ಬಿಜೆಪಿ ಮೈತ್ರಿ ಕೂಟದಲ್ಲಿ ಬಿರುಕು

Update: 2018-02-08 04:09 GMT

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಅಡಿಪಾಯದಲ್ಲಿ ಬಿರುಕು ಬಿದ್ದಿದೆ. ಈ ಬಿರುಕನ್ನು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಪರದಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಬುಧವಾರ ತಾಳ್ಮೆ ಕಳೆದುಕೊಂಡು ಆವೇಶದಿಂದ ಮಾತನಾಡಲು ಕೂಡಾ ಈ ಬಿರುಕೇ ಕಾರಣ. ಬಿಜೆಪಿಯೊಂದಿಗೆ ಶಿವಸೇನೆ ಮೈತ್ರಿ ಮುರಿದುಕೊಂಡ ಬೆನ್ನಲ್ಲೇ ತೆಲುಗು ದೇಶಂ ಪಕ್ಷ ಕೂಡಾ ವಿಚ್ಛೇದನದತ್ತ ಹೆಜ್ಜೆ ಹಾಕುತ್ತಿದೆ. ಶಿವಸೇನೆ ಬಿಜೆಪಿಯೊಂದಿಗೆ ಯಾವುದೇ ಪ್ರಸಂಗದಲ್ಲೂ ರಾಜಿಗೆ ಸಿದ್ಧವಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡು ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಅದು ಘೋಷಿಸಿದೆ. ಈಗ ತೆಲುಗು ದೇಶಂ ಕೂಡಾ ಬಂಡಾಯದ ಬಾವುಟ ಹಾರಿಸಿದೆ.

2014ರಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ನಿರ್ಮಿಸಿದ ಬಳಿಕ ಆಂಧ್ರಪ್ರದೇಶ ಸಂಕಷ್ಟದ ಸುಳಿಗೆ ಸಿಲುಕಿದೆ. ಕೇಂದ್ರದ ಹಿಂದಿನ ಯುಪಿಎ ಸರಕಾರ ಭರವಸೆ ನೀಡಿದಂತೆ ತಮ್ಮ ರಾಜ್ಯಕ್ಕೆ ಆರ್ಥಿಕ ನೆರವಿನ ಪ್ಯಾಕೇಜನ್ನು ಘೋಷಣೆ ಮಾಡಬೇಕೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಒತ್ತಾಯಿಸಿದ್ದಾರೆ. ವಿಭಜಿತ ಆಂಧ್ರಪ್ರದೇಶದ ಸಂಕಷ್ಟದ ನಿವಾರಣೆಗೆ ಕೇಂದ್ರದ ಮೋದಿ ಸರಕಾರ ಸ್ಪಂದಿಸಲಿಲ್ಲ ಎಂಬ ಅಸಮಾಧಾನ ತೆಲುಗು ದೇಶಂ ಪಕ್ಷಕ್ಕೆ ಇದೆ. ಕೇಂದ್ರದ ಮುಂಗಡ ಪತ್ರದಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನ ಒದಗಿಸಿಲ್ಲ ಎಂದು ಚಂದ್ರಬಾಬು ನಾಯ್ಡು ಮುನಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಹೊಸ ರಾಜಧಾನಿ ಅಮರಾವತಿಯ ನಿರ್ಮಾಣದ ಮೊದಲ ಹಂತಕ್ಕೆ ಬೇಕಾಗಿರುವ 10 ಸಾವಿರ ಕೋಟಿ ರೂ. ನೆರವನ್ನು ಒದಗಿಸಬೇಕಾದ ಕೇಂದ್ರ ಸರಕಾರ, ಬಜೆಟ್‌ನಲ್ಲಿ ಶೇ.25ರಷ್ಟು ಮಾತ್ರ ಮೀಸಲಾಗಿಟ್ಟಿದೆ ಎಂದು ಚಂದ್ರಬಾಬು ನಾಯ್ಡು ಅಸಮಾಧಾನಗೊಂಡಿದ್ದಾರೆ. ಎರಡನೆಯದಾಗಿ ಪೋಲಾವರಂ ನೀರಾವರಿ ಯೋಜನೆಗೆ ಆಂಧ್ರಪ್ರದೇಶ ಸರಕಾರ 7,400 ಕೋಟಿ ರೂ. ಖರ್ಚು ಮಾಡಿದೆ. ಆದರೆ, ಕೇಂದ್ರ ಸರಕಾರ ಬರೀ 4,300 ಕೋಟಿ ರೂ. ಮಾತ್ರ ಒದಗಿಸಿದೆ. ಹೀಗಾಗಿ ಹಣದ ಕೊರತೆಯಿಂದ ಈ ಯೋಜನೆಯ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ. ಚಂದ್ರಬಾಬು ನಾಯ್ಡು ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಪೋಲಾವರಂ ನೀರಾವರಿ ಯೋಜನೆ ಕಾರ್ಯ ಪೂರ್ಣಗೊಳ್ಳಬೇಕು. ಅಂತಲೇ ಇದನ್ನು ಅವರು ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಂಡಿದ್ದಾರೆ. ಆದರೆ, ಕೇಂದ್ರ ಸರಕಾರ ಇವರ ಮನವಿಗೆ ಸ್ಪಂದಿಸಿಲ್ಲ. ಇದರಿಂದಾಗಿ ಚಂದ್ರಬಾಬು ನಾಯ್ಡು ಬಂಡಾಯದ ಬಾವುಟ ಹಾರಿಸಿದ ಆನಂತರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂಧಾನದ ಯತ್ನ ನಡೆಸಿದರೂ ಸಫಲವಾಗಿಲ್ಲ.

