'ಇಂತಹ ನೀಚ ಮುಖ್ಯಮಂತ್ರಿಯನ್ನು ಬೆಳೆಸಿ ನಾನು ಜೀವನದಲ್ಲಿ ಮಹಾ ಅಪರಾಧ ಮಾಡಿದೆ'

Update: 2018-02-10 10:32 GMT

ಬೆಂಗಳೂರು, ಫೆ. 10: ಕೆಂಗೇರಿ ಉಪನಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಜೆಡಿಎಸ್ ಸಮಾವೇಶ ನಡೆಯಿತು.

ಈ ಸಂದರ್ಭ ಮಾತನಾಡಿದ ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಾ ಇಂತಹ ನೀಚ ಮುಖ್ಯಮಂತ್ರಿಯನ್ನು ಬೆಳೆಸಿ ನಾನು ಜೀವನದಲ್ಲಿ ಮಹಾ ಅಪರಾಧ ಮಾಡಿದೆ. ಸೋನಿಯಾ ಗಾಂಧಿ ಅವರ ಬಲ ಇವತ್ತು ಕುಗ್ಗಿದೆ. ಇದನ್ನೇ ನೆಪ ಮಾಡಿಕೊಂಡು ಇವತ್ತು ಕಾಂಗ್ರೆಸ್ ನಲ್ಲಿ ಸಿಎಂ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕೀಳು ಮಟ್ಟದ ರಾಜಕಾರಣಿ ಎಂದು ಅವರು ವಾಗ್ದಾಳಿ ನಡೆಸಿದರು.

ಈ ಹಿಂದೆ ರಾಜ್ಯದ ಜನರ ಮನ ಗೆಲ್ಲುವ ಸಂದರ್ಭದಲ್ಲಿ ನಿಮಗೆ ಈ ದೇವೇಗೌಡ ಬೇಕಾಗಿತ್ತು. ಈಗ ಮುಖ್ಯಮಂತ್ರಿ ಆದ ಬಳಿಕ ಶ್ರವಣ ಬೆಳಗೊಳದ ಕಾರ್ಯಕ್ರಮ ದಲ್ಲಿ ನನಗೇ ಮಾತನಾಡುವುದಕ್ಕೆ ಅವಕಾಶ ಕೊಡಲಿಲ್ಲ, ನಿಮ್ಮ ಅಧಿಕಾರ ಎಷ್ಟು ದಿವಸ ಇರುತ್ತೆ ನಾನು ನೋಡುತ್ತೇನೆ. ನೀವು ಏನು ಮಾಡಿದ್ದೀರಾ ಎಂಬುವುದನ್ನು ಅಂಕಿ ಅಂಶ ಕೊಟ್ಟು ಮಾತನಾಡುತ್ತೇನೆ ಎಂದು ಹೇಳಿದರು.

ಖಜಾನೆಯನ್ನು ಲೂಟಿ ಮಾಡ್ತಾ ಇದೀರಾ ? ಇನ್ನೇನು ನಿಮ್ಮ ಟೈಂ ಮುಗೀತಾ ಬಂತಲ್ಲಪ್ಪ, 120 ದಿನ ಮಾತ್ರ ತಾನೆ ? ಸಿದ್ದರಾಮಯ್ಯ ಕೈ ಎತ್ತಿ ಭಾಷಣ ಮಾಡುವುದನ್ನ ನಾನೂ ನೋಡಿದ್ದೇನೆ, ನಂಗೆ ಡ್ಯಾನ್ಸ್ ಮಾಡಕ್ಕೆ ಬರುತ್ತೆ. ಏನ್ ನೀವು ಒಬ್ಬರೇ ದೊಡ್ಡ ಸತ್ಯವಂತರ ಸಿದ್ದರಾಮಯ್ಯ ಅವರೇ ? ಏನ್ ಇವರ ಮನೆ ಪಕ್ಕ ಸತ್ಯ ಹರಿಶ್ಚಂದ್ರ ಹಾದು ಹೋಗಿದ್ದಾರಾ ಎಂದು ಸಿಎಂ ಗೆ ಮಾಜಿ ಪ್ರಧಾನಿ ಪ್ರಶ್ನಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ನಾನು ಮುಖ್ಯ ಮಂತ್ರಿಯಾಗಿ ಮತ್ತು ಪ್ರಧಾನ ಮಂತ್ರಿಯಾಗಿ ಏನು ಕೊಡುಗೆ ಕೊಟ್ಟಿದೀನಿ ಅಂತ ಬಿಡಿ ಬಿಡಿಯಾಗಿ ಹೇಳ್ತಿನಿ, ಕಾವೇರಿ ನೀರು ತರಲು 1400 ಕೋಟಿ ರೂ. ಮತ್ತು ಕೃಷ್ಣ ನದಿಗೆ 1000 ಕೋಟಿ ರೂ. ಕೊಟ್ಟಿದೀನಿ. ವೀರಪ್ಪ ಮೊಯ್ಲಿ ಅವರು ಬಿಟ್ಟು ಹೋಗಿದ್ದ 120 ಕೋಟಿ ರೂ. ಸಾಲವನ್ನೂ ತೀರಿಸಿದೆ. ಬೆಂಗಳೂರಿನಲ್ಲಿ ಹೊರ ವರ್ತುಲ ರಸ್ತೆಗಳು, ಮೇಲ್ಸೇತುವೆಗಳು, ಐಟಿ ಬಿಟಿಗೆ ನೆರವುಗಳು ಕೊಟ್ಟದು ಇದೆ ದೇವೇಗೌಡ. ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಯಾರಾದರೂ ಒಬ್ಬ ಸಾಮಾಜಿಕ ನ್ಯಾಯ ಒದಗಿಸಿದ್ದರೆ ಇದೆ ನಿಮ್ಮ ದೇವೇಗೌಡ, ಎಲ್ಲರಿಗೂ ನ್ಯಾಯ ಒದಗಿಸಬೇಕೆಂದು ಹಗಲಿರುಳು ದುಡಿದೆ. ಇಂದು ಬೆಂಗಳೂರಿನಲ್ಲಿ ಒಬ್ಬ ಹಿಂದುಳಿದ ಮಹಿಳೆ ಒಬ್ಬರು ಉಪ ಮೇಯರ್ ಆಗಿದ್ದರೆ ಎಂದರು.

ನಂತರ ಮಾತು ಮುಂದುವರಿಸಿದ ಅವರು ದಯಮಾಡಿ ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ ಈ ಬಾರಿ ನಿಮ್ಮ ಮನೆ ಮಗ ಜವರಾಯಿ ಗೌಡರನ್ನು ಗೆಲ್ಲಿಸಿ ಕೊಡಿ, ಕುಮಾರಣ್ಣನಿಗೆ ಶಕ್ತಿ ತುಂಬಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News