ಬೆಂಗಳೂರು: ಮ್ಯಾನ್ ಹೋಲ್ ಗೆ ಇಳಿದ ಇಬ್ಬರು ಕಾರ್ಮಿಕರು ಮೃತ್ಯು

Update: 2018-02-13 14:15 GMT

ಬೆಂಗಳೂರು,ಫೆ.13: ಮ್ಯಾನ್ ಹೋಲ್ ಗೆ ಇಳಿದಿದ್ದ ರಾಯಚೂರು ಮೂಲದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟ ಘಟನೆ ಎಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ ಲೇಔಟ್ ನಲ್ಲಿ ಇಂದು ಸಂಜೆ‌ 4 ಗಂಟೆ‌ ಸುಮಾರಿಗೆ ನಡೆದಿದೆ.

ಮೃತಪಟ್ಟ ಕಾರ್ಮಿಕರನ್ನು ರಾಮು(35)ಮತ್ತು ರವಿ(28) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಎಇಸಿಎಸ್ ಲೇಔಟ್ ನಲ್ಲಿರುವ ವಾಣಿಜ್ಯ ಮಳಿಗೆಯ ಚರಂಡಿ ನೀರನ್ನು ಸ್ವಚ್ಛ ಮಾಡಲು ರಾಮು ಚರಂಡಿಗೆ ಇಳಿದಿದ್ದು, ಈ ವೇಳೆ ರಾಮುವಿಗೆ ಉಸಿರುಗಟ್ಟಿದಂತಾಗಿ ಕೂಗಾಡಿದ್ದಾರೆ. ಈ ಸಂದರ್ಭ ರಾಮುವನ್ನು ರಕ್ಷಣೆ ಮಾಡಲು‌ ರವಿ ಕೂಡ ಇಳಿದಿದ್ದು, ರವಿ ಕೂಡಾ ಉಸಿರುಗಟ್ಟಿದಂತಾಗಿ ಕೂಗಾಡಿದ್ದಾರೆ. ಇವರಿಬ್ಬರ ಕೂಗಾಟ ಕೇಳಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಪಡೆ ಇಬ್ಬರನ್ನೂ ಮೇಲಕ್ಕೆತ್ತಿದ್ದು, ಆದರೆ ಇಬ್ಬರು ಕೂಡಾ ಚರಂಡಿ ಗುಂಡಿಯಲ್ಲೇ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. 

ಘಟನಾ ಸ್ಥಳಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಸಂಪತ್ ರಾಜ್, ವೈಟ್‌ಪೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಅಬ್ದುಲ್ ಅಹದ್, ಎಸಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಎಚ್‌ಎಎಲ್ ಠಾಣಾ ಪೊಲೀಸರು ಮೊಕದ್ದವೆು ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

ಇಬ್ಬರ ಬಂಧನ
‘ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸ್ವಚ್ಛತೆಗೆ ಗುಂಡಿಗೆ ಇಳಿದಿದ್ದ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟ ಪ್ರಕರಣ ಸಂಬಂಧ ಹೊಟೇಲ್ ವ್ಯವಸ್ಥಾಪಕ ಆಯುಷ್ ಗುಪ್ತ, ಕಟ್ಟಡದ ನಿರ್ವಾಹಕ ವೆಂಕಟೇಶ್ ಎಂಬವರನ್ನು ಬಂಧಿಸಿದ್ದು, ತನಿಖೆ ಕೈಗೊಳ್ಳಲಾಗಿದೆ’
-ಅಬ್ದುಲ್ ಅಹದ್ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News