ಆದರೆ, ತೆಲುಗುದೇಶಂ ಮುನಿಸಿಗೆ ಇವಿಷ್ಟೇ ಕಾರಣವಲ್ಲ. ಇನ್ನೂ ಹಲವಾರು ಕಾರಣಗಳಿವೆ. ಈ ಮೈತ್ರಿ ಮುಂದುವರಿಯುವುದು ಆಂಧ್ರಪ್ರದೇಶದ ಬಿಜೆಪಿ ನಾಯಕರಿಗೆ ಬೇಕಾಗಿಲ್ಲ ಹಾಗೂ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ಯೋಜನೆಗಳ ಖ್ಯಾತಿಯನ್ನು ತೆಲುಗುದೇಶಂ ಮಾತ್ರ ಪಡೆದುಕೊಳ್ಳುತ್ತಿದೆ ಎಂದು ಆಂಧ್ರಪ್ರದೇಶದ ಬಿಜೆಪಿ ನಾಯಕರಲ್ಲಿ ಅಸಮಾಧಾನವಿದೆ. ಇದರ ಜೊತೆಗೆ ಇನ್ನು ಮುಂದೆ ಬಿಜೆಪಿ ಜೊತೆಗಿನ ಮೈತ್ರಿ ಪ್ರಯೋಜನಕಾರಿಯಲ್ಲ ಎಂಬ ಲೆಕ್ಕಾಚಾರವನ್ನು ಚಂದ್ರಬಾಬು ನಾಯ್ಡು ಹೊಂದಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಬೆಲೆ ಏರಿಕೆ ಇತ್ಯಾದಿಗಳಿಂದಾಗಿ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಆದ್ದರಿಂದಲೇ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡು ಪ್ರತ್ಯೇಕವಾಗಿ ಸ್ಪರ್ಧಿಸಲು ತೆಲುಗುದೇಶಂ ಸಿದ್ಧತೆ ನಡೆಸಿದೆ.

ಕೇಂದ್ರದ ಮೋದಿ ಸರಕಾರ ಆಂಧ್ರಪ್ರದೇಶವನ್ನು ನಿರ್ಲಕ್ಷಿಸಿದೆ ಎಂಬ ಭಾವನೆ ಆ ರಾಜ್ಯದ ಜನರಲ್ಲಿ ಬೇರುಬಿಟ್ಟಿದೆ. ಮೋದಿ ಸರಕಾರದ ಈ ನಿರ್ಲಕ್ಷಕ್ಕೆ ತಾನು ಹೊಣೆಯಲ್ಲ ಎಂದು ಆಂಧ್ರದ ಜನರಿಗೆ ತೆಲುಗು ದೇಶಂ ಮನವರಿಕೆ ಮಾಡಿಕೊಡಬೇಕಾಗಿದೆ. ಮತ್ತೆ ಮತದಾರರ ಬಳಿ ಹೋಗಬೇಕಾದರೆ ತಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಬಿಜೆಪಿಯೊಂದಿಗೆ ಸಂಬಂಧ ಮುಂದುವರಿಸಿದರೆ ಯಾವ ಪ್ರಯೋಜನವೂ ಇಲ್ಲ ಎಂದು ತೆಲುಗು ದೇಶಂಗೆ ಖಚಿತವಾಗಿದೆ. ಪ್ರಧಾನಿ ಮೋದಿಯ ಪ್ರಭಾವ ಕೂಡಾ ಈಗ ಮುಂಚಿನಂತೆ ಇಲ್ಲ.

