ಕ್ಷಯ ಅಕ್ಷಯವಾಗದಿರಲಿ

Update: 2018-02-09 03:43 GMT

ದೇಶದ ಅಪೌಷ್ಟಿಕತೆಗೂ ಕ್ಷಯರೋಗಕ್ಕೂ ನೇರ ನಂಟಿದೆ. ನೋಟು ನಿಷೇಧದ ಬಳಿಕ ನಗರ ಸೇರಿರುವ ಕೂಲಿಕಾರ್ಮಿಕರು ಭಾರೀ ಪ್ರಮಾಣದಲ್ಲಿ ಕೆಲಸವನ್ನು ಕಳೆದುಕೊಂಡಿದ್ದಾರೆ. ಇದು ಅವರ ಅಹಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶಾದ್ಯಂತ ಹಸಿವೆಯ ಪ್ರಮಾಣ ಹೆಚ್ಚಿದೆ. ಮಾಂಸಾಹಾರದ ಕುರಿತಂತೆ ಸರಕಾರದ ಧೋರಣೆಯೂ ದೇಶದಲ್ಲಿ ಅಪೌಷ್ಟಿಕತೆ ಹೆಚ್ಚುವಂತೆ ಮಾಡಿದೆ. ಗೋಮಾಂಸ ಬಡವರಿಗೆ ಅತಿ ಅಗ್ಗದಲ್ಲಿ ಸಿಗುತ್ತಿದ್ದ ಅತ್ಯುತ್ತಮ ಪೌಷ್ಟಿಕ ಆಹಾರವಾಗಿತ್ತು. ಗೋಮಾರಾಟ, ಗೋಮಾಂಸದ ಕುರಿತಂತೆ ಸರಕಾರದ ಜನವಿರೋಧಿ ನೀತಿ ಆ ಮಾಂಸವನ್ನು ದುಬಾರಿಯಾಗಿಸಿತು. ಒಂದು ಕಾಲದಲ್ಲಿ ಬಡವರಷ್ಟೇ ಸೇವಿಸುತ್ತಿದ್ದ ಗೋಮಾಂಸ ಇಂದು ದುಬಾರಿಯಾಗಿ ಶ್ರೀಮಂತರ ಆಹಾರವಾಗಿ ಪರಿವರ್ತನೆಗೊಂಡಿದೆ. ಈ ಎಲ್ಲ ಕಾರಣದಿಂದ ದೇಶದಲ್ಲಿ ಹಸಿವೆಯೆನ್ನುವುದು ನಿಧಾನಕ್ಕೆ ಮಾರಕ ರೋಗವಾಗಿ ಪರಿವರ್ತನೆಗೊಂಡಿದೆ. ಇದು ಕ್ಷಯರೋಗವನ್ನು ಅಕ್ಷಯವನ್ನಾಗಿಸಿದೆ. ಕ್ಷಯರೋಗ ಹಾಗೂ ಅಪೌಷ್ಟಿಕತೆ ವಿಷವರ್ತುಲವೊಂದರ ಭಾಗವಿದ್ದಂತೆ.

