ದೇಶದ ವಿರುದ್ಧ ಹೋರಾಡುವುದಕ್ಕೆ ಸೇನೆ ಕಟ್ಟುತ್ತಿರುವ ಆರೆಸ್ಸೆಸ್

Update: 2018-02-13 04:30 GMT

ತಮ್ಮ ಸರ್ವ ಬದುಕನ್ನು ಒತ್ತೆಯಿಟ್ಟು ಸೈನಿಕರು ಈ ದೇಶದ ಗಡಿಯನ್ನು ಕಾಯುತ್ತಿದ್ದಾರೆ. ಇಂದು ನಾವು ನೆಮ್ಮದಿಯಿಂದ ಮನೆಯೊಳಗೆ ಟಿವಿ ನೋಡುತ್ತಿದ್ದರೆ, ಸ್ವಾತಂತ್ರದ ಸರ್ವ ಅವಕಾಶಗಳನ್ನು ಬಳಸಿಕೊಂಡು ಜೀವಿಸುತ್ತಿದ್ದರೆ ಅದರ ಹಿಂದೆ ಈ ಸೈನಿಕರ ತ್ಯಾಗವಿದೆ. ಇತ್ತೀಚಿನ ದಿನಗಳಲ್ಲಿ ಪ್ರತೀ ದಿನ ಹುತಾತ್ಮ ಸೈನಿಕರ ಮತ್ತು ಕಣ್ಣೀರಿಡುತ್ತಿರುವ ಸೈನಿಕರ ಕುಟುಂಬಗಳ ಚಿತ್ರಗಳನ್ನು ನೋಡುತ್ತಿದ್ದೇವೆ. ಗಡಿಯಲ್ಲಿ ಶತ್ರುಗಳು ಕಾಲು ಕೆದರಿದಾಗೊಮ್ಮೆ ನಮ್ಮ ದೇಶಪ್ರೇಮ ಜಾಗೃತಗೊಳ್ಳುತ್ತದೆ.

ಒಬ್ಬ ಹುತಾತ್ಮನ ಮೃತ ದೇಹ ಊರಿಗೆ ಬಂದಾಗ ‘ಯುದ್ಧವಾಗಲಿ’ ಎಂದು ಚೀರಾಡುತ್ತೇವೆ. ಬಳಿಕ ಮನೆಯಲ್ಲಿ ಟಿವಿಯ ಮುಂದೆ ಯಾವುದೋ ಸಿನೆಮಾ ನೋಡುತ್ತಾ ಮರೆತು ಬಿಡುತ್ತೇವೆ. ಆದರೆ ಸೈನಿಕರು ಹಗಲಿರುಳು ತನ್ನ ತಾಯ್ನೆಲದ ಬಗ್ಗೆ ಪ್ರೀತಿಯನ್ನು ಎದೆಯಲ್ಲಿ ತುಂಬಿಕೊಂಡು ಚಳಿ, ಮಳೆ, ಬಿಸಿಲು ಇವುಗಳ ನಡುವೆ ಹೋರಾಡುತ್ತಾ ಯಾವುದೇ ಘೋಷಣೆ ಚೀರಾಟಗಳಿಲ್ಲದೆ ದೇಶ ಸೇವೆ ಮಾಡಿಕೊಂಡು ಬಂದಿದ್ದಾರೆ. ಆದರೆ ಎಂದಿಗೂ ‘ಈ ದೇಶ ಉಳಿದಿರುವುದು ನಮ್ಮ ಶಕ್ತಿಯಿಂದ, ಸಾಮರ್ಥ್ಯದಿಂದ’ ಎಂದು ಬಹಿರಂಗವಾಗಿ ಕೂಗಿ ಹೇಳಿದವರಲ್ಲ. ಅದನ್ನು ಕರ್ತವ್ಯ ಎಂಬಂತೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ದುರದೃಷ್ಟವಶಾತ್, ಆರೆಸ್ಸೆಸ್‌ನ ಮುಖಂಡ ಮೋಹನ್ ಭಾಗವತ್ ಈ ಸೈನಿಕರ ಸಾಮರ್ಥ್ಯ, ತ್ಯಾಗ, ಬಲಿದಾನಗಳನ್ನು ಕೀಳಂದಾಜು ಮಾಡಿ ಅವಮಾನಿಸಿದ್ದಾರೆ. ಆರೆಸ್ಸೆಸ್ ಕಾರ್ಯಕರ್ತರು ಸೈನಿಕರಿಗಿಂತಲೂ ಶ್ರೇಷ್ಠರು, ಸೇನೆಗೆ ಸೈನಿಕರನ್ನು ಸನ್ನದ್ಧಗೊಳಿಸಲು ಆರು ತಿಂಗಳು ಬೇಕಾದರೆ ನಮಗೆ ಕೇವಲ ಮೂರೇ ದಿನ ಸಾಕು ಎಂದಿದ್ದಾರೆ. ಈವರೆಗೆ ದೇಶಕ್ಕಾಗಿ ಹನಿ ರಕ್ತ ಚೆಲ್ಲುವುದಿರಲಿ, ಹನಿ ಬೆವರನ್ನೂ ಹರಿಸದ ಮಂದಿ ಇಂದು ದೇಶದ ಸೈನಿಕರ ಜೊತೆಗೆ ಆರೆಸ್ಸೆಸ್ ಕಾರ್ಯಕರ್ತರನ್ನು ಹೋಲಿಸುವ ಮಟ್ಟಕ್ಕೆ ಬಂದು ನಿಂತಿದ್ದಾರೆ.

ಸ್ವಾತಂತ್ರ ಹೋರಾಟದಲ್ಲಿ ಒಬ್ಬನೇ ಒಬ್ಬ ಆರೆಸ್ಸೆಸ್ ಕಾರ್ಯಕರ್ತ ಭಾಗವಹಿಸಲಿಲ್ಲ. ಬದಲಿಗೆ ಬ್ರಿಟಿಷರಿಗೆ ಪರೋಕ್ಷವಾಗಿ ಸಹಕರಿಸಿದರು. ಸ್ವಾತಂತ್ರ ಹೋರಾಟಗಾರರ ಮಾಹಿತಿಗಳನ್ನು ಗುಟ್ಟಾಗಿ ಬ್ರಿಟಿಷರಿಗೆ ತಿಳಿಸಿ ಅವರ ಬಂಧನಕ್ಕೆ ಕಾರಣರಾದವರು ಆರೆಸ್ಸೆಸ್ ಮುಖಂಡರು. ಇವರಿಂದಾಗಿ ಹಲವ ಸ್ವಾತಂತ್ರ ಯೋಧರು ಗಲ್ಲಿಗೇರಬೇಕಾಗಿ ಬಂತು. ವಿನಾಯಕ ದಾಮೋದರ ಸಾವರ್ಕರ್ ಅಂತೂ ಎರಡೆರಡು ಬಾರಿ ಬ್ರಿಟಿಷರ ಬಳಿ ‘ನಮ್ಮನ್ನು ಬಿಡುಗಡೆ ಮಾಡಿದರೆ ತನ್ನ ಸರ್ವ ಸೇವೆಯನ್ನು ನಿಮಗಾಗಿ ಮೀಸಲಿಡುತ್ತೇನೆ’ ಎಂದು ತಪ್ಪೊಪ್ಪಿಗೆ ಬರೆದುಕೊಟ್ಟರು. ಅಂತಿಮವಾಗಿ ಗಾಂಧೀಜಿಯನ್ನು ಕೊಲೆ ಮಾಡಿದ ಆರೋಪಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟರು. ದೇಶದ್ರೋಹಿ ಚಟುವಟಿಕೆಗಳಿಗಾಗಿ ಆರೆಸ್ಸೆಸ್ ಮತ್ತು ಅವರ ಕಾರ್ಯಕರ್ತರು ಪದೇ ಪದೇ ಸುದ್ದಿಯಾಗುತ್ತಾ ಬಂದಿದ್ದಾರೆ. ಇಂತಹ ಹಿನ್ನೆಲೆ ಹೊಂದಿರುವ ಆರೆಸ್ಸೆಸ್ ಎಂಬ ಸಂಸ್ಥೆಯ ಮುಖ್ಯಸ್ಥರು, ಆರೆಸ್ಸೆಸ್ ಕಾರ್ಯಕರ್ತರು ಸೇನೆಗಿಂತ ಮಿಗಿಲು ಎಂದು ಹೇಳಿ ಬಹಿರಂಗವಾಗಿ ಸೇನೆಯ ತ್ಯಾಗಕ್ಕೆ ಅವಮಾನ ಮಾಡಿದ್ದಾರೆ. ಭಾಗವತ್ ಅವರದ್ದು ಅಪ್ಪಟ ದೇಶದ್ರೋಹಿ ಹೇಳಿಕೆಯಾಗಿದೆ.

