ಬಿಜೆಪಿ ಮುಖಂಡರ ‘ಸ್ಲಂ ವಾಸ್ತವ್ಯ’ ಹಾಸ್ಯಾಸ್ಪದ : ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2018-02-10 12:59 GMT

ಬೆಂಗಳೂರು, ಫೆ. 10: ‘ರೆಸಾರ್ಟ್ ಪ್ರೇಮಿಗಳಿಗೆ ಕೊಳಚೆ ಪ್ರದೇಶದ ಜನರ ಕಷ್ಟ ಹೇಗೆ ತಾನೆ ಅರ್ಥ ಆಗಬೇಕು. ತಮ್ಮ 5 ವರ್ಷದ ಆಡಳಿತವನ್ನು ರೆಸಾರ್ಟ್ ರಾಜಕಾರಣದಲ್ಲೇ ಕಳೆದ ಬಿಜೆಪಿ ನಾಯಕರು ಇದೀಗ ಚುನಾವಣಾ ಹೊಸ್ತಿಲಿನಲ್ಲಿ ಸ್ಲಂ ವಾಸ್ತವ್ಯಕ್ಕೆ ಮುಂದಾಗಿರುವುದು ಹಾಸ್ಯಾಸ್ಪದ’ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಲೇವಡಿ ಮಾಡಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿ ಮುಖಂಡರಿಗೆ ಕೊಳಚೆ ಪ್ರದೇಶದ ನಿವಾಸಿಗಳ ಬಗ್ಗೆ ಯಾವುದೇ ಕಳಕಳಿ ಇಲ್ಲ. ಬಿಜೆಪಿ ಮುಖಂಡರ ಸ್ಲಂ ವಾಸ್ತವ್ಯ ಕೇವಲ ಚುನಾವಣಾ ಗಿಮಿಕ್ ಅಲ್ಲದೆ ಬೇರೇನೂ ಅಲ್ಲ ಎಂದು ಟೀಕಿಸಿದರು.

"ಸ್ವಾಮಿ ಯಡಿಯೂರಪ್ಪನವರೇ ನೀವು ಸಿಎಂ ಆಗಿದ್ದಾಗ ಬಾಪೂಜಿನಗರದ ಕೊಳಚೆ ಪ್ರದೇಶದ ಬಾಲಕನೊಬ್ಬನನ್ನು ದತ್ತು ಪಡೆದಿದ್ದೀರಿ. ಆತನ ವಿದ್ಯಾಭ್ಯಾಸ-ಯೋಗಕ್ಷೇಮ ನೋಡಿಕೊಳ್ಳುವ ಭರವಸೆ ಕೊಟ್ಟು, ಬಳಿಕ ನಡುರಸ್ತೆಯಲ್ಲಿ ಆ ಬಾಲಕನನ್ನು ಬಿಟ್ಟು ಹೋಗಿದ್ದು ನೆನಪಿದೆಯೇ ಎಂದು ಪ್ರಶ್ನಿಸಿದ ಅವರು, ನಿಮ್ಮ ಸುಳ್ಳು ಪ್ರಚಾರ ಟೊಳ್ಳು ಭರವಸೆಯನ್ನು ಸ್ಲಂ ಜನರು ಈಗ ನಂಬಬೇಕೇ?" ಎಂದು ಪ್ರಶ್ನಿಸಿದರು.

ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾಂಗ್ರೆಸ್ ಕೊಳಚೆ ಪ್ರದೇಶದ ನಿವಾಸಿಗಳ 2,300 ಕೋಟಿ ರೂ.ಸಾಲಮನ್ನಾ ಮಾಡಿ ನುಡಿದಂತೆ ನಡೆದಿದ್ದೇವೆ. ಪ್ರತಿ ಸ್ಲಂ ಕುಟುಂಬಕ್ಕೆ 10 ಸಾವಿರ ಲೀ.ಕುಡಿಯುವ ನೀರನ್ನು ಉಚಿತವಾಗಿ ನೀಡಲಾಗಿದ್ದು, ಹಳೆ ಬಾಕಿಮನ್ನಾ ಮಾಡಲಾಗಿದೆ. ನಗರದ ಬಡವರು ಹಾಗೂ ಕೊಳಚೆ ನಿವಾಸಿಗಳಿಗೆ ರಾಜ್ಯಾದ್ಯಂತ 1ಲಕ್ಷ ಮನೆ ಕಟ್ಟಿಸಿಕೊಡುವ ಯೋಜನೆ ಪ್ರಾರಂಭವಾಗಿದೆ ಎಂದರು.

ಅಕ್ರಮ-ಸಕ್ರಮ ಯೋಜನೆಯಡಿ ಬಡವರು, ಕೊಳಚೆ ಪ್ರದೇಶದ ನಿವಾಸಿಗಳ ಮನೆಗಳನ್ನು ಸಕ್ರಮ ಮಾಡಿ ಅವರಿಗೆ ನೆಮ್ಮದಿ ಜೀವನ ನೀಡಿದ್ದೇವೆ ಎಂದ ಅವರು ರಾಜ್ಯ ಸರಕಾರದ ಸಾಧನೆಯನ್ನು ನೋಡುವ ಮನಸ್ಥಿತಿ ಬಿಜೆಪಿ ನಾಯಕರಿಗಿರಲಿ. ಕೊಳಚೆ ಪ್ರದೇಶ ಮುಕ್ತ ಕರ್ನಾಟಕದತ್ತ ಕಾಂಗ್ರೆಸ್ ಸರಕಾರ ದಿಟ್ಟ ಹೆಜ್ಜೆಯನ್ನಿಟ್ಟಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News