂತದ ಕಾಮಗಾರಿ ಕಳೆದ ವರ್ಷ ಪೂರ್ಣಗೊಂಡ ನಂತರ ಪ್ರಯಾಣಿಕರ ಸಂಚಾರ ದಟ್ಟಣೆ ಹೆಚ್ಚಾದ್ದರಿಂದ 50 ರೈಲುಗಳಿಗೆ ಹೆಚ್ಚುವರಿಯಾಗಿ ಮೂರು ಬೋಗಿ ಅಳವಡಿಕೆ ಮಾಡಲಾಗಿತ್ತು. ಈಗ ದಿನನಿತ್ಯ 4 ಲಕ್ಷಕ್ಕೂ ಅಧಿಕ ಪ್ರಯಾಣಿಕರು ರೈಲಿನಲ್ಲಿ ಸಂಚಾರ ಮಾಡುತ್ತಿದ್ದು, ಹೆಚ್ಚುವರಿ ಬೋಗಿ ಪೂರೈಕೆಗಾಗಿ ಬಿಇಎಂಎಲ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ನಡೆಯುತ್ತಿರುವ ಇನ್ನಿತರೆ ರೈಲು ಮಾರ್ಗಗಳು 2019 ರ ಜೂನ್‌ಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಎಸ್ಕಲೇಟರ್‌ಗಳನ್ನು ಅಳವಡಿಸಲು ಬೆಂಗಳೂರು ಮೆಟ್ರೋ ನಿರ್ಧಾರ ಮಾಡಿದ್ದು, ಅದರ ಭಾಗವಾಗಿ ಮೈಸೂರು ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಇಳಿಯುವ ಎಸ್ಕಲೇಟರ್ ಅನ್ನು ಮಹೇಂದ್ರ ಜೈನ್ ಉದ್ಘಾಟಿಸಿದರು.

ಪ್ರೇಮಿಗಳ ದಿನವಾದ ಫೆ.14 ರಂದು ನಮ್ಮ ಮೆಟ್ರೋಗೆ ಬಿಇಎಂಎಲ್ ಮೂರು ಬೋಗಿಗಳನ್ನು ಹಸ್ತಾಂತರ ಮಾಡಲಿದ್ದು, ಈ ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭಾಗವಹಿಸಲಿದ್ದಾರೆ. 1,421 ಕೋಟಿ ರೂ.ಗಳ ವೆಚ್ಚದಲ್ಲಿ 150 ಬೋಗಿಗಳನ್ನು ಖರೀದಿ ಮಾಡಲಾಗಿದೆ. ಆದರೆ, ಕಾರಣಾಂತರಗಳಿಂದ ಹಸ್ತಾಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಫೆ.14 ರಂದು ಮೂರು ಬೋಗಿಗಳನ್ನು ನೀಡಲು ಸಿದ್ಧತೆ ನಡೆದಿದೆ ಎಂದು ಜೈನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News