ಆಂಧ್ರಪ್ರದೇಶದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಮೋದಿ ಮೋಡಿ ಕಡಿಮೆಯಾಗುತ್ತಿದೆ. ಇವರು ಬರೀ ಮಾತುಗಾರ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಅಂತಲೇ ಬಿಜೆಪಿ ಜೊತೆಗೆ ಮೈತ್ರಿ ಮುಂದುವರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ನಿಲುವಿಗೆ ತೆಲುಗು ದೇಶಂ ಮತ್ತು ಶಿವಸೇನೆಗಳು ಬಂದಿವೆ. ಅದಕ್ಕಾಗಿ ಅವು ಈಗಾಗಲೇ ಬಂಡಾಯದ ಬಾವುಟ ಹಾರಿಸಿವೆ. ತೆಲುಗು ದೇಶಂ ಜೊತೆಗಿನ ಸಂಬಂಧವನ್ನು ಸುಧಾರಿಸಿಕೊಳ್ಳುವ ಎಲ್ಲ ಅವಕಾಶಗಳನ್ನು ಬಿಜೆಪಿ ಕಳೆದುಕೊಂಡಿದೆ.

ಪ್ರತ್ಯೇಕ ಆಂಧ್ರಪ್ರದೇಶದ ರಾಜಧಾನಿಯಾದ ಅಮರಾವತಿಯ ನಿರ್ಮಾಣಕ್ಕೆ ಹಾಗೂ ಪೋಲಾವರಂ ನೀರಾವರಿ ಯೋಜನೆಗೆ ಮುಂಗಡ ಪತ್ರದಲ್ಲಿ ಹಣ ಒದಗಿಸುವಲ್ಲಿ ಕೇಂದ್ರದ ಬಿಜೆಪಿ ಸರಕಾರ ವಿಫಲಗೊಂಡಿರುವುದರಿಂದ ಯಾವುದೇ ರಾಜಿಸಂಧಾನಕ್ಕೆ ಚಂದ್ರಬಾಬು ನಾಯ್ಡು ಸಿದ್ಧರಿಲ್ಲ. ಈ ಯೋಜನೆಗಳಿಗಾಗಿ ನೆರವು ನೀಡುವಂತೆ ಚಂದ್ರಬಾಬು ನಾಯ್ಡು ತುಂಬಾ ಮನವಿ ಮಾಡಿಕೊಂಡಿದ್ದರು. ಆದರೆ, ಕೇಂದ್ರ ಸರಕಾರ ಬಜೆಟ್‌ನಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗೆ 17 ಸಾವಿರ ಕೋಟಿ ರೂ. ನೀಡಿ ತಮ್ಮ ರಾಜ್ಯವನ್ನು ಕಡೆಗಣಿಸಿದೆ ಎಂಬ ಅಸಮಾಧಾನದಿಂದ ಚಂದ್ರಬಾಬು ನಾಯ್ಡು ಕುದಿಯುತ್ತಿದ್ದಾರೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಪ್ರತ್ಯೇಕವಾಗಿ ಸ್ಪರ್ಧಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ.