ಹಲವು ಕಾರಣಗಳಿಂದ ನಾವು ಭಾಗವತ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಮೊದಲ ಕಾರಣ, ಅವರು ದೇಶದ ಸೇನೆಯ ಕುರಿತಂತೆ ಹೀನಾಯವಾಗಿ ಮಾತನಾಡಿರುವುದು. ಅಂದರೆ ದೇಶದೊಳಗೆ ಅಶಾಂತಿಯನ್ನು ಹರಡುತ್ತಾ ರಾಜಕೀಯ ನಡೆಸುವ ದುಷ್ಕರ್ಮಿಗಳ ಜೊತೆಗೆ ಸೇನೆಯ ಯೋಧರನ್ನು ಹೋಲಿಸಿದ್ದು. ಎರಡನೆಯ ಕಾರಣ, ಯಾವುದೇ ಖಾಸಗಿ ಸಂಸ್ಥೆಯೊಂದು ಪ್ರರ್ಯಾಯ ಸೇನೆಯೊಂದನ್ನು ಹೊಂದಲು ಸಂವಿಧಾನದಲ್ಲಿ ಅವಕಾಶವಿದೆಯೇ? ಎನ್ನುವುದು. ತನ್ನ ಸಂಸ್ಥೆ ಪರ್ಯಾಯ ಸೇನೆಯನ್ನು ಹೊಂದಿದೆ ಮತ್ತು ಅದು ದೇಶದ ಸೇನೆಗಿಂತ ಬಲಿಷ್ಠವಾಗಿದೆ ಎಂದು ಭಾಗವತ್ ಬಹಿರಂಗವಾಗಿ ಘೋಷಿಸಿದ್ದಾರೆ.

ಆರೆಸ್ಸೆಸ್‌ನ ಸಿದ್ಧಾಂತ ಸಂವಿಧಾನದ ಸಿದ್ಧಾಂತಕ್ಕೆ ವ್ಯತಿರಿಕ್ತವಾದುದು. ಸಂವಿಧಾನ ಜಾತಿ ರಹಿತವಾದ ಸಮಾನ ಸಮಾಜವೊಂದನ್ನು ಬಯಸಿದರೆ, ಆರೆಸ್ಸೆಸ್ ಮನು ಸಂವಿಧಾನ, ಜಾತಿ ಸಹಿತವಾದ ಮೇಲು-ಕೀಳು ಸಮಾಜವೊಂದನ್ನು ಬಯಸುತ್ತದೆ. ಪ್ರಜಾಸತ್ತೆಯೊಂದಿಗೆ ಅದಕ್ಕೆ ಅಸಮಾಧಾನವಿದೆ. ಆದುದರಿಂದಲೇ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಆರೆಸ್ಸೆಸ್ ಕೈಜೋಡಿಸಲಿಲ್ಲ. ಈ ದೇಶ ಧರ್ಮಾಧಾರಿತ ಅದರಲ್ಲೂ ವೈದಿಕ ಧರ್ಮಾಧಾರಿತ ದೇಶವಾಗಬೇಕು ಎಂದು ಬಯಸುತ್ತಿದೆ. ಆರೆಸ್ಸೆಸ್ ತನ್ನ ಜೊತೆಗೆ ಒಂದು ಬಲಾಢ್ಯ ಸೇನೆಯನ್ನು ಇಟ್ಟುಕೊಂಡಿದೆ ಎಂದಾದರೆ ಆ ಸೇನೆ ಪಾಕಿಸ್ತಾನದ ವಿರುದ್ಧ ಹೋರಾಡುವುದಕ್ಕೆ ಇರುವುದಲ್ಲ. ಬದಲಿಗೆ ಪ್ರಜಾಸತ್ತಾತ್ಮಕ ಭಾರತ ಸೇನೆಯ ವಿರುದ್ಧ ಹೋರಾಡುವುದಕ್ಕೆ ಅದನ್ನು ಸನ್ನದ್ಧಗೊಳಿಸಲಾಗಿದೆ ಎಂದೇ ನಾವು