ಹಳದಿ, ಕೆಂಪು ಬಣ್ಣದ ಧ್ವಜಕ್ಕೆ ವಿರೋಧ

Update: 2018-02-09 13:39 GMT

ಬೆಂಗಳೂರು, ಫೆ.9: ಹಳದಿ ಹಾಗೂ ಕೆಂಪು ಮಿಶ್ರಿತ ಧ್ವಜ ರಾಜ್ಯದ ಪ್ರಾದೇಶಿಕ ಪಕ್ಷವಾದ ಕನ್ನಡ ಪಕ್ಷಕ್ಕೆ ಸೇರಿದ್ದಾಗಿದ್ದು, ಯಾವುದೇ ಕಾರಣಕ್ಕೂ ಸರಕಾರ ಅದನ್ನು ಅಂಗೀಕರಿಸಬಾರದು ಎಂದು ಪಕ್ಷದ ರಾಜ್ಯಾಧ್ಯಕ್ಷ ಇ.ಪುರುಷೋತ್ತಮ್ ಆಗ್ರಹಿಸಿದ್ದಾರೆ.

1999ರಲ್ಲಿಯೇ ನೋಂದಣಿಯಾಗಿರುವ ಕನ್ನಡ ಪಕ್ಷದ ಭಾವುಟವಾಗಿ ಹಳದಿ ಹಾಗೂ ಕೆಂಪುಬಣ್ಣವುಳ್ಳ ಧ್ವಜವನ್ನು ಚುನಾವಣಾ ಆಯೋಗದಲ್ಲಿಯೂ ನೋಂದಣಿ ಮಾಡಿಕೊಳ್ಳಲಾಗಿದೆ. ಆದರೆ, ಇತ್ತೀಚಿಗೆ ಕನ್ನಡ ಪರ ಸಂಘಟನೆಗಳ ನಾಯಕರು ಈಗಿರುವ ಧ್ವಜದ ಇತಿಹಾಸ ಅರಿಯದೇ ನಾಡಧ್ವಜವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹೀಗಾಗಿ, ಸರಕಾರ ಇದಕ್ಕೆ ಮಣಿಯಬಾರದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಳದಿ, ಕೆಂಪು ಮಿಶ್ರಿತ ಧ್ವಜವನ್ನು ನಾಡಿನ ಸಾಂಸ್ಕೃತಿಕ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಬಳಕೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ ಎಂದ ಅವರು, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಈ ಧ್ವಜವನ್ನು ಕನ್ನಡ ಪಕ್ಷದ ಅಧಿಕೃತ ಧ್ವಜ. ಇದನ್ನು ನಾಡಧ್ವಜವನ್ನಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ, ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಲು ಹಳದಿ ಮತ್ತು ಕೆಂಪು ಧ್ವಜವನ್ನೇ ನಾಡ ಧ್ವಜ ಮಾಡಬೇಕು ಎನ್ನುತ್ತಿರುವುದು ಹಾಸ್ಯಾಸ್ಪದ ಎಂದರು.

ರಾಜ್ಯ ಸರಕಾರ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನು ನಾಡಧ್ವಜವನ್ನಾಗಿ ಘೋಷಣೆ ಮಾಡಿದರೆ ತೀವ್ರ ಹೋರಾಟ ಕೈಗೊಳ್ಳಲಾಗುತ್ತದೆ ಹಾಗೂ ಅದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ. ಆದುದರಿಂದ ಸರಕಾರ ಬೇರೆ ಧ್ವಜವನ್ನು ವಿನ್ಯಾಸ ಮಾಡಬೇಕು ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News