ಶಿವಸೇನೆ ಮತ್ತು ತೆಲುಗುದೇಶಂ ಪಕ್ಷಗಳು ಎನ್‌ಡಿಎ ಮಿತ್ರಕೂಟದಿಂದ ಹೊರಗೆ ಬರಲು ತೀರ್ಮಾನಿಸುತ್ತಿದ್ದಂತೆ ಶಿರೋಮಣಿ ಅಕಾಲಿದಳ ಕೂಡಾ ಬಿಜೆಪಿಯನ್ನು ಟೀಕಿಸಲು ಆರಂಭಿಸಿದೆ. ಬಿಜೆಪಿಯ ಕೆಲವು ಆರ್ಥಿಕ, ಸಾಮಾಜಿಕ ಧೋರಣೆಗಳ ಬಗ್ಗೆ ಅದು ಅಸಮಾಧಾನ ವ್ಯಕ್ತಪಡಿಸಿದೆ. ಮೋದಿ ಸರಕಾರ ಇತ್ತೀಚೆಗೆ ಬಿಹಾರದ ನಿತೀಶ್ ಕುಮಾರ್ ಜೊತೆಗೆ ಮರುಹೊಂದಾಣಿಕೆ ಮಾಡಿಕೊಂಡಿದ್ದರೂ ಸಂಯುಕ್ತ ಜನತಾದಳದಲ್ಲಿ ಈ ಮೈತ್ರಿಯ ಬಗ್ಗೆ ಅಸಮಾಧಾನವಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹತಾಶರಾಗಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ 2 ಲೋಕಸಭೆ ಹಾಗೂ ಒಂದು ವಿಧಾನಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಶೋಚನೀಯವಾಗಿ ಪರಾಭವಗೊಂಡಿದೆ. ಈ ವರ್ಷದ ಅಂತ್ಯದೊಳಗೆ ಕರ್ನಾಟಕ ಸೇರಿದಂತೆ 9 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಮೋದಿಗೆ ಖಚಿತವಾಗಿದೆ. ಇದರ ಜೊತೆಗೆ ಈಗ ಬಿಜೆಪಿ ಅಧಿಕಾರದಲ್ಲಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕೂಡಾ ಬಿಜೆಪಿ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ. ಅಂತಲೇ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯನ್ನು ಏಕ ಕಾಲದಲ್ಲಿ ನಡೆಸಲು ಮೋದಿ ಮತ್ತು ಅಮಿತ್ ಶಾ ಜೋಡಿ ಮಸಲತ್ತು ನಡೆಸಿದೆ.

ಇದಕ್ಕೆ ಪೂರಕವಾಗಿ ಚುನಾವಣಾ ಆಯೋಗದಂತಹ ಸಂವಿಧಾನಾತ್ಮಕ ಸಂಸ್ಥೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಅವರು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಇದು ಅಷ್ಟು ಸುಲಭದ ಸಂಗತಿಯಲ್ಲ. ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಹಾಗೂ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕೂಡಾ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಅಷ್ಟು ಸುಲಭವಲ್ಲ ಎಂಬುದು ಬಿಜೆಪಿಗೆ ಖಚಿತವಾಗಿದೆ. ತನ್ನ ಗುರಿ ಸಾಧನೆಗಾಗಿ ದ್ರಾವಿಡ ಪಕ್ಷಗಳಲ್ಲೇ ಅದು ಒಡಕನ್ನು ಉಂಟು ಮಾಡಿದರೂ ತಮಿಳುನಾಡಿನಲ್ಲಿ ನೆಲೆಯೂರಲು ಅದಕ್ಕೆ ಸಾಧ್ಯವಾಗಿಲ್ಲ. ಇನ್ನು ಕರ್ನಾಟಕ ಮತ್ತು ಕೇರಳದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಕನಸಿನ ಮಾತಾಗಿದೆ. ಅಂತಲೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಭಾರತದ ಮಧ್ಯಪ್ರದೇಶ, ಹರ್ಯಾಣ, ರಾಜಸ್ಥಾನ ಹಾಗೂ ಬಿಹಾರಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಮೋದಿ ತಂತ್ರ ರೂಪಿಸುತ್ತಿದ್ದರೂ ಅವರ ಆಡಳಿತದ ವೈಫಲ್ಯದಿಂದಾಗಿ ಅಲ್ಲಿ ಕೂಡಾ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಅವರು ಹತಾಶರಾಗಿದ್ದಾರೆ. ಈ ಹತಾಶೆಯಿಂದಾಗಿ ತಾಳ್ಮೆ ಕಳೆದುಕೊಂಡು ಅವರು ಮಾತನಾಡುತ್ತಿದ್ದಾರೆ.್ಖ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News