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಪುರುಷರು ಹಾಗೂ ಮಹಿಳೆಯರ ಸರಾಸರಿ ದೇಹತೂಕ ಕ್ರಮವಾಗಿ 42 ಕೆ.ಜಿ. ಹಾಗೂ 34 ಕೆ.ಜಿ. ಆಗಿದೆ. ಆದರೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ ಓರ್ವ ಆರೋಗ್ಯವಂತ ಭಾರತೀಯ ಪುರುಷ ಹಾಗೂ ಮಹಿಳೆಯು ಕ್ರಮವಾಗಿ 60 ಕೆ.ಜಿ. ಹಾಗೂ 55 ಕೆ.ಜಿ. ಹೊಂದಿರಬೇಕಾಗಿದೆ. ಆದರೆ ಅಪೌಷ್ಟಿಕತೆಯಿಂದಾಗಿ ದೊಡ್ಡ ಸಂಖ್ಯೆಯ ಭಾರತೀಯರು ಕಡಿಮೆ ದೇಹತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕ್ಷಯರೋಗ ಪೀಡಿತರು ಬದುಕುಳಿಯುವುದಕ್ಕೂ, ಅವರ ದೇಹತೂಕಕ್ಕ್ಕೂ ನಿಕಟವಾದ ನಂಟಿದೆ. 50 ಕೆ.ಜಿ.ದೇಹತೂಕ ಹೊಂದಿರುವವರ ಸಂಖ್ಯೆಯು ಬದುಕುಳಿಯುವ ಸಾಧ್ಯತೆಯು ಅದಕ್ಕಿಂತ ಕಡಿಮೆ ದೇಹತೂಕ ಹೊಂದಿರುವವರಿಗಿಂತ ಮೂರು ಪಟ್ಟು ಅಧಿಕವೆಂದು ತಜ್ಞರು ಪ್ರತಿಪಾದಿಸುತ್ತಾರೆ. ಪೌಷ್ಟಿಕ ಆಹಾರವನ್ನು ಪಡೆಯಲು ಬೇಕಾದ ಆರ್ಥಿಕ ಸಾಮರ್ಥ್ಯದ ಕೊರತೆಯೇ ಭಾರತದಲ್ಲಿ ಬಹುತೇಕ ರೋಗಿಗಳ ದೇಹತೂಕ ಕಡಿಮೆಯಿರಲು ಕಾರಣವೆಂದು ಬೇರೆ ಹೇಳಬೇಕಾಗಿಲ್ಲ.

 ಇದೇ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ನೆರವು ಒದಗಿಸಲು ಮುಂಬರುವ ವಿತ್ತ ವರ್ಷದಲ್ಲಿ 600 ಕೋಟಿ ರೂ. ಅನುದಾನವನ್ನು ಘೋಷಿಸಿದ್ದಾ. ಇರೊದಿಗೆ ದೇಶದ ಕ್ಷಯರೋಗಿಗಳು ಚಿಕಿತ್ಸೆ ಪಡೆಯುವ ಅವಧಿಯಲ್ಲಿ ತಮ್ಮ ಪೌಷ್ಟಿಕ ಆಹಾರದ ಆವಶ್ಯಕತೆಗಳಿಗಾಗಿ ಪ್ರತೀ ತಿಂಗಳು ತಲಾ 500 ರೂ.ಗಳನ್ನು ಪಡೆಯಲಿದ್ದಾರೆ ಎಂದು ಸರಕಾರ ಹೇಳುತ್ತಿದೆ. ಆದರೆ ತಜ್ಞರ ಪ್ರಕಾರ ಕ್ಷಯರೋಗಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ ಪೌಷ್ಟಿಕ ಆಹಾರದ ಆವಶ್ಯಕತೆಗಳನ್ನು ಈಡೇರಿಸಲು ಈ 500 ರೂ. ಏನೇನೂ ಸಾಲದು. ಹೀಗೆ ರೋಗಿಗಳಿಗೆ ಹಣದ ರೂಪದಲ್ಲಿ ನೆರವು ನೀಡುವ ಮೋದಿ ಸರಕಾರದ ಕ್ರಮವು ರಾಜಕೀಯ ಲಾಭದ ಉದ್ದೇಶದಿಂದ ಕೂಡಿದ್ದು, ವಾಸ್ತವಿಕವಾಗಿ ರೋಗಿಗಳಿಗೆ ಯಾವುದೇ ವಿಧದಲ್ಲೂ ನೆರವಾಗದು ಎಂದು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಈ ರೋಗಕ್ಕೂ ಬಡತನಕ್ಕೂ ನಿಕಟವಾದ ಸಂಬಂಧವಿರುವ ಅಂಶವನ್ನು ಗಮನಕ್ಕೆ ತೆಗೆದುಕೊಂಡಲ್ಲಿ, ಕ್ಷಯರೋಗಿಗೆ ಪೌಷ್ಟಿಕ ಆಹಾರಕ್ಕಾಗಿ ನೀಡಲಾಗುವ ಹಣವನ್ನು ಕುಟುಂಬದ ಇತರ ಸದಸ್ಯರ ಜೊತೆಗೆ ಹಂಚಿಕೊಳ್ಳುವ ಅಥವಾ ಬೇರೆ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.

