ನೀರಿನ ಮಿತಬಳಕೆ ಅಗತ್ಯ: ಡಾ.ಜಿ.ಸತೀಶ್

Update: 2018-02-10 12:31 GMT

ಬೆಂಗಳೂರು, ಫೆ.10: ಕೃಷಿಗೆ ಪ್ರತಿ ಹನಿನೀರು ಅತ್ಯಮೂಲ್ಯವಾಗಿದ್ದು, ರೈತರು ನೀರಿನ ಮಿತಬಳಕೆಯ ಬಗ್ಗೆ ವೈಜ್ಞಾನಿಕವಾಗಿ ತರಬೇತಿ ಪಡೆದು ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಕೃಷಿ ಇಲಾಖೆ ಆಯುಕ್ತ ಡಾ.ಜಿ.ಸತೀಶ್ ತಿಳಿಸಿದ್ದಾರೆ.

ಶನಿವಾರ ನಗರದ ಜಿಕೆವಿಕೆ ಆವರಣದ ಕುವೆಂಪು ಸಭಾಂಗಣದಲ್ಲಿ ಕೃಷಿ ವಿಶ್ವವಿದ್ಯಾಲಯ ಹಾಗೂ ವಿಸ್ತರಣಾ ನಿರ್ದೇಶನಾಲಯ, ರೈತ ತರಬೇತಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ 50 ವರ್ಷಗಳಲ್ಲಿ ಬೆಳೆ ಪದ್ದತಿಯಲ್ಲಿ ಸಮಗ್ರ ಬದಲಾವಣೆಯಾಗಿದೆ. ಬದಲಾದ ಹವಾಮಾನಕ್ಕನುಗುಣವಾಗಿ ಕಡಿಮೆ ನೀರಿನಲ್ಲೂ ಬೇಸಾಯ ಮಾಡಲು ಪ್ರತಿಹನಿ ನೀರನ್ನು ಸಂರಕ್ಷಿಸಬೇಕಾದ ಅಗತ್ಯವಿದೆ. ಇದಕ್ಕೆ ಪೂರಕವಾಗಿ ತರಬೇತಿ ಪಡೆದು ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಕೃಷಿ ಬಂಡವಾಳ ಹೂಡುವಂತಹ ಉದ್ಯಮವಾಗಿ ಬೆಳೆದಿದೆ. ಹೀಗಾಗಿ, ರೈತರು ತಮ್ಮ ಭೂಮಿಯಲ್ಲಿ ಬಂಡವಾಳ, ಸಮಯ ಹಾಗೂ ಕಾರ್ಮಿಕರನ್ನು ವೈಜ್ಞಾನಿಕ ರೀತಿಯಲ್ಲಿ ಬಳಸಿ ಉತ್ಪಾದನೆ ಹೆಚ್ಚಿಸುವುದರ ಜತಗೆ ಆರ್ಥಿಕವಾಗಿ ಲಾಭಗಳಿಸಬೇಕಿದೆ ಎಂದು ಹೇಳಿದರು.

ರೈತ ತರಬೇತಿ ಸಂಸ್ಥೆ ತಳಿ ಅಭಿವೃದ್ಧಿ, ಮಾರುಕಟ್ಟೆ ವ್ಯವಸ್ಥೆ, ಇಳುವರಿ ಬಗ್ಗೆ ರೈತರಿಗೆ ಅನುಕೂಲಕರವಾಗುವ ರೀತಿಯಲ್ಲಿ ತರಬೇತಿ ನೀಡುತ್ತಿದೆ. ರೈತರು ಇದರ ಪ್ರಯೋಜನ ಪಡೆದು ತಮ್ಮ ಕೃಷಿ ಪದ್ದತಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಹೇಳಿದರು.

ಗಾಂಧಿ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಚ್.ಶಿವಣ್ಣ ಮಾತನಾಡಿ, ರೈತರಿಗೆ ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ತಲುಪಿಸುವಲ್ಲಿ ರೈತ ತರಬೇತಿ ಸಂಸ್ಥೆ ಮಹತ್ವದ ಕಾರ್ಯವಹಿಸುತ್ತಿದೆ ಎಂದ ಅವರು, ಕಾರ್ಯಾಗಾರಗಳಲ್ಲಿ ತರಬೇತಿ ಪಡೆದ ರೈತರಿಂದ ತರಬೇತಿ ಕೊಡಿಸುವುದರಿಂದ ಇನ್ನಿತರ ರೈತರು ಸುಲಭವಾಗಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಯಶಸ್ವಿ ರೈತರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಮಹಾ ಪ್ರಬಂಧಕ ಡಾ.ಎಂ.ಇ.ಗಾಣಗಿ, ವಿಸ್ತರಣಾ ನಿರ್ದೇಶಕ ಡಾ.ಎಂ.ಎಸ್.ನಟರಾಜ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News