ಭಾವಿಸಬೇಕಾಗಿದೆ. ಸೇನೆಯೆಂದ ಮೇಲೆ ಅದಕ್ಕೆ ತರಬೇತಿ ನೀಡಬೇಕಾಗುತ್ತದೆ. ಪಾಕಿಸ್ತಾನವು ಕಾಶ್ಮೀರದ ಉಗ್ರರಿಗೆ ತರಬೇತಿ ನೀಡುವಂತೆ ಅದಕ್ಕೆ ಶಸ್ತ್ರಾಸ್ತ್ರಗಳ ಅಗತ್ಯವಿದೆ. ತನ್ನ ಜೊತೆಗೆ ಸೇನೆಯಿದೆ ಎಂದು ಹೇಳುವ ಆರೆಸ್ಸೆಸ್ ಮುಖಂಡರು ಪರೋಕ್ಷವಾಗಿ ತಮ್ಮ ಜೊತೆಗೆ ಶಸ್ತ್ರಾಸ್ತ್ರಗಳೂ ಇವೆ ಎನ್ನುವುದು ಒಪ್ಪಿಕೊಂಡಂತೆ. ಆದುದರಿಂದ ಈ ದೇಶದ ಸೇನೆಗೆ ಪರ್ಯಾಯವಾಗಿ ಸೇನೆಯನ್ನು ಕಟ್ಟಿದ್ದಕ್ಕಾಗಿ ಆರೆಸ್ಸೆಸ್ ಮುಖಂಡರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕಾಗುತ್ತದೆ.

ಆರೆಸ್ಸೆಸ್ ಈ ಹಿಂದೊಮ್ಮೆ ದೇಶವಿರೋಧಿ ಕೃತ್ಯಕ್ಕಾಗಿ ನಿಷೇಧಿಸಲ್ಪಟ್ಟಿತ್ತು. ಆದರೆ, ಬರೇ ಸಾಂಸ್ಕೃತಿಕ ಕಾರ್ಯಗಳಿಗಾಗಿ ಆರೆಸ್ಸೆಸ್‌ನ್ನು ಬಳಸಿಕೊಳ್ಳುತ್ತೇವೆ ಎಂದು ದೇಶಕ್ಕೆ ವಚನಕೊಟ್ಟ ಬಳಿಕವಷ್ಟೇ ಅವರ ಮೇಲಿನ ನಿಷೇಧವನ್ನು ಹಿಂದೆಗೆಯಲಾಯಿತು. ಇಂದು ತನ್ನ ಬಳಿ ಸೇನೆ ಇದೆ ಎಂದು ಹೇಳಿಕೊಳ್ಳುತ್ತಿರುವ ಆರೆಸ್ಸೆಸ್ ಮುಖಂಡರು, ಯಾವ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಈ ಸೇನೆಯನ್ನು ಕಟ್ಟಲಾಗಿದೆ ಎಂದು ಸರಕಾರ ಕೇಳುವುದು ಅತ್ಯಗತ್ಯ. ಇಲ್ಲವಾದರೆ ಈ ಸೇನೆ ಈ ದೇಶದ ವಿರುದ್ಧವೇ ಯುದ್ಧಕ್ಕಿಳಿಯುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಹಿಂದೊಮ್ಮೆ, ಗಡಿಯಲ್ಲಿ ಸೈನಿಕರು ನಡೆಸಿದ ಸರ್ಜಿಕಲ್ ದಾಳಿಯ ಹಿರಿಮೆಯನ್ನು ರಕ್ಷಣಾ ಸಚಿವರು ಯಾವ ನಾಚಿಕೆಯೂ ಇಲ್ಲದೆ ಆರೆಸ್ಸೆಸ್‌ನ ತಲೆಗೆ ಕಟ್ಟಿದ್ದರು. ಅದರ ಮುಂದಿನ ಭಾಗ ಭಾಗವತ್ ಹೇಳಿಕೆಯಾಗಿದೆ. ಇಂದು