ಇದಕ್ಕಿಂತಲೂ ಹೆಚ್ಚಾಗಿ ಆಹಾರ ಧಾನ್ಯಗಳು, ಹಾಗೂ ಮೊಟ್ಟೆಯ ದರದಲ್ಲಿ ವಿಪರೀತವಾದ ಏರುಪೇರು ಉಂಟಾಗುವ ಕಾರಣ, ರೋಗಿಯು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಪ್ರೋಟಿನ್‌ಯುಕ್ತ ಆಹಾರವನ್ನು ಪಡೆಯುವನೆಂಬುದಕ್ಕೆ ಯಾವುದೇ ಖಾತರಿಯಿರುವುದಿಲ್ಲ. ರೋಗಿಗೆ ನೇರವಾಗಿ ಹಣದ ನೆರವನ್ನು ವರ್ಗಾಯಿಸುವುದರಿಂದ ಆತನಿಗೆ ಹೆಚ್ಚೆಂದರೆ ದಿನಕ್ಕೆ ಮೂರು ಮೊಟ್ಟೆಗಳನ್ನು ಖರೀದಿಸಲು ಮಾತ್ರವೇ ಸಾಧ್ಯವಾಗಹುದು. ಓರ್ವ ಆರೋಗ್ಯವಂತ ವ್ಯಕ್ತಿಗೆ ಪ್ರತೀ ದಿನವೂ 50ರಿಂದ 60 ಗ್ರಾಮ್‌ಗಳಷ್ಟು ಪೌಷ್ಟಿಕ ಆಹಾರದ ಅಗತ್ಯವಿರುತ್ತದೆ. ಇದರ ಬದಲು ತಿಂಗಳಿಗೆ 500 ರೂ. ನೀಡಿ, ತಾನು ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಆವಶ್ಯಕತೆಗಳನ್ನು ಈಡೇರಿಸಿದೆನೆಂದು ಸರಕಾರವು ಹೇಳಿಕೊಂಡಲ್ಲಿ ಅದು ಅತ್ಮವಂಚನೆಯಲ್ಲದೆ ಮತ್ತೇನೂ ಅಲ್ಲ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುವ ಪ್ರಕಾರ ದೇಶಾದ್ಯಂತ ಸುಮಾರು 25 ಲಕ್ಷ ಕ್ಷಯರೋಗಿಗಳು ಸರಕಾರದ ಈ ನಗದು ನೆರವಿನ ಫಲಾನುಭವಿಗಳಾಗಲಿದ್ದಾರೆ. ಆಧಾರ್ ಸಂಖ್ಯೆ ಹಾಗೂ ವೈದ್ಯಕೀಯ ದಾಖಲೆಗಳನ್ನು ಆಧರಿಸಿ ನಗದು ನೆರವನ್ನು ನೀಡುವುದಾಗಿಯೂ ಅದು ಹೇಳಿಕೊಂಡಿದೆ. ಆದರೆ ಈಗಲೂ ಲಕ್ಷಾಂತರ ಪ್ರಜೆಗಳು ಆಧಾರ್ ಸಂಖ್ಯೆಯಿಲ್ಲದೆ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಸರಕಾರದ ಈ ನೆರವು ಎಲ್ಲಾ ಕ್ಷಯರೋಗಿಗಳಿಗೆ ತಲುಪುವುದು ತೀರಾ ಅನುಮಾನ.

