ಮಾದಕ ವಸ್ತು ಕಳ್ಳಸಾಗಾಟ: ಭಾರತ ಮೂಲದ ಹೋಟೆಲ್ ಉದ್ಯಮಿಯ ಬಂಧನ

Update: 2018-02-09 04:12 GMT

ಕಠ್ಮಂಡು, ಫೆ.9: ನೇಪಾಳದಲ್ಲಿ ಮೂರು ದಶಕಗಳಿಂದ ಪ್ರತಿಷ್ಠಿತ ಹೋಟೆಲ್ ನಡೆಸುತ್ತಿದ್ದ ಭಾರತ ಮೂಲದ ಮಷ್ಕೂರ್ ಅಹ್ಮದ್ ಲರಿ ಎಂಬವರನ್ನು ನೇಪಾಳ ಪೊಲೀಸರು, ಮಾದಕ ವಸ್ತು ಕಳ್ಳಸಾಗಣೆ ಆರೋಪದಲ್ಲಿ ಬಂಧಿಸಿದ್ದಾರೆ.

ಇಂಟರ್‌ಪೋಲ್‌ಗೆ ಕೂಡಾ ಬೇಕಾದ ಈ ಉದ್ಯಮಿಯನ್ನು ಕಠ್ಮಂಡುವಿನ ಮಹಾರಾಜ್‌ಗಂಜ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಕಠ್ಮಂಡು ಮೆಟ್ರೋಪಾಲಿಟನ್ ಪೊಲೀಸ್ ಕಚೇರಿಯ ಹಿರಿಯ ಅಧಿಕಾರಿಗಳು ಪ್ರಕಟಿಸಿದ್ದಾರೆ. ಕಠ್ಮಂಡುವಿನಿಂದ ನೆದರ್ಲೆಂಡ್ಸ್‌ಗೆ ಈ ಉದ್ಯಮಿ ಕಳುಹಿಸಿದ ಪಾರ್ಸೆಲ್‌ನಲ್ಲಿ ಮಾದಕವಸ್ತುಗಳ ಪ್ಯಾಕೆಟ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಉದ್ಯಮಿಯ ಬಂಧನಕ್ಕೆ ಜಾಲ ಹೆಣೆಯಲಾಗಿತ್ತು. ಜರ್ಮನಿಯ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಈ ಪ್ರಕರಣ ಪತ್ತೆಯಾಗಿತ್ತು.

ಕಠ್ಮಂಡುವಿನಲ್ಲಿ ಕಳೆದ 30 ವರ್ಷಗಳಿಂದ ಎವರೆಸ್ಟ್ ಎಂಬ ಪಂಚತಾರಾ ಹೋಟೆಲ್ ನಡೆಸುತ್ತಿದ್ದ ಅಹ್ಮದ್ ಲರಿ, 2015ರ ಭೂಕಂಪ ವೇಳೆ ಕಟ್ಟಡದಲ್ಲಿ ಭಾರಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೋಟೆಲ್ ಮುಚ್ಚಿದ್ದರು. ಕಠ್ಮಂಡು ಜಿಲ್ಲಾ ನ್ಯಾಯಾಲಯದಲ್ಲಿ ಅಹ್ಮದ್ ಲರಿ ವಿರುದ್ಧ ಮಾದಕ ವಸ್ತು ಕಳ್ಳಸಾಗಣೆ ದಾವೆ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News