ನಮ್ಮ ದೇಶವನ್ನು ರಕ್ಷಿಸಲು ಆರೆಸ್ಸೆಸ್‌ನ ಮೈಗಳ್ಳ ಸೇನೆಯ ಅಗತ್ಯವಿಲ್ಲ. ಈ ದೇಶ ರಕ್ಷಿಸಲು ನಮ್ಮ ಸೈನಿಕರು ಸರ್ವ ಸಜ್ಜಿತರಾಗಿದ್ದಾರೆ. ಜೊತೆಗೆ ಈ ದೇಶದ ಜನರಿಗೆ ಅನ್ನ ನೀಡುತ್ತಿರುವ ರೈತ ವರ್ಗವೇ ನಿಜವಾದ ಸೇನೆ. ಅದಕ್ಕಾಗಿಯೇ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ‘ ಜೈ ಜವಾನ್, ಜೈ ಕಿಸಾನ್’ ಎಂದರು.

ಹಾಗೆ ನೋಡಿದರೆ ಈ ದೇಶವನ್ನು ಪ್ರತಿ ದಿನ ಮುಂಜಾನೆ ಗುಡಿಸುತ್ತಿರುವ, ಶುಚಿಗೊಳಿಸುತ್ತಿರುವ ಪೌರಕಾರ್ಮಿಕ ವರ್ಗ ದೇಶಕ್ಕಾಗಿ ಬದುಕನ್ನು ತ್ಯಾಗ ಮಾಡುತ್ತಿರುವ ಇನ್ನೊಂದು ಸೇನೆ. ಆರೆಸ್ಸೆಸ್ ಈ ದೇಶಕ್ಕೆ ಮಾಡಬಹುದಾದ ದೊಡ್ಡ ಉಪಕಾರವೆಂದರೆ, ಜಾತಿ, ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯದೇ ಇರುವುದು. ಇಂದು ಪಾಕಿಸ್ತಾನವೂ ಅಶಾಂತಿಯನ್ನು ಬಿತ್ತಿ ದೇಶದ ಭದ್ರತೆಗೆ ಸವಾಲು ಎಸೆಯುತ್ತಿದೆ. ಆರೆಸ್ಸೆಸ್ ಕೂಡ ದೇಶದಲ್ಲಿ ಕೋಮುವಾದವನ್ನು ಬಿತ್ತಿ ಜನರನ್ನು ಒಡೆಯುತ್ತಿದೆ. ಪಾಕಿಸ್ತಾನ ಮತ್ತು ಆರೆಸ್ಸೆಸ್ ದೇಶದ ಸಮಗ್ರತೆಯನ್ನು, ಐಕ್ಯತೆಯನ್ನು ಜೊತೆ ಜೊತೆಯಾಗಿ ಒಡೆಯುವ ಪ್ರಯತ್ನದಲ್ಲಿದೆ. ಇಂದು ಇಡೀ ದೇಶ ಆರೆಸ್ಸೆಸ್‌ನ ಜೊತೆಗೆ ಕೈ ಮುಗಿದು ಕೇಳುತ್ತಿರುವುದು ಒಂದೇ. ಈ ದೇಶದ ಐಕ್ಯತೆಯನ್ನು, ಸಮಗ್ರತೆಯನ್ನು, ಪ್ರಜಾತಂತ್ರವನ್ನು ಒಡೆದು ಹಾಕಿ ಇನ್ನೊಂದು ಪಾಕಿಸ್ತಾನವಾಗಿ ಭಾರತವನ್ನು ಪರಿವರ್ತಿಸದಿರಿ. ಅದುವೇ ನೀವು ದೇಶಕ್ಕೆ ಮಾಡಬಹುದಾದ ಅತೀ ದೊಡ್ಡ ಉಪಕಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News