ಆರೋಗ್ಯ ಸಚಿವಾಲಯವು 2025ರೊಳಗೆ ದೇಶದಲ್ಲಿ ಕ್ಷಯರೋಗದ ಹೊಸ ಪ್ರಕರಣಗಳ ಸಂಖ್ಯೆಯನ್ನು ಶೇ.90ರಷ್ಟು ಇಳಿಸುವ ಹಾಗೂ ಈ ಕಾಯಿಲೆಯಿಂದ ಸಾವು ಸಂಭವಿಸುವ ಪ್ರಮಾಣವನ್ನು 2030ರೊಳಗೆ ಶೇ.95ರಷ್ಟು ಇಳಿಸುವ ಉದ್ದೇಶ ಹೊಂದಿದೆ. ಆದರೆ ಕೇಂದ್ರ ಸರಕಾರವು ಕ್ಷಯರೋಗ ನಿಯಂತ್ರಣಕ್ಕಾಗಿ, ರೋಗಿಗಳಿಗೆ 500 ರೂ. ಆರ್ಥಿಕ ನೆರವನ್ನು ಒದಗಿಸುವ ಯೋಜನೆಯೊಂದನ್ನು ಉಳಿದು ಬೇರ್ಯಾವುದೇ ಮಹತ್ವದ ಕಾರ್ಯಕ್ರಮವನ್ನು ಪ್ರಕಟಿಸಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಭಾರತದಲ್ಲಿ ಸರಾಸರಿ ಪ್ರತೀ ವರ್ಷ 20.80 ಲಕ್ಷ ಜನರು ಕ್ಷಯರೋಗಕ್ಕೆ ತುತ್ತಾಗುತ್ತಿದ್ದಾರೆ. ಅವುಗಳಲ್ಲಿ 10.70 ಲಕ್ಷ ಮಂದಿಯಷ್ಟೇ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಾರೆ ಎಂಬ ಕಳವಳಕಾರಿ ವಿಷಯವೊಂದನ್ನು ಬಹಿರಂಗಪಡಿಸಿದೆ. ಕ್ಷಯ ಬರೇ ಔಷಧಿಯಿಂದಷ್ಟೇ ಗುಣವಾಗುವುದಿಲ್ಲ. ಔಷಧಿಯ ಜೊತೆಗೆ ಪೌಷ್ಟಿಕಾಂಶದ ಆಹಾರವಿಲ್ಲದೇ ಇದ್ದರೆ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು. ಈ ಕಾರಣದಿಂದಲೇ ಸರಕಾರ ನೀಡುವ 500 ರೂ. ಅನುದಾನ ಒಂದು ಅಣಕವೆಂದೇ ಹೇಳಬೇಕಾಗಿದೆ. ಒಂದೆಡೆ ಜನಸಾಮಾನ್ಯರ, ಬಡವರ ಆಹಾರವನ್ನು ರಾಜಕೀಯ ಉದ್ದೇಶಕ್ಕಾಗಿ, ಧರ್ಮದ ಹೆಸರಿನಲ್ಲಿ ಕಿತ್ತುಕೊಂಡು, ಮಗದೊಂದೆಡೆ 500 ರೂಪಾಯಿಯನ್ನು ಭಿಕ್ಷೆಯಂತೆ ಕೊಟ್ಟು ಕ್ಷಯವನ್ನು ನಿವಾರಿಸಲು ಸರಕಾರ ಹೊರಟಿದೆ. ಇದರ ಬದಲು ಪೌಷ್ಟಿಕ ಆಹಾರ ಅದರಲ್ಲೂ ಮಾಂಸಾಹಾರಗಳ ಬೆಲೆ ಇಳಿಕೆಯಾಗುವ ಕಡೆಗೆ ಗಮನ ಹರಿಸಲಿ. ಗೋಮಾಂಸಕ್ಕೆ ಇರುವ ಅನಗತ್ಯ ನಿಯಮಗಳನ್ನು ಸಡಿಲಿಸಿ ಬಡವರಿಗೆ ದೊರಕುವಂತೆ ಮಾಡಲಿ. ಮಾಂಸಾಹಾರಿಗಳು ಹೈನೋದ್ಯಮದ ಭಾಗ. ಬಹುಸಂಖ್ಯೆಯಲ್ಲಿ ರುವ ಗೋಮಾಂಸಾಹಾರಿಗಳಿಂದ ಅವರ ಆಹಾರವನ್ನು ಕಿತ್ತುಕೊಂಡರೆ, ತರಕಾರಿಯೂ ಸೇರಿದಂತೆ ಉಳಿದ ಆಹಾರಗಳ ಬೆಲೆ ತನ್ನಷ್ಟಕ್ಕೆ ಏರಿಕೆಯಾಗುತ್ತದೆ. ಆದುದರಿಂದ ಗೋಮಾಂಸದ ರಫ್ತಿಗೆ ಕಡಿವಾಣ ಹಾಕಿ, ಅದು ದೇಶವಾಸಿಗಳಿಗೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಕ್ಷಯ ಅಕ್ಷಯವಾಗುವುದನ್ನು ತಪ್ಪಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News