ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಫೆ.17 ರಿಂದ ಬಳ್ಳಾರಿಯಿಂದ ಸಿಎಂ ಮನೆವರೆಗೆ ಪಾದಯಾತ್ರೆ

Update: 2018-02-12 12:59 GMT

ಬೆಂಗಳೂರು, ಫೆ.12: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಫೆ.17 ರಿಂದ 24 ರವರೆಗೆ ಬಳ್ಳಾರಿಯಿಂದ ಮುಖ್ಯಮಂತ್ರಿ ಮನೆಗೆ ಪಾದಯಾತ್ರೆ ಹಮ್ಮಿಕೊಳ್ಳಲು ಕರ್ನಾಟಕ ಮಾದಿಗರ ಸಂಘ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ದೇವರಾಜ್, ರಾಜ್ಯ ಸರಕಾರ ದಲಿತರನ್ನು ಕೇವಲ ಮತಬ್ಯಾಂಕ್‌ಗಾಗಿ ಬಳಸಿಕೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಹೇಳಿಕೆ ನೀಡುತ್ತಿದ್ದಾರೆಯೇ ಹೊರತು, ಅದನ್ನು ಜಾರಿ ಮಾಡಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾದಿಗ ಸಮುದಾಯದಲ್ಲಿನ ಕೆಲವು ಮೇಲ್ಜಾತಿ ಅಧಿಕಾರಿಗಳು ಸದಾಶಿವ ಆಯೋಗವನ್ನು ಜಾರಿ ಮಾಡಲು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಾದ ಕ್ರಮವಲ್ಲ. ಇದು ಸಂವಿಧಾನದ ವಿರೋಧಿ ಕೃತ್ಯವಾಗಿದೆ. ರಾಜ್ಯ ಸರಕಾರ ಮಾದಿಗ ಸಮುದಾಯವನ್ನು ನಿರ್ಲಕ್ಷ ಮಾಡದೆ ಕೂಡಲೇ ಈ ವರದಿಯನ್ನು ಜಾರಿ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಮಾದಿಗರು ಸಂಘಟಿತರಾಗಿ ಹೋರಾಟ ಮಾಡಿದ ಪರಿಣಾಮ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿ ವರ್ಷಗಳೇ ಕಳೆಯುತ್ತಿವೆ. ಆದರೆ, ಅಧಿಕಾರಕ್ಕೆ ಬಂದ ಸರಕಾರಗಳು ಈ ವರದಿಯನ್ನು ಜಾರಿ ಮಾಡಲು ಮುಂದಾಗಲಿಲ್ಲ. ಹಿಂದಿನ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳೇ ಕಳೆಯುತ್ತಿದ್ದರೂ ವರದಿಗೆ ಒಪ್ಪಿಗೆ ಸೂಚಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾಗುತ್ತಿಲ್ಲ. ಬದಲಿಗೆ ದಲಿತರ ನಡುವೆ ಎತ್ತಿಕಟ್ಟಿ ವರದಿಯನ್ನು ವಿರೋಧಿಸುವಂತೆ ಪ್ರೇರೇಪಿಸಲಾಗುತ್ತಿದೆ. ಹೀಗಾಗಿ, ಕೂಡಲೇ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಸಲ್ಲಿಸಬೇಕು ಎಂದು ಆಗ್ರಹಿಸಿ ಹಾಗೂ ದಲಿತ ಸಮುದಾಯವನ್ನು ಜಾಗೃತಗೊಳಿಸುವ ಸಲುವಾಗಿ ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News