ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ : ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಧರಣಿ

Update: 2018-02-10 12:58 GMT

ಬೆಂಗಳೂರು, ಫೆ.10: ವಿದ್ಯಾರ್ಥಿನಿ ಮೇಘನಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಲೇಜಿನ ಆಡಳಿತ ಮಂಡಳಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿದ್ಯಾರ್ಥಿ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಜನವಾದಿ ಮಹಿಳಾ ಸಂಘಟನೆಗಳ ನೂರಾರು ಕಾರ್ಯಕರ್ತರು ಜಮಾಯಿಸಿ, ಕಾಲೇಜುಗಳಲ್ಲಿ ನಡೆಯುತ್ತಿರುವ ರ್ಯಾಗಿಂಗ್‌ಗಳನ್ನು ತಡೆಯಲು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಘೋಷಣೆಗಳು ಕೂಗಿ ಆಗ್ರಹಪಡಿಸಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಗೌರಮ್ಮ, ಕಾಲೇಜಿನಲ್ಲಿ ರ್ಯಾಗಿಂಗ್‌ನಿಂದಾಗಿ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾಲೇಜಿನ ಆಡಳಿತ ಮಂಡಳಿಯೇ ನೇರ ಕಾರಣವಾಗಿದ್ದು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿನಿ ಮೇಘನಾಗೆ ಮಾನಸಿಕ ಹಿಂಸೆ, ಹಲ್ಲೆ, ಪರೀಕ್ಷೆಯ ನಿರಾಕರಣೆಯ ಮಾಡಿ ಕಾಲೇಜಿನ ಆಡಳಿತ ಮಂಡಳಿ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದೆ. ಈ ಮೂಲಕ ಶೈಕ್ಷಣಿಕ ಹತ್ಯೆಯನ್ನು ನಡೆಸಿದೆ. ಶಿಕ್ಷಣ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನಾಗಿ ಮಾಡಬೇಕಾದ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಪ್ರತಿಭೆಯನ್ನು ಕೊಲೆ ಮಾಡಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿ ತಾಯಿ ಲತಾ ಮಾತನಾಡಿ, ಮೇಘನಾ ಶೈಕ್ಷಣಿಕ ಹತ್ಯೆಗೆ ಆಕೆ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು ಎಂದು ಆಡಳಿತ ಮಂಡಳಿ ಸುಳ್ಳೆಬ್ಬಿಸಿದೆ. ವಾಸ್ತವವಾಗಿ ಎರಡು ವಿಷಯಗಳಲ್ಲಿ ಹಾಜರಾತಿ ಕೊರತೆ ಹೆಸರಿನಲ್ಲಿ ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ವಿದ್ಯಾರ್ಥಿಗಳು, ಉಪನ್ಯಾಸಕರು ಮಾನಸಿಕ ಹಿಂಸೆ ನೀಡುತ್ತಿರುವ ಕಾರಣದಿಂದಾಗಿಯೇ ತರಗತಿಗೆ ಹಾಜರಾಗುತ್ತಿರಲಿಲ್ಲ ಎಂದು ಆರೋಪಿಸಿದರು.

ಕಳೆದ ಮೂರು ತಿಂಗಳ ಹಿಂದೆ ನನ್ನ ಮಗಳ ಬಳಿ ಅನುಚಿತವಾಗಿ ನಡೆದುಕೊಳ್ಳಬೇಡಿ ಎಂದು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಬಳಿ ಮನವಿ ಮಾಡಿದ್ದೆ. ಅದಕ್ಕೆ ಕಾಲೇಜಿನ ಎಚ್‌ಒಡಿ ರಾಜಕುಮಾರ್ "ನಿಮ್ಮ ಮಗಳು ಸರಕಾರ ನಡೆಸುವ ಸಿ.ಇ.ಟಿ.ಯಲ್ಲಿ ಆಯ್ಕೆಯಾದ ಕಾರಣ ಆಡಳಿತ ಮಂಡಳಿಯ ಸೀಟುಗಳ ವಿದ್ಯಾರ್ಥಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಹೋಗಲಿ" ಎಂದು ಹೇಳಿ, ಹಣಕೊಟ್ಟು ಬಂದ ವಿದ್ಯಾರ್ಥಿಗಳ ಪರ ಮಾತನಾಡಿದ್ದರು.
ಎಚ್‌ಒಡಿ ರಾಜ್‌ಕುಮಾರ ದುರ್ವರ್ತನೆಯ ಹೇಳಿಕೆ ಮೇಘನಾಳನ್ನು ಮತ್ತಷ್ಟು ಘಾಸಿಗೊಳಿಸಿತು. ಮೂರು ತಿಂಗಳಿಂದ ಮೇಘನಾ ಅನುಭವಿಸುತ್ತಿರುವ ಯಾತನೆಯನ್ನು ನಮ್ಮ ಬಳಿ, ಕಾಲೇಜಿನ ಉಪ ಪ್ರಾಂಶುಪಾಲರು, ಉಪನ್ಯಾಸಕರ ಬಳಿ ಹೇಳಿಕೊಂಡಿದ್ದರೂ ಆಡಳಿತ ಮಂಡಳಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಪರಿಣಾಮ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನೋವು ತೋಡಿಕೊಂಡರು.

ಎಸ್‌ಎಫ್‌ಐ ಅಧ್ಯಕ್ಷ ಅಂಬರೀಶ್ ಮಾತನಾಡಿ, ರ್ಯಾಗಿಂಗ್ ನಡೆಸುವ ಹುಡುಗರು ಹಾಗೂ ಅದನ್ನು ಪ್ರೋತ್ಸಾಹಿಸುವ ಕಾಲೇಜುಗಳ ಮೇಲೆ ಕ್ರಮ ಜರುಗಿಸಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದರ ಅನ್ವಯ ಕಾನೂನು ಕ್ರಮ ಜರುಗಿಸಬೇಕಿದೆ. ರಾಜ್ಯದಲ್ಲಿ ನರ್ಸಿಂಗ್, ಮೆಡಿಕಲ್, ಎಂಜನಿಯರಿಂಗ್ ಕಾಲೇಜುಗಳಲ್ಲಿ ವ್ಯಾಪಕವಾಗಿ ರ್ಯಾಗಿಂಗ್ ನಡೆಯುತ್ತಿದೆ. ರ್ಯಾಗಿಂಗ್ ನಿಯಂತ್ರಿಸಲು ಕಠಿಣ ಕಾನೂನು ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಕಾರ್ಯದರ್ಶಿ ಗುರುರಾಜ್ ದೇಸಾಯಿ, ಸಹ ಕಾರ್ಯದರ್ಶಿ ಸಿ.ಅಮರೇಶ್, ಉಪಾಧ್ಯಕ್ಷ ಎಸ್.ಚಿಕ್ಕರಾಜು, ಶಬ್ಬೀರ್, ವಿದ್ಯಾರ್ಥಿನಿ ಅಕ್ಕ ಭಾವನಾ, ಜೆಎಂಎಸ್ ಉಪಾಧ್ಯಕ್ಷೆ ಕೆ.ಎಸ್.ಲಕ್ಷ್ಮಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News